ಗ್ಯಾಂಗ್ರೇಪ್ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಉಡುಪಿ: ಮಣಿಪಾಲ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ನಡೆದು ತಿಂಗಳೊಂದು ಕಳೆದಿದೆ. ಆದರೂ, ಆರೋಪಿಗಳನ್ನು ವೈಜ್ಞಾನಿಕವಾಗಿ ಗುರುತಿಸುವುದಕ್ಕಾಗಿ ಬೆಂಗಳೂರಿನ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿರುವ ಆರೋಪಿಗಳ ಡಿಎನ್ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಈ ನಡುವೆ, ಸೋಮವಾರ ಆರೋಪಿಗಳ ನ್ಯಾಯಾಂಗ ಬಂಧನವನ್ನು 3ನೇ ಬಾರಿಗೆ ವಿಸ್ತರಿಸಲಾಗಿದೆ.
ಘಟನೆ ಹಿನ್ನೆಲೆ: ಜೂ. 20ರಂದು ಮಧ್ಯರಾತ್ರಿ ಮಣಿಪಾಲದಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳನ್ನು ಆಟೋ ಚಾಲಕರಾದ ಯೋಗೀಶ್ ಪೂಜಾರಿ ಯಾನೆ ಅಮ್ಲೇಟ್ ಯೋಗೀಶ್, ಹರಿಪ್ರಸಾದ್ ಪೂಜಾರಿ ಮತ್ತು ಆನಂದ ಪಾಣಾರ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾಗಿ ಆರೋಪಿಸಲಾಗಿದೆ.
ಆರೋಪಿಗಳನ್ನು ಜೂ. 17ರಂದು ಬಂಧಿಸಲಾಗಿತ್ತು. ನಂತರ, ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಬಾಲಚಂದ್ರ ಪೂಜಾರಿ ಮತ್ತು ಹರೀಂದ್ರ ಅವರನ್ನು ಪೊಲೀಸರು ಸಾಕ್ಷ್ಯನಾಶದ ಆರೋಪದಲ್ಲಿ ಬಂಧಿಸಿದ್ದರು. ಆರೋಪಿಗಳ ಬಂಧನವಾದ ಮೇಲೆ 4ನೇ ಬಾರಿಗೆ ಸೋಮವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಾನೂನು ಪ್ರಕಾರ ಆರೋಪಿಗಳನ್ನು ಗುರುತಿಸುವ ಗುರುತು ಪತ್ತೆ ಪರೇಡ್ ಆಗಿಲ್ಲ. ಆದ್ದರಿಂದ ಆರೋಪಿಗಳ ಮುಖವನ್ನು ಸಾರ್ವಜನಿಕವಾಗಿ ತೋರಿಸುವಂತಿಲ್ಲ, ಈ ಹಿನ್ನೆಲೆಯಲ್ಲಿ ಸೋಮವಾರವೂ ಆರೋಪಿಗಳ ಮುಖಕ್ಕೆ ಕಪ್ಪು ಬಟ್ಟೆಯ ಮುಸುಕು ಹಾಕಲಾಗಿತ್ತು.
ವೈಜ್ಞಾನಿಕವಾಗಿ ಗುರುತಿಸಲು ನಿರ್ಧಾರ: ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿ ಆರೋಪಿಗಳನ್ನು ಕಾನೂನು ಪ್ರಕಾರ, ಗುರುತು ಪತ್ತೆ ಪ್ರಕ್ರಿಯೆ (ಐಡಿಂಟಿಫಿಕೇಶನ್ ಪರೇಡ್ಗೆ) ಒಪ್ಪಿಲ್ಲವಾದ್ದರಿಂದ, ಆರೋಪಿಗಳನ್ನು ಡಿಎನ್ಎ ಪರೀಕ್ಷೆಗೊಳಪಡಿಸಿ ವೈಜ್ಞಾನಿಕವಾಗಿ ಗುರುತಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆರೋಪಿಗಳ ರಕ್ತದ ಮಾದರಿ, ಅತ್ಯಾಚಾರಕ್ಕೊಳಗಾದ ಯುವತಿಯ ದೇಹದ ಮೇಲೆ ಸಿಕ್ಕಿದ ಆರೋಪಿಗಳ ವೀರ್ಯ, ಕೂದಲು ಇತ್ಯಾದಿಗಳನ್ನು ಬೆಂಗಳೂರಿನ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಅಲ್ಲಿಂದ ವರದಿ ಬಂದ ಮೇಲೆ, ಆರೋಪಿಗಳ ಗುರುತು ಪತ್ತೆಯಾದ ಮೇಲೆ, ಆರೋಪಿಗಳ ಮುಖದಿಂದ ಮುಸುಕು ತೆಗೆಯಲಾಗುವುದು. ನಾಲ್ಕು ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಲೂ ಮುಸುಕು ತೆಗೆಯದೇ ಆರೋಪಿಗಳನ್ನು ಕರೆತಂದ ಅಪರೂಪದ ಪ್ರಕರಣ ಇದಾಗಿದೆ. ಅನಿವಾರ್ಯ ಮುಜುಗರಕ್ಕೆ ಒಳಗಾಗಿರುವ ಪೊಲೀಸರು ಕೂಡ ಇದನ್ನು ತಪ್ಪಿಸಲು ಡಿಎನ್ಎ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಈಗಾಗಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ಬಾರಿ ಪೊಲೀಸ್ ವಶಕ್ಕೆ ಮತ್ತು 2 ಬಾರಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಮತ್ತೆ, ತನಿಖಾಧಿಕಾರಿ ಮಣಿಪಾಲದ ಎಸೈ ಸದಾನಂದ ತಿಪ್ಪಣ್ಣನವರ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚವರಿ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗಜ್ಯೋತಿ ಅವರು ಆರೋಪಿಗಳಿಗೆ ಆ. 12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ಅತ್ಯಾಚಾರದ ಮೂವರು ಆರೋಪಿಗಳನ್ನು ಶಿವಮೊಗ್ಗ ಜೈಲಿಗೂ, ಸಾಕ್ಷ್ಯನಾಶದ ಆರೋಪಿಗಳನ್ನು ಉಡುಪಿ ಜಿಲ್ಲಾ ಕಾರಾಗೃಹಕ್ಕೂ ಕಳುಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

