ಹಿಂದುತ್ವ ಮರೆತ ಬಿಜೆಪಿ ವಿರುದ್ಧ ಅಭಾಹಿಂ ಮಹಾಸಭಾ ಚುನಾವಣಾ ಕಣಕ್ಕೆ: ರಾಯ್ಕರ್
ಉಡುಪಿ: ಬಿಜೆಪಿಯು ತನ್ನ ಮೂಲ ಸಿದ್ಧಾಂತವಾದ ಹಿಂದುತ್ವವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವುದರಿಂದ ಮುಂಬರುವ ಸ್ಥಳೀಯಾಡಳಿತ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅನಿವಾರ್ಯವಾಗಿ ಬಿಜೆಪಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಭಾದ ರಾಜ್ಯಾಧ್ಯಕ್ಷ ಶ್ರವಣಕುಮಾರ ರಾಯ್ಕರ್ ಘೋಷಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 80 ವಿಧಾನಸಭಾ ಕ್ಷೇತ್ರಗಳಲ್ಲಿ ಸಭಾವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಅವರು ತಿಳಿಸಿದರು.
ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಪ್ರತ್ಯೇಕವಾಗಿಯೇ ಸ್ಪರ್ಧಿಸಲಿದೆ ಎಂದು ಹೇಳಿದರು.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿವೆ. ಕೆಲವು ರಾಜಕೀಯ ಪಕ್ಷಗಳು ಮುಸ್ಲಿಮರ ತುಷ್ಟೀಕರಣದ ಹಾದಿ ಹಿಡಿದಿದ್ದು, ದೇಶವು ಮತ್ತೊಮ್ಮೆ ವಿಭಜನೆಯ ಹಾದಿಯಲ್ಲಿದೆ. ಇದನ್ನು ತಪ್ಪಿಸಲು ಎಲ್ಲ ಜಾತಿ, ಪಂಥಗಳನ್ನೊಳಗೊಂಡ ಹಿಂದೂ ಮತ ಬ್ಯಾಂಕನ್ನು ಕ್ರೋಢೀಕರಿಸಲು ಹಿಂದೂ ಮಹಾಸಭಾವು ಸಕ್ರಿಯವಾಗಿ ರಾಜಕೀಯಕ್ಕೆ ಇಳಿಯಲು ನಿರ್ಧರಿಸಿದೆ ಎಂದು ರಾಯ್ಕರ್ ತಿಳಿಸಿದರು.
1907ರಲ್ಲಿ ಲಾಲಾ ಲಜಪತರಾಯ್, ಮದನ ಮೋಹನ ಮಾಳವೀಯ ಮುಂತಾದವರಿಂದ ಸ್ಥಾಪಿತವಾದ ಅಭಾಹಿಂ ಸಭಾವು ರಾಜಕೀಯ ಪಕ್ಷವಾಗಿ ನೋಂದಣಿಗೊಂಡಿದ್ದು, ಅಯೋಧ್ಯೆ ವಿವಾದದಲ್ಲಿ ಪ್ರಥಮ ಕಕ್ಷಿದಾರವಾಗಿದೆ ಎಂದವರು ಹೇಳಿದರು.
28ರಂದು ಪ್ರಥಮ ಸಭೆ: ಸಭಾದ ರಾಜ್ಯ ಮಟ್ಟದ ಕಾರ್ಯಕರ್ತರ ಪ್ರಥಮ ಸಮಾವೇಶ ಫೆ.28ರಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆಯಲಿದೆ. ಅಂದು ರಾಜ್ಯ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್, ಸಭಾದ ರಾಷ್ಟ್ರೀಯ ಅಧ್ಯಕ್ಷೆ ಹಿಮಾನಿ ಸಾವರ್ಕರ್, ನಿಕಪೂರ್ವ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜು ಮುಂತಾದವರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾನತ ಸಂಸ್ಥೆಯ ವಿಜಯಕುಮಾರ್, ಹಿಂದೂ ಜನಜಾಗೃತಿ ಸಮಿತಿಯ ರವೀಂದ್ರ ಕಾಮತ್, ಬಾಲಾಜಿ ರಾಘವೇಂದ್ರರಾಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

