ಬ್ಯಾಡ್ಮಿಂಟನ್ ಟೂರ್ನಿ: ಮಣಿಪಾಲ, ಮಂಗಳೂರು ವಿವಿಗೆ ಮುನ್ನಡೆ
ಮಣಿಪಾಲ: ಇಲ್ಲಿನ ಮಣಿಪಾಲ ವಿವಿಯ ಆಶ್ರಯದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ, ಸೋಮವಾರ ಮೊದಲ ದಿನ ಅತಿಥೇಯ ಮಣಿಪಾಲ ವಿವಿ ಮತ್ತು ಮಂಗಳೂರು ವಿವಿಗಳು ಪುರುಷರ ಮತ್ತು ಮಹಿಳಾ ವಿಭಾಗಗಳೆರಡರಲ್ಲಿಯೂ ದ್ವಿತೀಯ ಸುತ್ತಿಗೇರಿವೆ. ಮಣಿಪಾಲ ವಿವಿಯ ಮರಿನಾ ಒಳಾಂಗಣ ಅಂಕಣದಲ್ಲಿ ನಡೆದ ಪಂದ್ಯದ ಪುರುಷರ ವಿಭಾಗದಲ್ಲಿ ಮಣಿಪಾಲ ವಿವಿಯ ತಂಡ ವಿಜಯನಗರ ಕೃಷ್ಣದೇವರಾಯ ವಿವಿಯ ತಂಡವನ್ನು 3- 0 ಅಂತರದಲ್ಲಿ ಸುಲಭವಾಗಿ ಸೋಲಿಸಿದರೇ, ಅಷ್ಟೇ ಸುಲಭವಾಗಿ ಮಂಗಳೂರು ವಿವಿಯ ತಂಡ ಕೇಂದ್ರೀಯ ವಿವಿಯ ತಂಡವನ್ನು ಸೋಲಿಸಿ ಮುಂದಿನ ಸುತ್ತನ್ನು ಪ್ರವೇಶಿಸಿದವು. ಮಹಿಳೆಯ ವಿಭಾಗದಲ್ಲಿಯೂ ಮಣಿಪಾಲ ಮತ್ತು ಮಂಗಳೂರು ತಂಡಗಳು ಆಟವಾಡದೇ 2ನೇ ಸುತ್ತಿಗೇರುವ ಅದೃಷ್ಟ ಪಡೆದವು. ಯಾಕೆಂದರೆ ಈ ತಂಡಗಳೆದುರು ಆಡಬೇಕಾಗಿದ್ದ ಕ್ರಮವಾಗಿ ಕೇರಳದ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿವಿ ಮತ್ತು ತಮಿಳುನಾಡಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿವಿ ತಂಡಗಳು ಗೈರು ಹಾಜರಾಗಿದ್ದವು. ಒಟ್ಟು 3 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಮಂಗಳವಾರ ಮುಂದಿನ ಸುತ್ತಿನ ಮತ್ತು ಬುಧವಾರ ಅಂತಿಮ ಸುತ್ತಿನ ಪಂದ್ಯಗಳು ನಡೆಯಲಿವೆ.
ಇಂದು ವೈದ್ಯಕೀಯ ತಪಾಸಣೆ
ಗಂಗೊಳ್ಳಿ: ಮೀನುಗಾರರ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೀನುಗಾರ ಸಮುದಾಯವರಿಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವು ಮಂಗಳವಾರ ಗಂಗೊಳ್ಳಿಯ ಬಂದರು ವಠಾರದಲ್ಲಿರುವ ಮೀನುಗಾರಿಕಾ ಸೊಸೈಟಿ ಆವರಣದಲ್ಲಿ ನಡೆಯಲಿದೆ. ಮೀನುಗಾರ ಸಮುದಾಯದವರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ನಿರೀಕ್ಷಕ ತಾರಾನಾಥ್ ಪ್ರಕಟಣೆ ಮೂಲಕ ಕೋರಿದ್ದಾರೆ.
ಪಶ್ಚಿಮಘಟ್ಟದಲ್ಲಿ ಅಗ್ನಿಜ್ವಾಲೆ
ಬೆಳ್ತಂಗಡಿ: ಪಶ್ಚಿಮಘಟ್ಟದ ಕಾಡಿನಲ್ಲಿ ಸೋಮವಾರ ರಾತ್ರಿ ಬೆಂಕಿಯ ಮಾಲೆ ಕಾಣಿಸಿಕೊಂಡಿದ್ದು, ಅನೇಕ ಬೆಲೆಬಾಳುವ ಮರಗಳು, ಪ್ರಾಣಿ ಪಕ್ಷಿಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರತಿವರ್ಷ ಡಿಸೆಂಬರ್, ಜನವರಿ ತಿಂಗಳಲ್ಲಿ ಘಟ್ಟದ ದಟ್ಟ ಕಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಂಡುಬರುವುದು ಮಾಮೂಲಾಗಿದೆ. ಈ ಬೆಂಕಿ ದೂರಕ್ಕೆ ಮಾಲೆಯಂತೆ ಕಾಣುತ್ತದೆ. ಇದು ಕಾಡ್ಗಿಚ್ಚೋ ಅಥವಾ ಸ್ಥಳೀಯರು ಬಿದಿರು ಬೆತ್ತಕ್ಕೋಸ್ಕರ ಕಾಡಿಗೆ ಬೆಂಕಿ ಇಡುವುದೋ ಎಂದು ಪರಿಶೀಲಿಸುವ ಅಗತ್ಯವಿದೆ. ಅರಣ್ಯ ಇಲಾಖೆ ಈ ಕುರಿತು ಪ್ರತಿವರ್ಷ ಮೌನ ವಹಿಸುತ್ತದೆ. ಕಾಡಿನಲ್ಲಿ ಬೆಂಕಿ ಕಂಡಾಕ್ಷಣ ಸನಿಹದ ಹಳ್ಳಿಗಳಲ್ಲಿ ಚಳಿಯ ಪ್ರಮಾಣ ಏರುತ್ತಿದೆ. ಬೆಂಕಿಯಿಂದ ವನ್ಯಪ್ರಾಣಿಗಳ ಓಡಾಟಕ್ಕೂ ತೊಂದರೆಯುಂಟಾಗುತ್ತದೆ.
ಎಸ್ಎಫ್ಸಿ ನಿಧಿ ಬಿಡುಗಡೆ
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ 2013-14ನೇ ಸಾಲಿನಲ್ಲಿ ಎಸ್.ಎಫ್.ಸಿ. ನಿಧಿ ಯೋಜನೆಯಡಿ ರು. 534 ಲಕ್ಷ ಮಂಜೂರಾಗಿದ್ದು, ಈ ನಿಧಿಯ ಕಾಮಗಾರಿಗಳು ಶೀಘ್ರ ಕಾರ್ಯಾರಂಭವಾಗಲಿವೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ನಗರಸಭಾ ಅಧ್ಯಕ್ಷ ಯುವರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿತ್ರ ಬಿಡಿಸುವ ಸ್ಪರ್ಧೆ
ಉಡುಪಿ: ಇಲ್ಲಿನ ಕಲ್ಸಂಕದ ರಾಯಲ್ ಗಾರ್ಡನ್ನಲ್ಲಿರುವ ಶ್ರೀಓಂ ಆಯುರ್ವೇದಿಕ್ ಸಂಸ್ಥೆಯಲ್ಲಿ ಧನ್ವಂತರಿ ಜಯಂತಿ ಪ್ರಯುಕ್ತ ಮಕ್ಕಳಿಗಾಗಿ 'ಧ್ವನ್ವಂತರಿ ಅವತಾರ' ಎಂಬ ವಿಷಯದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಜಿ. ಶಂಕರ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಜ್ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ವೈದ್ಯ ಡಾ.ಡಿ. ಕೃಷ್ಣಮೂರ್ತಿ ಸ್ವಾಗತಿಸಿ, ವಂದಿಸಿದರು. ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಶ್ರೀನಿಧಿ ಆಚಾರ್ಯ (ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ), ಶ್ರೀನಿಧಿ ಶೇಟ್ (ಮುಕುಂದ ಕೃಪಾ ಶಾಲೆ), ಸಮಾಧಾನಕರ ಬಹುಮಾನ- ನಿರೀಕ್ಷಾ ಆಚಾರ್ಯ (ಸೈಂಟ್ ಸಿಸಿಲಿಸ್ ಆಂಗ್ಲ ಮಾಧ್ಯಮ ಶಾಲೆ) ಹಾಗೂ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಶ್ರೀಶ ಎನ್. (ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆ), ದ್ವಿತೀಯ ಆದರ್ಶ ಭಟ್ (ಮುಕುಂದ ಕೃಪಾ ಶಾಲೆ) ಬಹುಮಾನ ಗೆದ್ದುಕೊಂಡರು.
ಪ್ರಾಂತೀಯ ಹಿಂದೂ ಅಧಿವೇಶನ
ಉಡುಪಿ: ಇಂದಿನ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ಯಮದ ಪ್ರಭಾವದಿಂದ ಸುಮಾರು ಶೇ. 10ರಷ್ಟು ಜನರು ಧರ್ಮಾಚರಣೆಯಿಂದ ದೂರ ಹೋಗುತ್ತಿದ್ದಾರೆ ಎಂದು ಕಾರ್ಕಳ ತಾಲೂಕಿನ ಎರ್ಲಪಾಡಿಯ ಶ್ರೀರಾಮಕೃಷ್ಣಾಶ್ರಮದ ಶ್ರೀವಿನಾಯಕಾನಂದಾ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿ, ಇದನ್ನು ತಡೆಯುವುದಕ್ಕೆ ಸಂಘಟಿತ ಪ್ರಯತ್ನಗಳಾಗಬೇಕು ಎಂದು ಹೇಳಿದರು. ಅವರು ಇತ್ತೀಚೆಗೆ ಉಡುಪಿಯಲ್ಲಿ ನಡೆದ ಪ್ರಾಂತೀಯ ಹಿಂದೂ ಅಧಿವೇಶನವನ್ನು ಉದ್ಘಾಟಿಸಿದರು. ನಂತರ ಅವರು ಸಮಾತನ ಸಂಸ್ಥೆಯ ಸಂಸ್ಥಾಪಕ ಡಾ. ಜಯಂತ ಅಠವಲೆ ಅವರ ಗ್ರಂಥವನ್ನು ಬಿಡುಗಡೆ ಮಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿಂದೂ ಜನಜಾಗೃತಿ ಸಮಿತಿಯ ರಮಾನಂದ ಗೌಡ, ಪ್ರೊ. ಶಾಂತಾರಾಮ್ ಭಂಡಾರ್ಕರ್, ಭಾರತ್ ಸ್ವಾಭಿಮಾನ್ ಟ್ರಸ್ಟಿನ ಜಿಲ್ಲಾ ಸಂರಕ್ಷಕ ರಾಘವೇಂದ್ರ ಆಚಾರ್ಯ, ಕುಂದಾಪುರದ ಹಿಂದುತ್ವವಾದಿ ವಕೀಲರ ಸಂಘದ ರಾಮದಾಸ್ ನಾಯಕ್ ಮಾತನಾಡಿದರು.
ಗ್ರಂಥಾಲಯ ಸಹವರ್ತಿ ಬೀಳ್ಕೊಡುಗೆ
ಉಡುಪಿ: ಜಿಲ್ಲಾ ಕೇಂದ್ರ ಗ್ರಂಥಾಲಯದ ಕುಂದಾಪುರ ಶಾಖೆಯಲ್ಲಿ ಗ್ರಂಥಾಲಯ ಸಹವರ್ತಿ ಯಾಗಿ 29 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸೀತಾದೇವಿ ಪಿ. ನ.30ರಂದು ವಯೋನಿವೃತ್ತಿ ಹೊಂದಿದ್ದು, ಅವರನ್ನು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಸಿಬ್ಬಂದಿ ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಬೀಳ್ಕೊಟ್ಟರು. ಮುಖ್ಯ ಗ್ರಂಥಾಲಯಾಧಿಕಾರಿ ವೆಂಕಟೇಶ್ ಸಿ.ಜೆ. ಸೀತಾದೇವಿ ಸೇವೆಯನ್ನು ಸ್ಮರಿಸಿದರು. ಗ್ರಂಥಾಲಯ ಸಹಾಯಕ ಜಗದೀಶ್ ಭಟ್ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕಿ ಶಕುಂತಲ ಕುಂದರ್ ನಿರೂಪಿಸಿ, ವಂದಿಸಿದರು.
ಪದಾಧಿಕಾರಿಗಳ ಆಯ್ಕೆ
ಕೋಟ: ಭಾರತ ವಿಕಾಸ ಪರಿಷತ್ನ ದಕ್ಷಿಣ ಪ್ರಾಂತದ 'ಪರಶುರಾಮ ಶಾಖೆ' ಅಧ್ಯಕ್ಷರಾಗಿ ಕೋಟೇಶ್ವರ ಗ್ರಾ.ಪಂ. ಸದಸ್ಯ ಕೆ. ಸುಖೇಶ ಶೇಟ್ ಅಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಬಿ. ಲಕ್ಷ್ಮೀನಾರಾಯಣ ಉಪಾದ್ಯಾಯ, ಉಪಾಧ್ಯಾಕ್ಷರಾಗಿ ರಮೇಶ ಶೇಟ್ ಮತ್ತು ಶಿವರಾಮ ಪೂಜಾರಿ, ಕಾರ್ಯದರ್ಶಿಯಾಗಿ ಯೋಗೀಶ್ ಜೋಗಿ, ಜೊತೆ ಕಾರ್ಯದರ್ಶಿಯಾಗಿ ಕೇಶವ ಆಚಾರ್ಯ, ಕೋಶಾಧಿಕಾರಿಯಾಗಿ ಮಂಜುನಾಥ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಬ್ರಮಣ್ಯ ಶೆಟ್ಟಿ, ಭಾಸ್ಕರ ಪೂಜಾರಿ ಗೋಪಾಡಿ, ಸಂತೋಷ ಕೋಣಿ, ಸಂತೋಷ ಪೂಜಾರಿ, ವೀರ ನಾರಾಯಣ, ಜಗದೀಶ ಆಚಾರ್ಯ, ವೀರೇಶ್, ಸತೀಶ್ ಆಚಾರ್ಯ, ಬಿ.ಎಂ. ಗುರುರಾಜ್ ರಾವ್, ಮೋಹನ್ ಆಚಾರ್ಯ, ಯೋಗಿಶ್ ದೇವಾಡಿಗ ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

