ಉಡುಪಿ: ಅನುದಾನ ರು. 58.89 ಕೋಟಿ, ಬಳಕೆಯಾಗಿದ್ದು ರು. 13.00 ಕೋಟಿ
ಉಡುಪಿ: ಬಿಡುಗಡೆಯಾದದ್ದು ರು. 58.89 ಕೋಟಿ, ಖರ್ಚು ಮಾಡಿದ್ದು ಕೇವಲ ರು. 13.00 ಕೋಟಿ, ಅಂದರೆ ಸಾಧನೆ ಕೇವಲ ಶೇ. 22 ಮಾತ್ರ.
ಇದು ಕಳೆದ 4 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕತೆ- ವ್ಯಥೆ.
ನಿರುದ್ಯೋಗ ಸಮಸ್ಯೆಯಿಂದ ತತ್ತರಿಸುತ್ತಿರುವ ಗ್ರಾಮೀಣ ಭಾಗದ ಬಡ ಕಾರ್ಮಿಕರಿಗೆ ವರ್ಷದಲ್ಲಿ 100 ದಿನಗಳಾದರೂ ಉದ್ಯೋಗವನ್ನು ನೀಡಬೇಕು ಎನ್ನುವ ಮಹತ್ತರ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದೆ. ಅದಕ್ಕಾಗಿ ಕೇಳಿದಷ್ಟು ಅನುದಾನವನ್ನೂ ನೀಡುತ್ತಿದೆ.
ಆದರೆ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಬೆನ್ನು ತಟ್ಟಿಕೊಳ್ಳುವ ಉಡುಪಿ ಜಿಲ್ಲೆ ಮಾತ್ರ ಈ ಯೋಜನೆಯಡಿ ಹೇಳಿಕೊಳ್ಳುವುದಕ್ಕೂ ನಾಚಿಕೆಯಾಗುವಷ್ಟು ಕಳಪೆ ಸಾಧನೆ ತೋರಿಸಿದೆ. ಹೆಚ್ಚುವರಿ ಅನುದಾನ ಕೇಳುವುದು ಬಿಡಿ, ಕೇಂದ್ರ ಸರ್ಕಾರ ನೀಡಿದ ಅನುದಾನದ ಅರ್ಧದಷ್ಟನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.
2009ರಿಂದ 2013ರವರೆಗಿನ ಸಾಧನೆ...: ಮೊದಲ ವರ್ಷ ಅಂದರೇ 2009- 11ರಲ್ಲಿ ರು. 9.24 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ರು. 6.95 ಕೋಟಿ ಬಳಕೆಯಾಗಿತ್ತು. ಪೂರ್ಣ ಅಲ್ಲದಿದ್ದರೂ ಶೇ. 75.10ರಷ್ಟು ಗುರಿ ಸಾಧನೆಯಾಗಿತ್ತು. ರು. 2.30 ಕೋಟಿ ಖರ್ಚಾಗದೆ ಉಳಿದಿತ್ತು.
2010- 11ರಲ್ಲಿ ರು. 17.68 ಕೋಟಿ ಬಿಡುಗಡೆಯಾಗಿತ್ತು. ಆದರೆ, ಖರ್ಚಾದದ್ದು ರು. 2.24 ಕೋಟಿ (ಶೇ. 12.68) ಮಾತ್ರ. ಖರ್ಚು ಮಾಡದೇ ಉಳಿದದ್ದು ರು. 15.44 ಕೋಟಿ.
2011- 12ರಲ್ಲಿ ಜಿಲ್ಲೆಗೆ ರು. 16.23 ಕೋಟಿ ಬಿಡುಗಡೆಯಾಗಿತ್ತು. ಇದರಲ್ಲಿ ಖರ್ಚು ಮಾಡಿದ್ದು ಮಾತ್ರ ಕೇವಲ ರು. 2.48 ಕೋಟಿ (ಶೇ. 15.25) ಮಾತ್ರ. ಖರ್ಚಾಗದೇ ಉಳಿದದ್ದು ರು. 13.73 ಕೋಟಿ.
ಪ್ರಸ್ತುತ ಸಾಲಿನಲ್ಲಿ ರು. 15.73 ಕೋಟಿ ಹಣ ಬಿಡುಗಡೆಯಾಗಿದೆ. ಅದರಲ್ಲಿ ನವೆಂಬರ್ ತಿಂಗಳವರೆಗೆ ರು. 1.33 ಕೋಟಿ (ಶೇ. 8.99) ಮಾತ್ರ ಖರ್ಚಾಗಿದೆ. ಉಳಿದ ರು. 14.39 ಕೋಟಿ ಖರ್ಚಾಗದೆ ಹಾಗೇ ಕೊಳೆಯುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಪ್ರತಿ ವರ್ಷ ಉಳಿಕೆಯಾಗುವ ಮೊತ್ತ ಮರು ವರ್ಷದ ಅನುದಾನಕ್ಕೆ ಸೇರುತ್ತಿದೆ. ಆದರೆ, ಅದು ಕೂಡ ಬಳಕೆಯಾಗುತ್ತಿಲ್ಲ. ಈ ಯೋಜನೆಯಡಿ ಕಳೆದ 4 ವರ್ಷಗಳಲ್ಲಿ (ಹಿಂದಿನ ವರ್ಷಗಳಲ್ಲಿ ಬಳಕೆಯಾಗದ ಉಳಿದ ಮೊತ್ತವೂ ಸೇರಿ) ಒಟ್ಟು ರು. 58.89 ಕೋಟಿ ಅನುದಾನ ಬಂದಿದೆ. ಆದರೆ, ಅದರಲ್ಲಿ ಅರ್ಧದಷ್ಟನ್ನಾದರೂ ಖರ್ಚು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ನೇರವಾಗಿ ಜಿಲ್ಲಾಡಳಿತದ ಅಧಿಕಾರಿಗಳೇ ಹೊಣೆಗಾರರು. ಆದರೆ, ತಂತಮ್ಮ ಕ್ಷೇತ್ರಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳದ ಜಿಲ್ಲೆಯ ಶಾಸಕರು, ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರ ನಿರ್ಲಕ್ಷ್ಯವೂ ಕೂಡ ಅಷ್ಟೇ ಕಾರಣ. ಇದು ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ, ಹಣ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆಯಾಗುವುದರಿಂದ ರಾಜ್ಯ ಸರ್ಕಾರ ಶಾಸಕರಿಗಾಗಲಿ, ಮಂತ್ರಿಗಳಿಗಾಗಲಿ, ರಾಜ್ಯ ಆಡಳಿತ ಪಕ್ಷದ ಜನಪ್ರತಿನಿಧಿಗಳಿಗಾಗಲಿ ಯಾವುದೇ 'ಲಾಭ' ಇಲ್ಲದಿರುವುದರಿಂದ ಅವರಿಗೆ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ಆಸಕ್ತಿ ಇಲ್ಲ ಎನ್ನುವುದು ಪರಮಸತ್ಯ. ಆದ್ದರಿಂದ ಹೇಳುವವರಿಲ್ಲದೇ ಕೇಳುವವರಿಲ್ಲದೇ ಜಿಲ್ಲೆಯ ಅಧಿಕಾರಿಗಳೂ ಸುಮ್ಮನಿದ್ದಾರೆ.
ಪರಿಣಾಮ ಮಹಾತ್ಮಾಗಾಂಧಿಯ ಹೆಸರಿನ ಈ ಯೋಜನೆ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದೆ.
ಅಧಿಕಾರಿಗಳಿಗೆ ಮನಸ್ಸಿಲ್ಲ ಅಷ್ಟೇ
ಈ ಯೋಜನೆಯಂತೆ ನೀಡಲಾಗುವ ರು. 155 ಕೂಲಿಗೆ ಜಿಲ್ಲೆಯಲ್ಲಿ ಕಾರ್ಮಿಕರು ಕೆಲಸ ಮಾಡುವುದಕ್ಕೆ ಬರುವುದಿಲ್ಲ ನಿಜ. ಆದರೆ, ಜಿಲ್ಲೆಯಲ್ಲಿ ಈ ಯೋಜನೆ ಹಿಂದುಳಿಯಲು ಇದು ಕಾರಣ ಅಲ್ಲ. ಈ ಯೋಜನೆಯಡಿ ಬಿಡುಗಡೆಯಾದ ಹಣವನ್ನು ರಸ್ತೆ, ಕೆರೆ, ಕೃಷಿಯಲ್ಲಿ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನದ ಒಂದು ಭಾಗವನ್ನಾಗಿ ನೀಡಿ, ಉಳಿದ ಭಾಗವನ್ನು ಗುತ್ತಿಗೆದಾರನೋ, ಕೃಷಿದಾರನೋ ಭರಿಸುವುದಕ್ಕೆ ಅವಕಾಶ ಇದೆ. ಆದರೆ, ಗ್ರಾ.ಪಂ.ನಿಂದ ಹಿಡಿದು ಜಿ.ಪಂ.ನವರೆಗೆ ಯಾವುದೇ ಅನುಷ್ಠಾನ ಅಧಿಕಾರಿ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.
- ಬಸ್ರೂರು ರಾಜೀವ್ ಶೆಟ್ಟಿ,
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉಡುಪಿ ಜಿಲ್ಲಾ ಓಂಬುಡ್ಸ್ಮನ್
- ಸುಭಾಶ್ಚಂದ್ರ ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

