ಎಚ್ಪಿಸಿಎಲ್ ಸ್ಥಾವರದಲ್ಲಿ ಮುಷ್ಕರ; ವಿವಿಧೆಡೆಗೆ ಅನಿಲ ಪೂರೈಕೆ ಅಡಚಣೆ
ಮೂಲ್ಕಿ: ಸುರತ್ಕಲ್ ಸಮೀಪದ ಬಾಳದ ಎಚ್ಪಿಸಿಎಲ್ ಸ್ಥಾವರದಲ್ಲಿ ಸ್ಥಳೀಯ ಕಾರ್ಮಿಕರು ನಡೆಸುತ್ತಿರುವ ಮುಷ್ಕರದಿಂದಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಎಲ್ಪಿಜಿ ಅಡುಗೆ ಅನಿಲ ಪೂರೈಕೆಗೆ ತೊಂದರೆಯಾಗಿದೆ. ಮುಷ್ಕರ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಕಾರಣ: ಟ್ಯಾಂಕರ್ ಕ್ಲೀನಿಂಗ್ ಮತ್ತು ಫಿಲ್ಲಿಂಗ್ ಕೆಲಸದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ 140ರಷ್ಟು ಸ್ಥಳೀಯ ಕಾರ್ಮಿಕರ ಸೇವೆ ನಿರಾಕರಿಸಿ ದಾಖಲೆ ರಹಿತ ಹೊರರಾಜ್ಯದ ಕ್ಲೀನರ್ಗಳನ್ನು ಬಳಸುತ್ತಿರುವ ವಿರುದ್ಧ ಕಳೆದ ತಿಂಗಳಿನಿಂದ ನಡೆಯುತ್ತಿರುವ ಮುಷ್ಕರ ಇದೀಗ ತೀವ್ರಗೊಂಡಿದೆ. ಹಿಂದೆ ದಿನಕ್ಕೆ 240ರಷ್ಟು ಟ್ಯಾಂಕರ್ಗಳಿಗೆ ಗ್ಯಾಸ್ ತುಂಬಿಸುತ್ತಿದ್ದರೆ, ಮುಷ್ಕರದಿಂದ ಕೇವಲ 50ರಿಂದ 75ರವರೆಗೆ ಸೀಮಿತವಾಗಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಪ್ರದೇಶಗಳಿಗೆ ಅನಿಲ ಸಾಗಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ.
ಹಿನ್ನೆಲೆ ಏನು?: ತಿಂಗಳುಗಳ ಹಿಂದೆ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ 11 ಮಂದಿಯ ಜೀವ ತೆಗೆದುಕೊಂಡ ಗ್ಯಾಸ್ ಟ್ಯಾಂಕರ್ ಘಟನೆಯ ಬಳಿಕ ಜಿಲ್ಲಾಡಳಿತ ಆದೇಶ ಹೊರಡಿಸಿ ಟ್ಯಾಂಕರ್ಗಳಲ್ಲಿ ಕಡ್ಡಾಯವಾಗಿ ಚಾಲಕರು ಮಾತ್ರವಲ್ಲ ಕ್ಲೀನರುಗಳೂ ಇರಬೇಕು ಎಂದು ಆದೇಶ ಹೊರಡಿಸಿದ್ದು ಹೊರ ರಾಜ್ಯದ ಟ್ಯಾಂಕರ್ಗಳ ಚಾಲಕರು ತಾವೇ ಕ್ಲೀನರ್ಗಳನ್ನು ಕರೆತರುತ್ತಿದ್ದುದರಿಂದ ಸ್ಥಾವರದಲ್ಲಿರುವ 140 ಮಂದಿ ಅತಂತ್ರರಾಗಿದ್ದಾರೆ.
ಮನವಿ ಸಲ್ಲಿಕೆ ನಿರ್ಧಾರ: ಆದರೆ ಕೆಲಸ ಕಳಕೊಂಡ 140 ಮಂದಿ ಕಾರ್ಮಿಕರು ಮುಷ್ಕರ ನಡೆಸುತ್ತಿಲ್ಲ. ಬದಲಿಗೆ, ಹೊರರಾಜ್ಯದ ಕ್ಲೀನರ್ಗಳಿಗೆ ತಮ್ಮ ನೇಮಕದ ವೇಳೆ ನಡೆಸಿದ ಮಾನದಂಡ ಅನುಸರಿಸಬೇಕು, ದಾಖಲೆ ಇಲ್ಲದವರನ್ನು ಒಳಗಡೆ ಬಿಡಬಾರದು, ಕಿಡಿಗೇಡಿಗಳು, ಭಯೋತ್ಪಾದಕರು ಸ್ಥಾವರ ಪ್ರವೇಶಿಸುವುದಿಲ್ಲ ಎಂಬುದಕ್ಕೇನು ಗ್ಯಾರಂಟಿ? ಎಂದು ಮುಷ್ಕರ ನಡೆಸುತ್ತಿದ್ದಾರೆ.
ಇಂಧನ ಸಚಿವ ವೀರಪ್ಪ ಮೊಯ್ಲಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಎಂಆರ್ಪಿಎಲ್ಗೆ ಶನಿವಾರ ಬರಲಿರುವ ಸಚಿವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಮುಷ್ಕರದಿಂದ ಅನಿಲ ಸಾಗಾಟಕ್ಕೆ ಧಕ್ಕೆಯಾಗಿಲ್ಲ. ಸ್ಥಳೀಯರಿಗೆ ಕೆಲಸ ನಿರಾಕರಿಸುವ ಮೂಲಕ ಎಚ್ಪಿಸಿಎಲ್ ಅಧಿಕಾರಿಗಳು ಉಗ್ರ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಇಂಟಕ್ ಆಕ್ರೋಶ ವ್ಯಕ್ತಪಡಿಸಿದೆ.
ಸ್ಥಳದಲ್ಲಿ ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ಬಿಗುಬಂದೋಬಸ್ತು ಏರ್ಪಡಿಸಿದ್ದು ಘಟನೆಯ ಕಾರಣ ಸುರತ್ಕಲ್ನ ಬಾಳ ಬಳಿ ಸುಮಾರು 800 ಟ್ಯಾಂಕರರ್ಗಳು ಬೀಡುಬಿಟ್ಟಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

