ನಗರಸಭೆ ಚುನಾವಣೆ- ಕಾಂಗ್ರೆಸ್ ಬಿಜೆಪಿ ಒಳಒಪ್ಪಂದ: ದೇವಿಪ್ರಸಾದ್ ಶೆಟ್ಟಿ ಆರೋಪ
ಉಡುಪಿ: ಉಡುಪಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕಾಗಿ ಒಳಒಪ್ಪಂದ ಮಾಡಿಕೊಂಡು, ಹೊಂದಾಣಿಕೆಯೊಂದಿಗೆ ತಂತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಆರೋಪಿಸಿದರು.
ದೀರ್ಘಾವಧಿ ನಗರಸಭೆ ಆಡಳಿತ ನಡೆಸಿದ್ದ ಬಿಜೆಪಿಯು, ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರುಪಾಯಿಗಳ ಭ್ರಷ್ಟಾಚಾರ, ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ, ನಿಯಮ ಉಲ್ಲಂಘನೆಯ ಮೂಲಕ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಸಹಕಾರ, ಒಳಚರಂಡಿ, ಕುಡಿಯುವ ನೀರು ಕಾಮಗಾರಿಗಳ ಅನುದಾನ ದುರುಪಯೋಗ, ಸಿಗ್ನಲ್ ಮತ್ತು ಜಾಹೀರಾತುಗಳ ಅಸಮರ್ಪಕ ವ್ಯವಸ್ಥೆಯೊಂದಿಗೆ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ, 'ಪುರಭವನ'ದ ಕಾಮಗಾರಿಯಲ್ಲಿ ಹಣದ ಅವ್ಯವಹಾರ, ಸರ್ಕಾರಿ ಪುರಭವನವನ್ನು ಬಡವರಿಗೆ ದಕ್ಕದ ರೀತಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಿರುವುದು ಇತ್ಯಾದಿ ಹಗರಣಗಳನ್ನು ನಡೆಸಿದ್ದರೂ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಮೌನವಾಗಿ ಸಮ್ಮತಿ ಸೂಚಿಸುವ ಮೂಲಕ ತಾನು ಈ ಜನವಿರೋಧಿ ನೀತಿಯಲ್ಲಿ ಪಾಲುದಾರನಾಗಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ಪಕ್ಷ ಕೆಲವು ಸ್ಥಾನಗಳಲ್ಲಿ ಬಿಜೆಪಿಯ ಎದುರು ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿ ಪರೋಕ್ಷವಾಗಿ ಬಿಜೆಪಿ ಗೆಲ್ಲುವುದಕ್ಕೆ ಸಹಕರಿಸುತ್ತಿದೆ. ಇದಕ್ಕೆ ಪ್ರತಿಫಲವಾಗಿ ಕಾಂಗ್ರೆಸ್ ಪಕ್ಷ ಕೆಲವು ಸ್ಥಾನಗಳನ್ನಾದರೂ ಗೆಲ್ಲಬೇಕು ಎಂದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದರು.
ಜನರು ಈ ಕುತಂತ್ರವನ್ನು ಅರಿತಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಉಡುಪಿ ನಗರಸಭೆಯಲ್ಲಿ ಯೋಗ್ಯ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

