ಉಡುಪಿ

ಉಡುಪಿ: ವೈಭವದ ಕೃಷ್ಣಲೀಲೋತ್ಸವ

Published On :

ಉಡುಪಿ: ದೂರದೂರುಗಳಿಂದ ಬಂದ ಕೃಷ್ಣ ಭಕ್ತರು ಕೃಷ್ಣ ಮಠಕ್ಕೆ ಸಾಗುವ ನಾಲ್ಕೂ ಮಾರ್ಗಗಳನ್ನು ಆಕ್ರಮಿಸಿಕೊಂಡು ರಥಬೀದಿಯತ್ತ ಸಾಗುತ್ತಿದ್ದರು. ಕೃಷ್ಣನ ರಥಬೀದಿಯಲ್ಲಂತೂ ಎಳ್ಳು ಬೀರಿದರೂ ನೆಲಮುಟ್ಟದಷ್ಟು ಜನವೋ ಜನ, ಹುಲಿ ವೇಷಗಳು, ಮಂಗಳವಾದ್ಯ, ಬ್ಯಾಂಡು, ಡೊಳ್ಳು, ಗೊಲ್ಲರ ಮೊಸರು ಕುಡಿಕೆ ಆಟ, ನಡುವೆ ಸಾಗುವ ಕೃಷ್ಣನ ಮೃತ್ತಿಕಾ ವಿಗ್ರಹವನ್ನು ಹೊತ್ತು ಸಾಗುವ ಚಿನ್ನದ ರಥ...
 ಈ ವೈಭವದ ಉತ್ಸವದೊಂದಿಗೆ ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಸೋದೆ ಮಠದ ವತಿಯಿಂದ ಕಳೆದ 8 ದಿನಗಳಿಂದ ವೈವಿಧ್ಯಮಯವಾಗಿ ಆಚರಿಸಲ್ಪಡುತ್ತಿದ್ದ ಶ್ರೀ ಕೃಷ್ಣ ಜಯಂತಿ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.
 ಬುಧವಾರ ಮಧ್ಯರಾತ್ರಿ ಕಳೆದ 12.10 ಗಂಟೆಗೆ ಚಂದ್ರೋದಯ ಕಾಲದಲ್ಲಿ ಒದಗಿದ ಕೃಷ್ಣನ ಅವತಾರದ ಗಳಿಗೆಯಲ್ಲಿ ಪರ್ಯಾಯ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥರು ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಅವರ ನಂತರ ಮಠದ ಅಧಿಕಾರ ವರ್ಗದವರು ಮತ್ತು ಮಾಧ್ವ ಗಣ್ಯರು ಅರ್ಘ್ಯ ಪ್ರದಾನ ಮಾಡಿದರು. ಇದು ಮಠದೊಳಗೆ ನಡೆಯುವ ಕೃಷ್ಣನ ಜಯಂತಿಯ ಆಂತರಿಕ ಸಂಪ್ರದಾಯಿಕ ಆಚರಣೆಯಾಗಿದೆ.
ಲೀಲೋತ್ಸವ: ಕೃಷ್ಣನ ಭಕ್ತರಿಗಾಗಿ ಗುರುವಾರ ರಥಬೀದಿಯಲ್ಲಿ ಬಹಿರಂಗವಾಗಿ ಕೃಷ್ಣ ಲೀಲೋತ್ಸವ ನಡೆಯಿತು. ಮಧ್ಯಾಹ್ನ ಸುಮಾರು 3 ಗಂಟೆಗೆ ಆರಂಭವಾದ ಬಾಲ ಕೃಷ್ಣನ ಲೀಲೆಗಳನ್ನು ಪ್ರದರ್ಶಿಸುವ ಈ ಲೀಲೋತ್ಸವ ಯಾನೆ ಮೊಸರು ಕುಡಿಕೆ ಉತ್ಸವ ಯಾನೆ ವಿಠಲ ಪಿಂಡಿ ಉತ್ಸವ ಉಡುಪಿಯ ಮಟ್ಟಿಗೆ ಒಂದು ನಾಡಹಬ್ಬವೇ ಆಗಿತ್ತು.
 ಬಾಲ್ಯದಲ್ಲಿ ಕೃಷ್ಣ ತನ್ನ ಸಹಚರ ಗೊಲ್ಲರೊಂದಿಗೆ ಬೆಣ್ಣೆ, ಮೊಸರು, ಕಜ್ಜಾಯಗಳನ್ನು ಕದ್ದು ತಿನ್ನುವುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಗೊಲ್ಲರ ವೇಷಧಾರಿಗಳು ಎತ್ತರದಲ್ಲಿ ನೇತಾಡಿಸುವ ಮೊಸರು, ಓಕುಳಿ ನೀರಿನ ಮಣ್ಣಿನ ಕುಡಿಕೆಗಳನ್ನು ದೊಡ್ಡ ಕೋಲುಗಳಿಂದ ಒಡೆಯುವ ಪ್ರದರ್ಶನ ಈ ಉತ್ಸವದ ಆಕರ್ಷಣೆಯಾಗಿತ್ತು.
ಮಣ್ಣಿನ ವಿಗ್ರಹದ ಮೆರವಣಿಗೆ: ಇದರೊಂದಿಗೆ ಪ್ರಧಾನ ಆಕರ್ಷಣೆ, ಕೃಷ್ಣನ ಮಣ್ಣಿನ ವಿಗ್ರಹದ ಮೆರವಣಿಗೆ. ಮಳೆಗಾಲದಲ್ಲಿ (ದೇವರು ಈ ಕಾಲದಲ್ಲಿ ಮಲಗುತ್ತಾನೆ ಎಂಬ ನಂಬಿಕೆಯಿಂದ) ಉತ್ಸವಾದಿಗಳು ನಡೆಯುವುದಿಲ್ಲ. ಆದ್ದರಿಂದ ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣನ ಉತ್ಸವ ಮೂರ್ತಿಗೆ ರಥಾರೋಹಣ ಮಾಡಲಾಗುವುದಿಲ್ಲ. ಮೂಲ ಕೃಷ್ಣನ ವಿಗ್ರಹ ಗೇಣುದ್ದ ಮಣ್ಣಿನ ಪ್ರತಿರೂಪವನ್ನು ತಯಾರಿಸಿ ಅದನ್ನು ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿಸಲಾಯಿತು.  
 ಈ ಮೆರವಣಿಗೆಯ ಸಂದರ್ಭದಲ್ಲಿ ಪರ್ಯಾಯ ಮತ್ತು ಇತರ ಮಠಾಧೀಶರು ರಥದ ಮೇಲೆ ನಿಂತು ಕೃಷ್ಣನಿಗೆ ಸಮರ್ಪಿಸಿದ ಲಡ್ಡು, ಚಕ್ಕುಲಿ, ಹೂವು, ನಾಣ್ಯ, ಹಣ್ಣುಗಳನ್ನು ನೆರೆದ ಭಕ್ತ ಜನರ ಮೇಲೆ ಎರಚಿದರು. ಅದನ್ನು ಪಡೆಯಲು ಭಕ್ತರು ನಾಮುಂದು ತಾಮುಂದು ಎಂದು ಸ್ಪರ್ಧೆ ನಡೆಸುತ್ತಿದ್ದರು.
 ಉತ್ಸವದ ಕೊನೆಗೆ ಕೃಷ್ಣನ ಮಣ್ಣಿನ ವಿಗ್ರಹವನ್ನು ಸಂಪ್ರದಾಯದಂತೆ ಮಧ್ವ ಸರೋವರದಲ್ಲಿ ವಿಸರ್ಜನೆ ಪರ್ಯಾಯ ಶ್ರೀಗಳು ವಿಸರ್ಜನೆ ಮಾಡಿದರು.
ಅಲ್ಲಿಗೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ನಡೆದ ಈ ಬಾರಿಯ ಕೃಷ್ಣ ಲೀಲೋತ್ಸವ ಸಮಾಪನಗೊಂಡಿತು.
 ಸಾಕ್ಷಿಯಾದ ಶಿವ...
ಈ ಬಾರಿ ಕೃಷ್ಣನ ಚಿನ್ನದ ರಥದ ಜೊತೆಗೆ ಪ್ರಥಮ ಬಾರಿಗೆ ಅನಂತೇಶ್ವರ ದೇವಾಲಯದ ಈಶ್ವರ ದೇವರ ಉತ್ಸವ ಮೂರ್ತಿಗೂ ಇನ್ನೊಂದು ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಇದರೊಂದಿಗೆ ರಥಬೀದಿಯಲ್ಲಿ ಅಪೂರ್ವ ಮಾಧ್ವ - ಶೈವರ ಸಂಗಮವಾಯಿತು.
 ಬಿಗಿ ಬಂದೋಬಸ್ತ್
ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ವತಃ ಎಸ್ಪಿ ಡಾ. ಬೋರಲಿಂಗಯ್ಯ ಅವರೇ ಉಸ್ತುವಾರಿ ವಹಿಸಿಕೊಂಡಿದ್ದರು. ವಿಶೇಷ ಎಂದರೆ ಐಜಿಪಿ ಪ್ರತಾಪ್ ರೆಡ್ಡಿ ಅವರು ಕುಟುಂಬ ಸಮೇತ ಕೃಷ್ಣ ಲೀಲೋತ್ಸವ ವೀಕ್ಷಣೆಗೆ ಆಗಮಿಸಿದ್ದರು.
ಆತಂಕಕ್ಕೆ ಕಾರಣವಾಗಿದ್ದ ಶಿರೂರು ಶ್ರೀಗಳ ಮಾತು
ಸೋದೆ ಮತ್ತು ಶಿರೂರು ಮಠದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಕಳೆದ ಬಾರಿ ಶಿರೂರು ಶ್ರೀಗಳು ಪ್ರತ್ಯೇಕ ರಥೋತ್ಸವ ನಡೆಸಿದ್ದರು. ಈ ಬಾರಿಯೂ ಏನೋ ಮಾಡುತ್ತೇನೆ ಎಂದು ಒಗಟಾಗಿ ಹೇಳಿ, ಸೋದೆ ಮಠ, ಪೊಲೀಸ್ ಇಲಾಖೆಗೆ ಆತಂಕಕ್ಕೆ ಕಾರಣರಾಗಿದ್ದರೂ, ಅಂತಹದೇನೂ ಮಾಡಲಿಲ್ಲ.
 ಶಾಸಕರು, ಗಣ್ಯರ ಗೈರು
ಸೋದೆ ಶ್ರೀಗಳೊಂದಿಗೆ ಗುರುಗಳಾದ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಉತ್ಸವದಲ್ಲಿ ಭಾಗವಹಿಸಿದ್ದರು. ಉಳಿದ ಮಠಾಧೀಶರು ಚಾರ್ತುಮಾಸ್ಯದ ಕಾರಣ ಉಡುಪಿಯಿಂದ ಹೊರಗಿದ್ದಾರೆ. ಆದರೆ ಈ ಬಾರಿ ಉಡುಪಿ ಶಾಸಕರು ಮತ್ತು ಇತರ ಗಣ್ಯರು ಭಾಗವಹಿಸದಿದ್ದದ್ದು ಗಮನಾರ್ಹವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.