ವೈದ್ಯರ ಮುಷ್ಕರ; ಶವಪರೀಕ್ಷೆ, ಹೆರಿಗೆಗೆ ಭಾರಿ ಸಂಕಷ್ಟ
ಉಡುಪಿ: ರಾಜ್ಯದಾದ್ಯಂತ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರದಂತೆ, ಉಡುಪಿ ಜಿಲ್ಲೆಯ ಎಲ್ಲ 146 ಮಂದಿ ಸರ್ಕಾರಿ ವೈದ್ಯರು ಕಳೆದ 4 ದಿನಗಳಿಂದ ತಮ್ಮ ಕರ್ತವ್ಯ ಸ್ಥಗಿತಗೊಳಿಸಿದ್ದಾರೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ.
ಮುಖ್ಯವಾಗಿ ಶವದ ಮರಣೋತ್ತರ ಪರೀಕ್ಷೆ ಮತ್ತು ಹೆರಿಗೆಗೆ ಬಡ ಮತ್ತು ಮಧ್ಯಮ ವರ್ಗದ ಜನರು ಪಡಬಾರದ ಕಷ್ಟ ಅನುಭವಿಸುವಂತಾಗಿದೆ.
ಸರ್ಕಾರಿ ವೈದ್ಯರು ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತದಿಂದ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಮಣಿಪಾಲದ ಕೆಎಂಸಿ (ಖಾಸಗಿ) ಆಸ್ಪತ್ರೆಗೆ ತರಲಾಗುತ್ತಿದೆ. ಅದರಲ್ಲೂ 60-70 ಕಿ.ಮೀ. ದೂರದ ಕುಂದಾಪುರ ತಾಲೂಕಿನ ಶವವಗಳನ್ನು ಮಣಿಪಾಲಕ್ಕೆ ತರುವುದು, ಅಲ್ಲಿ ದುಃಖದಿಂದ ದಿನಗಟ್ಟಲೆ ಶವಾಗಾರದ ಮುಂದೆ ಕಾಯುವುದು ಮತ್ತು ಪರೀಕ್ಷೆಯ ನಂತರ ಶವ ಹಿಂದಕ್ಕೆ ತೆಗೆದುಕೊಂಡು ಹೋಗಿ ಶವಸಂಸ್ಕಾರಗಳನ್ನು ನಡೆಸುವುದು ಮೃತರ ಮನೆಯವರನ್ನು ಹೈರಾಣಾಗಿಸುತ್ತಿದೆ.
ಶವಗಳ ಒತ್ತಡ: ಮಣಿಪಾಲ ಕೆಎಂಸಿಯ ಶವಾಗಾರ ಅದೇ ಆಸ್ಪತ್ರೆಯ ಮತ್ತು ಹೊರಗಿನಿಂದ ಶವಪರೀಕ್ಷೆಗೆ ಬಂದ ಶವಗಳಿಂದ ತುಂಬಿ ತುಳುಕುತ್ತಿದೆ. ಕಳೆದ 4 ದಿನಗಳಲ್ಲಿ 100ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಬೇಕಾದ ಶವಗಳು ಮಣಿಪಾಲ ಕೆಎಂಸಿಗೆ ಬಂದಿವೆ. ಜಿಲ್ಲೆಯಲ್ಲಿ ಮಣಿಪಾಲ ಕೆಎಂಸಿ ಬಿಟ್ಟರೆ ಶವಗಳ ಮರಣೋತ್ತರ ಪರೀಕ್ಷೆ ಮಾಡುವ ವ್ಯವಸ್ಥೆ ಇರುವ ಬೇರೆ ಖಾಸಗಿ ಆಸ್ಪತ್ರೆಗಳಿಲ್ಲ. ಕೆಎಂಸಿಯಲ್ಲಯೂ ಶವಗಳ ಸಂಖ್ಯೆಯ ಒತ್ತಡದಿಂದಾದ ಸಕಾಲದಲ್ಲಿ ಪರೀಕ್ಷೆ ಮಾಡಲಾಗುತ್ತಿಲ್ಲ.
ಉಚಿತ ಪರೀಕ್ಷೆ: ಸಾಮಾನ್ಯವಾಗಿ ಕೆಎಂಸಿಯಲ್ಲಿ ಮರಣೋತ್ತರ ಶವ ಪರೀಕ್ಷೆಗೆ ರು. 5-6 ಸಾವಿರ ಫೀಸು ಕಟ್ಟಬೇಕು. ಆದರೆ ಇದೀಗ ತಮ್ಮ ವಿನಂತಿಗೆ ಸ್ಪಂದಿಸಿರುವ ಕೆಎಂಸಿ ಆಸ್ಪತ್ರೆಯವರು ಬಡವರ ಶವಗಳನ್ನು ಉಚಿತವಾಗಿ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಕುಟಂಬ ಮತ್ತು ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಇನ್ನು ಹೆರಿಗೆಗೆ ದಿನ ತುಂಬಿದ ಗರ್ಭಿಣಿಯರನ್ನು ಕೂಡ ಖಾಸಗಿ ಆಸ್ಪತ್ರೆಗೆ ಕೇಳಿದಷ್ಟು ಫೀಸು ತೆತ್ತು ದಾಖಲಿಸಬೇಕಾಗಿದೆ. ಉಚಿತವಾಗಿ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುತ್ತಿದ್ದ ಈ ಬಡ ಕುಟುಂಬದವರಿಗೆ ಸರ್ಕಾರಿ ವೈದ್ಯ ಈ ಮುಷ್ಕರ ಭಾರಿ ಹೊರೆಯಾಗಿ ಪರಿಣಿಮಿಸಿದೆ.
ವೈದ್ಯರು ಕೆಲಸಕ್ಕಿಲ್ಲ: ಜಿಲ್ಲೆಯ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳ 125 ಮಂದಿ ಸರ್ಕಾರಿ ವೈದ್ಯರು ಮತ್ತು ಉಡುಪಿ ಜಿಲ್ಲಾಸ್ಪತ್ರೆಯ 25 ಮಂದಿ ಸರ್ಕಾರಿ ವೈದ್ಯರು 4 ದಿನಗಳಿಂದ ಯಾವುದೇ ಹೊರಗೋಗಿಯ ತಪಾಸಣೆ ಔಷದೋಪಚಾರ ಮಾಡುತ್ತಿಲ್ಲ, ನಿತ್ಯ ಸಾವಿರಾರು ಮಂದಿ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಬಂದು ಹಿಂದಕ್ಕೆ ಹೋಗುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆ - ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಳರೋಗಿಗಳಾಗಿ ದಾಖಲಾಗದಿರುವ ರೋಗಿಗಳಿಗೆ ಅಲ್ಲಿನ ದಾದಿಯರೇ ಗತಿಯಾಗಿ ಬಿಟ್ಟಿದ್ದಾರೆ. ವೈದ್ಯರು ನಡೆಸಬೇಕಾದ ಹೆರಿಗೆ, ಶಸ್ತ್ರಕ್ರಿಯೆ, ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಇತ್ಯಾದಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ವೈದ್ಯರ ಮುಷ್ಕರ ಶೀಘ್ರವೇ ಮುಗಿಬೇಕಾಗಿದೆ. ಇಲ್ಲದಿದ್ದಲ್ಲಿ ಪರಿಸ್ಥಿತಿ ಇನ್ನೂ ಹದಗೆಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

