ಕಾಪು: ಕಮಲಕ್ಕೆ ಖುಷಿ, 'ಕೈ' ಕಾರ್ಯಕರ್ತರಿಗೆ ಕಸಿವಿಸಿ!
ಉಡುಪಿ: ಇಲ್ಲಿನ ಕಾಪು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮುಸಿಮುಸಿ ನಗುತ್ತಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರು ಮುಜುಗರದಿಂದ ಕಸಿವಿಸಿಗೊಳ್ಳುತ್ತಿದ್ದಾರೆ!
ಕಾಪು ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಲಾಲಾಜಿ ಮೆಂಡನ್ ಈಗಾಗಲೇ ಪ್ರಚಾರ ನಿರತರಾಗಿದ್ದಾರೆ. ಜೆಡಿಎಸ್ನಿಂದ ವಾಸುದೇವ ರಾವ್ ಅಭ್ಯರ್ಥಿ ಎಂದು ಘೋಷಣೆಯಾಗಿದ್ದಾರೆ, ಕಾಂಗ್ರೆಸ್ನಿಂದ ಇನ್ನೂ ಅಭ್ಯರ್ಥಿ ಯಾರು ಎನ್ನುವ ಘೋಷಣೆ ಬಿಡಿ, ಆಯ್ಕೆಯೇ ಆಗಿಲ್ಲ.
ಯಾರ ಹೆಸರಲ್ಲಿ ಮತ ಕೇಳೋದು?: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಕೇವಲ 3 ದಿನಗಳು ಮಾತ್ರ ಉಳಿದಿವೆ, ಮತದಾನಕ್ಕೆ ಇನ್ನು ಕೇವಲ 20 ದಿನಗಳಿವೆ. ಆದರೆ ತಮ್ಮ ಪಕ್ಷದ ಅಭ್ಯರ್ಥಿ ಯಾರು ಎನ್ನುವುದೇ ಗೊತ್ತಿಲ್ಲ. ಇನ್ನು ಯಾರ ಹೆಸರಿನಲ್ಲಿ ಮತ ಕೇಳುವುದು- ಇದು ಕಾಂಗ್ರೆಸ್ ಕಾರ್ಯಕರ್ತರ ಮುಜುಗರ, ಕಸಿವಿಸಿಗೆ ಕಾರಣವಾಗಿದೆ. ಸಹಜವಾಗಿಯೇ ಎದುರಾಳಿ ಬಿಜೆಪಿಗೆ ಕಾಂಗ್ರೆಸ್ನ ಈ ಸ್ಥಿತಿ ಖುಷಿಗೆ ಕಾರಣವಾಗಿದೆ.
ಗೊಂದಲದ ಗೂಡು: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಅತಿ ಹೆಚ್ಚು 16 ಮಂದಿ ಸ್ಪರ್ಧಾಕಾಂಕ್ಷಿಗಳು ಪಕ್ಷದ ವೀಕ್ಷಕರಿಗೆ ತಮ್ಮ ಹೆಸರು ಸಲ್ಲಿಸಿದ್ದರು. ಅವರಲ್ಲಿ ಕೊನೆಗೆ 7 ಮಂದಿ ಕೆಪಿಸಿಸಿಗೆ ರು. 10 ಸಾವಿರ ಕಟ್ಟಿ ಅರ್ಜಿ ಸಲ್ಲಿಸಿದ್ದರು. ಕೊನೆಗೆ ಅವರಲ್ಲಿ 3- 4 ಮಂದಿ ಹಿಂದಕ್ಕೆ ಸರಿದಿದ್ದಾರೆ, ರೇಸ್ನಲ್ಲಿ 3- 4 ಮಂದಿ ಇದ್ದಾರೆ. ಅವರಲ್ಲಿ ಯಾರು ಅಭ್ಯರ್ಥಿಯಾಗಬೇಕು ಎನ್ನುವ ಗೊಂದಲ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರವಲ್ಲ, ಕೆಪಿಸಿಸಿ, ಎಐಸಿಸಿಗೂ ಇದ್ದ ಹಾಗಿದೆ.
ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ಕಾಪು ಅಭ್ಯರ್ಥಿ ಹೆಸರು ಪ್ರಕಟವಾಗಲಿಲ್ಲ. ಆಗಲೇ ಕಾರ್ಯಕರ್ತರಿಗೆ ಬೇಸರವಾಗಿತ್ತು. 12ರಂದು ಸೋನಿಯಾ ನೇತೃತ್ವದಲ್ಲಿ ಸಭೆ ನಡೆಯಿತು, ಅಲ್ಲೂ ನಿರ್ಣಯವಾಗಲಿಲ್ಲ. ಭಾನುವಾರ ಘೋಷಣೆಯಾಗುತ್ತದೆ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಲಾಯಿತು. ಆದರೆ, ಭಾನುವಾರ ಕೂಡ ಅಭ್ಯರ್ಥಿಯ ಹೆಸರು ಬಹಿರಂಗವಾಗಲೇ ಇಲ್ಲ. ಪ್ರಚಾರಕ್ಕೆ ಹೊರಟಿರುವ ಪಕ್ಷದ ಕಾರ್ಯಕರ್ತರಿಗೆ ಕಸಿವಿಸಿಯಾಗದೇ ಇನ್ನೇನಾದೀತು?
ಗುರ್ಮೆಗಾಗಿ ಇಷ್ಟೆಲ್ಲಾ ಕಸರತ್ತು?
ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ಅಂತಿಮವಾಗಿ ಆಕಾಂಕ್ಷಿಗಳಾಗಿ ರೇಸ್ನಲ್ಲಿರುವವರು ವಿನಯಕುಮಾರ್ ಸೊರಕೆ, ಎಂ.ಎ. ಗಫೂರ್, ವಸಂತ ಸಾಲ್ಯಾನ್, ಸುರೇಶ್ ಶೆಟ್ಟಿ ಗುರ್ಮೆ ಮತ್ತು ಹರೀಶ್ ಕಿಣಿ. ಅವರಲ್ಲಿ ಗಫೂರ್ ಮತ್ತು ಕಿಣಿ ತಮಗೆ ಟಿಕೆಟ್ ಸಿಕ್ಕಿದರೆ ಸಿಕ್ಕೀತು ಎನ್ನುವ ಮನೋಸ್ಥಿತಿಯಲ್ಲಿದ್ದಾರೆ. ಸೊರಕೆಗೆ ಪುತ್ತೂರಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ. ಇನ್ನು 5 ಬಾರಿ ಗೆದ್ದ ಮಾಜಿ ಸಚಿವ ಸಾಲ್ಯಾನ್ ಮತ್ತು ಗಣಿಧನಿ ಗುರ್ಮೆ ನಡುವೆ ಸ್ಪರ್ಧೆ ನಡೆಯುತ್ತಿದೆ.
ಗುರ್ಮೆ ಬಗ್ಗೆ ಎಐಸಿಸಿಯಲ್ಲಿ ಭಾರಿ ಪ್ರಭಾವ ಇದೆ. ಬಿಜೆಪಿಗೆ ಸಡ್ಡು ಹೊಡೆಯುವ ಛಾತಿ ಕೂಡ ಅವರಿದೆ. ಆದರೆ ಅವರೇನು ಕಾಂಗ್ರೆಸ್ನ ಮೂಲ ಕಾರ್ಯಕರ್ತರಲ್ಲ. ಆದ್ದರಿಂದ ಏಕಾಏಕಿ ಅವರಿಗೆ ಟಿಕೆಟ್ ನೀಡಿದರೆ ಆಗಬಹುದಾದ ಗಲಾಟೆಯನ್ನು ಮುಂದೂಡುವುದಕ್ಕಾಗಿ ಗುರ್ಮೆ ಅವರಿಗೆ ಟಿಕೆಟ್ ಘೋಷಣೆಯನ್ನೂ ಮುಂದೂಡಲಾಗುತ್ತಿದೆ ಎನ್ನಲಾಗಿದೆ.
- ಸುಭಾಶ್ಚಂದ್ರ ಎಸ್. ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

