ಉಡುಪಿ

ಜೆಡಿಎಸ್‌ನಿಂದ ಹೆದ್ದಾರಿ ಬಂದ್

Published On :

ಉಡುಪಿ: ಕಳೆದೆರಡು ತಿಂಗಳಲ್ಲಿ 40ಕ್ಕೂ ಅಧಿಕ ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಿ 13ಕ್ಕೂ ಅಧಿಕ ಅಮೂಲ್ಯ ಜೀವಗಳನ್ನು ಇಲ್ಲಿನ ರಾಹೆ 66ರ ಸ್ಥಗಿತಗೊಂಡಿರುವ ಚತುಷ್ಪಥ ರಸ್ತೆ ಕಾಮಗಾರಿ ಬಲಿತೆಗೆದುಕೊಂಡಿದೆ. ಇಂತಹ ಅವ್ಯವಸ್ಥಿತ ಕಾಮಗಾರಿ ವಿರುದ್ಧ ಉಡುಪಿ ಜಿಲ್ಲಾ ಜೆಡಿಎಸ್ ಬುಧವಾರ ದ.ಕ.- ಉಡುಪಿ ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ರಾಸ್ತಾ ರೋಕೋ ಮೂಲಕ ಪ್ರತಿಭಟನೆ ನಡೆಸಿತು.
 ಈ ಕಾಮಗಾರಿ ತಕ್ಷಣ ಪುನಾರಂಭಿಸಬೇಕು ಮತ್ತು ಅಪಘಾತಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸುಮಾರು 25 ನಿಮಿಷಕ್ಕೂ ಅಧಿಕ ಹೊತ್ತು ದಟ್ಟ ವಾಹನ ಸಂಚಾರ ಇರುವ ರಾ.ಹೆ.ಯನ್ನು ಸಂಪೂರ್ಣ ಬಂದ್ ಮಾಡಲಾಯಿತು. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಕಂಪನಿ ಬೇಜವಾಬ್ದಾರಿ: ಪ್ರತಿಭಟನೆ ನೇತೃತ್ವ ವಹಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಳೆದ 2 ತಿಂಗಳಲ್ಲಿ ಈ ರಾಹೆಯಲ್ಲಿ 13 ಜನ ಅನಾವಶ್ಯಕವಾಗಿ ಮೃತಪಟ್ಟಿದ್ದಾರೆ, 30 - 40 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದಕ್ಕೆ ಈ ಕಾಮಗಾರಿ ವಹಿಸಿಕೊಂಡು ಇದೀಗ ಅರ್ಧಕ್ಕೆ ನಿಲ್ಲಿಸಿರುವ, ರಸ್ತೆಯ ಒಂದು ಪಕ್ಕವನ್ನಾದರೂ ಪೂರ್ಣಗೊಳಿಸಿ ಸಂಚಾರಕ್ಕೆ ಬಿಟ್ಟು ಕೊಡದ ಗುತ್ತಿಗೆದಾರ ಕಂಪನಿಯ ಬೇಜಾಬ್ದಾರಿಯೇ ಕಾರಣ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಜೆಡಿಎಸ್ ವತಿಯಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯುವುದಕ್ಕೆ ಪ್ರತಿಭಟನೆ ನಡೆಸಬೇಕಾಯಿತು. ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಸ್ಪಂದಿಸದಿದ್ದಲ್ಲಿ ಜಿಲ್ಲೆಯಾದ್ಯಂತ ರಾ.ಹೆ.ಯುದ್ದಕ್ಕೂ ದಿನವಿಡೀ ರಾಸ್ತಾ ರೋಕೋ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 ಮಾಚಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಸರ್ಕಾರ ತಮ್ಮ ಹೊಣೆ ಅರಿತು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ತಕ್ಷಣ ಕಾಮಗಾರಿ ಆರಂಭಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
8 ದಿನದೊಳಗೆ ಪುನಾರಂಭ ಭರವಸೆ: ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕಂಪನಿ ಪ್ರತಿನಿಧಿಗಳು ಆಗಮಿಸಿ 8 ದಿನದೊಳಗೆ ರಸ್ತೆ ಕಾಮಗಾರಿ ಪುನಾರಂಭಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆ ತಡೆ ಸ್ಥಗಿತಗೊಳಿಸಲಾಯಿತು.  
 ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್, ಜೆಡಿಎಸ್ ನಾಯಕರಾದ ಪ್ರದೀಪ್ ಕುಮಾರ್, ಆರ್. ಧನರಾಜ್, ರತ್ನಾಕರ ಸುವರ್ಣ, ವಿಶ್ವನಾಥ ಉಡುಪಿ, ಮಂಜುಳಾ ವಿಷ್ಣುಪ್ರಸಾದ್, ಶಾಲಿನಿ ಶೆಟ್ಟಿ ಕೆಂಚನೂರು, ಎ.ಕೆ. ಸುಲೈಮಾನ್, ಶೇಖರ್ ಹೆಜ್ಮಾಡಿ, ಹಮೀದ್ ಬೇಂಗ್ರೆ, ವೇದಾವತಿ ಹೆಗಡೆ, ನಾರಾಯಣ ಭಂಡಾರಿ ಮತ್ತಿತರರು ಭಾಗವಹಿಸಿದ್ದರು.

ಬೈಪಾಸ್ ಬೇಡವೇ ಬೇಡ
ರಾ.ಹೆ. 66ರ ಚತುಷ್ಪಥ ಕಾಮಗಾರಿಯಲ್ಲಿ ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತಿದೆ. ರಾಹೆ 66ರಲ್ಲಿ ಎಲ್ಲಿಯೂ ಇಲ್ಲದ ಈ ಬೈಪಾಸ್ ನಿರ್ಮಾಣದ ಹಿಂದೆ ಕೆಲವು ಸ್ವಾರ್ಥಿ ರಾಜಕಾರಣಿಗಳು, ಉದ್ಯಮಿಗಳಿದ್ದಾರೆ. ಈ ಬೈಪಾಸ್ ನಿರ್ಮಾಣದಿಂದ ನೂರಾರು ಕುಟುಂಬಗಳು ಮನೆ, ಆಸ್ತಿ, ಕೃಷಿ ಕಳೆದುಕೊಳ್ಳಲಿವೆ. ಆದ್ದರಿಂದ ಬೈಪಾಸ್ ಯೋಜನೆ ಕೈಬಿಟ್ಟು ಈಗಿರುವಂತೆ ರಾ.ಹೆ. 66ನ್ನು ಚತುಷ್ಪಥಗೊಳಿಸಬೇಕು.

ತೊಂದರೆಗೆ ನವಯುಗ್ ಕಾರಣ
ಈ ಅರ್ಧದಲ್ಲಿ ಕಾಮಗಾರಿ ಸ್ಥಗಿತಗೊಳ್ಳುವುದಕ್ಕೆ ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕಂಪನಿಯೊಳಗಿನ ಆರ್ಥಿಕ ತೊಂದರೆಗಳೇ ಕಾರಣ. ಈಗಾಗಲೇ ಈ ಕಂಪನಿಗೆ ಪ್ರಾಧಿಕಾರದ ವತಿಯಿಂದ 3 ಬಾರಿ ನೋಟಿಸ್ ನೀಡಲಾಗಿದೆ. ಇದೀಗ ಕಂಪನಿಯ ಅರ್ಥಿಕ ಸಮಸ್ಯೆ ಬಗೆಹರಿದಿದ್ದು, ಕಾಮಗಾರಿ ಅರಂಭಿಸುವುದಾಗಿ ನವಯುಗ್ ಕಂಪನಿ ತಿಳಿಸಿದೆ. ನಿಗಾ ವಹಿಸಲಾಗುತ್ತದೆ.

ವಾರದೊಳಗೆ ಪುನರಾರಂಭ
ಕಾಮಗಾರಿ ಸ್ಥಗಿತಕ್ಕೆ ನಮ್ಮ ಕಂಪನಿಯೊಳಗಿನ ಕೆಲವು ಆಂತರಿಕ ಸಮಸ್ಯೆಗಳೇ ಕಾರಣ, ಹೊರತು ಹಣಕಾಸಿನ ತೊಂದರೆಗಳಿಲ್ಲ. ಕಳೆದ ಡಿಸಂಬರಿನೊಳಗೆ ಈ ಕಾಮಗಾರಿ ಮುಗಿಸಬೇಕಿತ್ತು. ಇದೀಗ ಈ ಭಾಗದಲ್ಲಿ ನಡೆದ ಅಪಘಾತ, ಸಾವುನೋವುಗಳ ಬಗ್ಗೆ ನಮಗೆ ವಿಷಾದವಿದೆ. ಮುಂದೆ ಹೀಗೆ ಆಗದಂತೆ ವಾರದೊಳಗೆ ಕಾಮಗಾರಿ ಆರಂಭಿಸಿ, ಶೀಘ್ರವಾಗಿ ಮುಗಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.