ಕಲ್ಲು ಕ್ರಷರ್ ಮುಚ್ಚಲು ಆಗ್ರಹ: ನಾಲ್ಕೂರು ಗ್ರಾಮಸ್ಥರ ಪ್ರತಿಭಟನೆ
ಮಣಿಪಾಲ: ಉಡುಪಿ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಚಾರು ಮತ್ತು ನಾಲ್ಕೂರು ಗ್ರಾಮಗಳಲ್ಲಿ ಕಾರ್ಯಾಚರಿಸುತ್ತಿರುವ 3 ಕಲ್ಲು ಕ್ರಷರ್ಗಳಿಂದಾಗಿ ತೊಂದರೆಗೊಳಗಾಗುತ್ತಿರುವ ಸ್ಥಳೀಯ ಸಾವಿರಾರು ಮಂದಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಈ ಕ್ರಷರ್ಗಳನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನ. 21ರಂದು ಈ ಕ್ರಷರ್ಗಳ ವಿರುದ್ಧ ನಾಲ್ಕೂರು ಗ್ರಾ.ಪಂ. ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ನ. 22ರಂದು ತುರ್ತು ಸಭೆ ನಡೆಸಿ, ಕ್ರಷರ್ಗಳ ವಿರುದ್ಧ ನಿರ್ಣಯವನ್ನು ಕೈಗೊಂಡು ಸಂಬಂಧಿತ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು.
ನಾಲ್ಕೂರು - ನಂಚಾರು ಗ್ರಾಮಗಳ ರಸ್ತೆಗಳಲ್ಲಿ ಈ ಕ್ರಷರ್ನ ಭಾರಿ ವಾಹನಗಳ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ, ಸೇತುವೆಗಳು ಶಿಥಿಲಗೊಂಡಿವೆ. ಧೂಳಿನಿಂದ ಉಸಿರಾಡುವುದು ಕಷ್ಟವಾಗಿದೆ. ಈ ರಸ್ತೆಯಲ್ಲಿ ಕ್ರಷರ್ನ ವಾಹನಗಳ ಓಡಾಟದ ಮಧ್ಯೆ ವಯಸ್ಸಾದವರಿಗೆ ಮತ್ತು ಶಾಲಾ ಮಕ್ಕಳಿಗೆ ಸಂಚರಿಸುವುದೇ ದುಸ್ತರವಾಗಿದೆ. ಈ ಕ್ರಷರ್ಗಳು ಪರವಾನಗಿ ಮೀರಿ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಸುತ್ತಿದೆ. ಇದರಿಂದ ಈಗಾಗಲೇ ಸ್ಥಳೀಯ ಅನೇಕ ದನಕರುಗಳು ಸಾವನ್ನಪ್ಪಿವೆ. ದಿನ 24 ಗಂಟೆಯೂ ಕಾರ್ಯಾಚರಿಸುವ ಕ್ರಷರ್ಗಳ ಭಾರಿ ಶಬ್ದದಿಂದ ಸ್ಥಳೀಯ ಜನರು ರಾತ್ರಿ ಹೊತ್ತು ನಿದ್ರೆ ಮಾಡುವುದಕ್ಕಾಗುತ್ತಿಲ್ಲ. ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಜಯಪ್ರಕಾಶ್ ಹೆಗ್ಡೆ ಬೆಂಬಲ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕ ಮುಖಂಡ ಪ್ರವೀಣ್ ಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹರಿಮಕ್ಕಿ ರತ್ನಾಕರ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ನಾಲ್ಕೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಶೆಟ್ಟಿ, ಸ್ಥಳೀಯ ನಾಯಕರಾದ ಸಂತೋಷ್ ಹೆಗ್ಡೆ, ಪ್ರಕಾಶ್, ಶುವರಾಜ್ ಗೌಡ, ಮಂಜುನಾಥ ಕೋಟ್ಯಾನ್ ಮುಂತಾದವರು ಇದ್ದರು.
ಈ ಮೂರು ಕ್ರಷರ್ಗಳಿರುವ ಪ್ರದೇಶವನ್ನು ಸುರಕ್ಷಿತ ಕ್ರಷರ್ ವಲಯ ಎಂದು ಘೋಷಿಸಲಾಗಿದೆ. ಆದರೆ, ಈ ರೀತಿ ಘೋಷಣೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಗಾಳಿಗೆ ತೂರಲಾಗಿದೆ. ಗಣಿ ಮಾಲೀಕರು ಗ್ರಾಮ ಪಂಚಾಯಿತಿನಿಂದ ಕನಿಷ್ಠ ಪರವಾನಗಿ ಪಡೆದಿಲ್ಲ. ಈ ಕ್ರಷರ್ಗಳನ್ನು ನಿಲ್ಲಿಸುವಂತೆ ನ್ಯಾಯಾಲಯದ ಆದೇಶ ಇದ್ದರೂ, ಅದನ್ನು ಪಾಲಿಸಲಾಗಿಲ್ಲ. ಇದಕ್ಕೆ ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಈ ಕ್ರಷರ್ ಮಾಲೀಕರ ಪರವಾಗಿರುವುದೇ ಕಾರಣವಾಗಿದೆ. ಜಿಲ್ಲಾಧಿಕಾರಿ ತಕ್ಷಣ ಈ ಕ್ರಷರ್ ಮುಚ್ಚುವುದಕ್ಕೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಕ್ರಷರ್ಗೆ ಮುತ್ತಿಗೆ ಹಾಕಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

