ಕ್ರಷರ್ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧಾರ
ಉಡುಪಿ: ರಾಜ್ಯ ಕಲ್ಲು ಹುಡಿ ಮಾಡುವ ಘಟಕ (ಕ್ರಷರ್)ಗಳ ನಿಯಂತ್ರಣ ಕಾಯ್ದೆ 2011ನ್ನು ಉಲ್ಲಂಘಿಸಿ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ 2 ಖಾಸಗಿ ಕ್ರಷರ್ಗಳ ಮೇಲೆ ಸ್ಥಳೀಯ ಗ್ರಾಪಂ, ತಹಸೀಲ್ದಾರ್, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುತ್ತಿರುವ ಸ್ಥಳೀಯ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
2008ರಿಂದ ಕಾರ್ಯಾಚರಿಸುತ್ತಿರುವ ಈ ಎರಡು ಕ್ರಷರ್ಗಳಿಂದ ತೊಂದರೆಗೊಳಗಾಗುತ್ತಿರುವ ಕಲ್ಯಾ ಗ್ರಾಮದ 200ಕ್ಕೂ ಅಧಿಕ ಕುಟುಂಬಗಳು ಹೋರಾಟ ನಡೆಸುತ್ತಿದ್ದು, ಸ್ಥಳೀಯ ಆಶ್ರಮದ ಶ್ರೀಉಮಾಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಜೈಭವಾನಿ ಪರಿಸರ ರಕ್ಷಾ ಸೇವಾ ಸಂಘ ಸ್ಥಾಪಿಸಿ, ಕ್ರಷರ್ಗಳನ್ನು ಅಲ್ಲಿಂದ ಸ್ಥಳಾಂತರಿಸುವಂತೆ 2008ರಿಂದ ಸತತವಾಗಿ ಜಿಲ್ಲಾಡಳಿತ, ಪರಿಸರ ಇಲಾಖೆ, ಪೊಲೀಸ್ ಇಲಾಖೆಗೆ ಮನವಿಗಳ ಮೂಲಕ ಆಗ್ರಹಿಸುತ್ತಿದ್ದಾರೆ. ಇದೀಗ ಮಾಡು ಇಲ್ಲವೇ ಮಡಿ ಹೋರಾಟ ನಡೆಸಲು ನಿರ್ಧರಿಸಿರುವ ಸಂಘ, ಬುಧವಾರ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಅಂತಿಮ ಮನವಿ ಸಲ್ಲಿಸಿದೆ.
ಕಾಯ್ದೆ ಉಲ್ಲಂಘನೆ: ಕ್ರಷರ್ ನಿಯಂತ್ರಣ ಕಾಯ್ದೆಯಂತೆ ಅರಣ್ಯ, ಕೃಷಿ ಭೂಮಿಯಿಂದ 1 ಕಿ.ಮೀ.ನೊಳಗೆ ಕ್ರಷರ್ ಸ್ಥಾಪಿಸುವಂತಿಲ್ಲ, ಆದರೆ ಈ ಕ್ರಷರ್ ಇರುವ ಸ.ನಂ. 160ರ ಅಕ್ಕಪಕ್ಕದಲ್ಲಿ 100 ಮೀ.ನೊಳಗೆ ಬತ್ತದ ಗದ್ದೆ, ಅಡಕೆ ತೋಟ, ಮನೆಗಳಿವೆ. ಆದ್ದರಿಂದ ಈ ಕ್ರಷರ್ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಾಯಲೂ ಸಿದ್ಧ
'ನಾವೀಗ ಈ ಹೋರಾಟದಲ್ಲಿ ಸಾಯುವುದಕ್ಕೂ ಸಿದ್ಧರಾಗಿದ್ದೇವೆ. ಕಲ್ಯಾ ಗ್ರಾಮದಲ್ಲಿ ಪುರಾತನ, ಅನೇಕ ಋಷಿಮುನಿಗಳು ತಪಸ್ಸು ಮಾಡಿದ ಬಹಳ ಧಾರ್ಮಿಕ ಮಹತ್ವ ಇದ್ದ ಗುಹೆಯನ್ನು ಕೂಡ ಈ ಕ್ರಷರ್ ನಾಶ ಮಾಡಿದೆ. ಸ್ಥಳೀಯ ಜನರ ನೆಮ್ಮದಿ, ಆರೋಗ್ಯ ಹಾಳಾಗಿದೆ. ಕ್ರಷರ್ನ ಕಲ್ಲಿನ ಹುಡಿಯಿಂದಾಗಿ ಬತ್ತದ ಗದ್ದೆಗಳು ನಿಷ್ಪ್ರಯೋಜಕವಾಗಿವೆ, ಅಡಕೆ ಮರಗಳು ಸಾಯುತ್ತಿವೆ, ಈಗ ಜಿಲ್ಲಾಡಳಿತ ಈ ಕ್ರಷರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇವೆ.
- ಶ್ರೀಉಮಾಮಹೇಶ್ವರ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷರು
ಆದೇಶಗಳಿಗೆ ಬೆಲೆ ಇಲ್ಲ..
ಪ್ರತಿ ದಿನ ಈ ಕ್ರಷರ್ನಿಂದ 10 ಚಕ್ರಗಳ 40 ಟನ್ ಭಾರದ 40ರಿಂದ 50 ಘನ ವಾಹನಗಳು ಕಲ್ಯಾ ಗ್ರಾಮದ ರಸ್ತೆಗಳಲ್ಲಿ ಸಂಚರಿಸುತ್ತಿವೆ, ರಸ್ತೆ ಪೂರ್ಣ ಹಾಳಾಗಿದ್ದು ಸಂಚಾರ ಕಷ್ಟವಾಗುತ್ತಿದೆ. ಕಾನೂನು, ಸರ್ಕಾರಿ ಅಧಿಕಾರಿಗಳ ಆದೇಶಕ್ಕೆ ಬೆಲೆ ಇಲ್ಲವಾಗಿದೆ.
- ಅರವಿಂದ ರಾವ್, ಸಂಘದ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

