ಶ್ರಮವಿದ್ದರೂ ಫಲವಿಲ್ಲ, ನಿರೀಕ್ಷಿತ ಅನುಷ್ಠಾನವಿಲ್ಲ
ಪುತ್ತೂರು: ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ 27 ವಾರ್ಡ್ಗಳಿದ್ದು ಕಳೆದ ಸುಮಾರು ಏಳೆಂಟು ವರ್ಷಗಳಿಂದ ಪುರಸಭೆಯು ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕಗೊಳಿಸುವುದರೊಂದಿಗೆ ನಗರ ನೈರ್ಮಲ್ಯಕ್ಕಾಗಿ ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಆದರೆ ಇದಾವುದೂ ಈ ತನಕ ಫಲ ನೀಡಿಲ್ಲ. ಮನೆ ಮನೆ ಕಸ ಸಂಗ್ರಹ ಯೋಜನೆ ಬಹುತೇಕ ವಿಫಲವಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯನ್ನು ಹೊರತು ಪಡಿಸಿ ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಪುತ್ತೂರು ಸುಮಾರು 80 ಸಾವಿರಕ್ಕೂ ಅಧಿಕ ಜನವಿರುವ ಪ್ರದೇಶ. ಇಲ್ಲಿನ ಪುರಸಭೆ ವತಿಯಿಂದ ನಗರ ನೈರ್ಮಲ್ಯಕ್ಕಾಗಿ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆದರೆ ಅಧಿಕಾರಿಗಳ ಮತ್ತು ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಅನುಷ್ಠಾನಗೊಳಿಸಲಾದ ಎಲ್ಲ ಯೋಜನೆಗಳೂ ನೀರಿನಲ್ಲಿ ಹುಳಿ ತೊಳೆದಂತಾಗಿದೆ.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾಜೇಶ್ ಬನ್ನೂರು ಸಮಸ್ಯೆ ಕುರಿತು ಹೇಳಿದ್ದಿಷ್ಟು: “2006-07 ರ ಸಾಲಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಕೋರ್ಟ್ ರಸ್ತೆಯಲ್ಲಿ ಮಾದರಿಯಾಗಿ ಪ್ರಥಮ ಬಾರಿಗೆ ಅಂಗಡಿಗಳಿಂದ ಕಸ ಸಂಗ್ರಹಿಸುವ ಯೋಜನೆಯನ್ನು ಆರಂಭಿಸಲಾಯಿತು.
ಬಳಿಕ 2008ರಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಆದರೆ ನಗರದ ಮುಖ್ಯರಸ್ತೆಯ ಕೆಲವು ಭಾಗಗಳಲ್ಲಿ ಕಸ ಸಂಗ್ರಹ ಹೊರತುಪಡಿಸಿದರೆ ಉಳಿದ ಕಡೆಗಳಿಗೆ ಇನ್ನೂ ಯೋಜನೆಯನ್ನು ತಲುಪಿಸಲು ಸಾದ್ಯವಾಗಿಲ್ಲ. ನಗರದಲ್ಲಿ 2 ವಲಯಗಳನ್ನಾಗಿ ವಿಭಾಗ ಮಾಡಿಕೊಂಡು ಇಬ್ಬರು ಖಾಸಗಿ ವ್ಯಕ್ತಿಗಳು ಇದೀಗ ಮನೆ ಮತ್ತು ಅಂಗಡಿಗಳಿಂದ ಕಸ ಸಂಗ್ರಹ ನಡೆಸುತ್ತಿದ್ದಾರೆ. ಆದರೆ ನಮಗೆ ಜನರು ಸಹಕಾರ ನೀಡುತ್ತಿಲ್ಲ.
ಈಗಿರುವ ಸಂಗ್ರಹ ಶುಲ್ಕದಿಂದ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಶುಲ್ಕ ಹೆಚ್ಚುವರಿ ಮಾಡಿದಲ್ಲಿ ನಾವು ಮುನ್ನಡೆಸಿಕೊಂಡು ಹೋಗಬಹುದು. ಕೆಲವು ಕಡೆಗಳಲ್ಲಿ ಜನರು ಕಸ ನೀಡುತ್ತಾರೆ ಆದರೆ ಶುಲ್ಕ ವಸೂಲಿಗೆ ಹೋದರೆ ನೀಡದೆ ಸತಾಯಿಸುತ್ತಾರೆ ಎನ್ನುತ್ತಾರೆ. ವಾಹನ ಬಾಡಿಗೆ, ಕಾರ್ಮಿಕರ ವೇತನ ಪಾವತಿಗೆ ಹಣ ಸಾಲುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡುತ್ತಿದ್ದಾರೆ.
ತ್ಯಾಜ್ಯ ಸಂಗ್ರಹ ಯೋಜನೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ 2009ರಲ್ಲಿ ನಗರದ ಪರ್ಲಡ್ಕ ವ್ಯಾಪ್ತಿಯಲ್ಲಿನ ಜವಾಬ್ದಾರಿಯನ್ನು ಸ್ವ ಸಹಾಯ ಸಂಘಕ್ಕೆ ನೀಡಲಾಗಿತ್ತು.
ಕೆಲ ಕಾಲ ಚೆನ್ನಾಗಿ ಕಸ ವಿಲೇವಾಗಿ ನಡೆಸುತ್ತಿದ್ದರು ಆದರೆ ಬಳಿಕ ಅವರು ಸಂಗ್ರಹವನ್ನು ಸ್ಥಗಿತಗೊಳಿಸಿದ ಕಾರಣ ಆ ಕಾರ್ಯವೂ ನೆನೆಗುದಿಗೆ ಬಿತ್ತು.
ಬಳಿಕ ಇನ್ನೊಂದು ಸ್ವ ಸಹಾಯ ಸಂಘದ ಹೆಸರಿನಲ್ಲಿ ವ್ಯಕ್ತಿಯೊಬ್ಬರು ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಮುಂದಾದರು. ಬಳಿಕ ಅವರೂ ನಷ್ಟ ಅನುಭವಿಸಿರುವುದಾಗಿ ಸಾರ್ವಜನಿಕರ ಎದುರು ತಮ್ಮ ಅಳಲನ್ನು ತೋಡಿಕೊಂಡರು.
ಕಸವಿಲೇವಾರಿ ವಿಚಾರದಲ್ಲಿ ಸಾರ್ವಜನಿಕರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ ಯೋಜನೆಯ ಸಮರ್ಪಕತೆಗೆ ತೊಡಕಾಗುತ್ತಿದೆ. ಜನರು ಅಸಹಕಾರ ತೋರುತ್ತಿರುವುದು,
ಶುಲ್ಕ ನೀಡದೆ ಸತಾಯಿಸುವುದು ಒಂದೆಡೆಯಾದರೆ ಕಾರ್ಮಿಕರ ಕೊರತೆ, ಸರಿಯಾಗಿ ಮನೆಗಳಿಗೆ ಹೋಗದೆ ಕಾರ್ಮಿಕರು ಉದಾಸೀನತೆ ತೋರುತ್ತಿರುವುದು, ಅಧಿಕಾರಿಗಳು ಸರಿಯಾಗಿ ಮೇಲ್ವಿಚಾರಣೆ ನಡೆಸದಿರುವುದೂ ಸಮಸ್ಯೆಗೆ ಕಾರಣವಾಗಿದೆ.
ಪುರಸಭೆಯ ಎಲ್ಲ ಮನೆಗಳಿಂದ ಕಸವನ್ನು ಸರಿಯಾಗಿ ಸಂಗ್ರಹಿಸಬೇಕಾದರೆ ಕನಿಷ್ಟ 20 ಮಂದಿಯಾದರೂ ಕಾರ್ಮಿಕರು ಬೇಕಾಗಿದೆ. ಆದರೆ ಈಗ ಕೇವಲ 9 ಮಂದಿ ಕಾರ್ಮಿಕರು ಮಾತ್ರ ಈ ಕೆಲಸ ಮಾಡುತ್ತಿದ್ದಾರೆ.
6 ಪೌರಕಾರ್ಮಿಕರು 4 ಅಧಿಕಾರಿಗಳು
ಇದೊಂದು ವಿಚಿತ್ರ ಆದರೂ ಸತ್ಯ ಸಂಗತಿ. ಇಲ್ಲಿ ಕೇವಲ 6 ಮಂದಿ ಪೌರಕಾರ್ಮಿಕರಿದ್ದಾರೆ. ಆದರೆ ನೈರ್ಮಲ್ಯದ ಜವಾಬ್ದಾರಿ ಹೊತ್ತಿರುವ ಓರ್ವ ಪರಿಸರ ಎಂಜಿನಿಯರ್, ಓರ್ವ ಹಿರಿಯ ಆರೋಗ್ಯ ನಿರೀಕ್ಷಕರು, ಇಬ್ಬರು ಕಿರಿಯ ಎಂಜಿಯರ್ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳೆಯತ್ತಿರುವ ನಗರದ ಅನುಪಾತಕ್ಕೆ ಅನುಗುಣವಾಗಿ ಪೌರಕಾರ್ಮಿಕರ ನೇಮಕವಾಗಬೇಕಾಗಿದೆ ಎಂಬುದು ಪುರಸಭಾ ಸದಸ್ಯರ ಅಭಿಪ್ರಾಯ. ಈ ನಡುವೆ ನಗರದ ರಸ್ತೆಯಲ್ಲಿದ್ದ ಬಹುತೇಕ ತ್ಯಾಜ್ಯ ತೊಟ್ಟಿಗಳನ್ನು ಪುರಸಭೆಯು ತೆರವುಗೊಳಿಸಿದೆ. ನಗರ ಸೌಂದರ್ಯದ ದೃಷ್ಟಿಯಿಂದ ಹಾಗೂ ನೈರ್ಮಲ್ಯದ ಉದ್ದೇಶದಿಂದ ತೆರವು ನಡೆಸಿರುವುದು ಸರಿಯೆನಿಸಿದರೂ ಸರಿಯಾಗಿ ಕಸ ವಿಲೇವಾರಿಯಾಗದ ಕಾರಣ ನಗರದ ರಸ್ತೆ ಬದಿಗಳಲ್ಲಿ ಈಗಲೂ ಜನರು ಕಸವನ್ನು ಎಸೆಯುತ್ತಿದ್ದಾರೆ. ತೊಟ್ಟಿ ತೆರವು ನಡೆಸಿದ್ದರೂ ಪುತ್ತೂರಿನ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಗಾಂಧಿ ಮಂಟಪದ ಪಕ್ಕದಲ್ಲಿಯೇ 2 ತೊಟ್ಟಿಗಳನ್ನು ಇರಿಸಿರುವುದು ಮಾತ್ರ ಸೋಜಿಗವೆನಿಸಿದೆ.
-ಸಂಶುದ್ದೀನ್ ಸಂಪ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

