ಸುದ್ದಿ ಸಂಕ್ಷೇಪ
ಕಡಿಯಾಳಿಯಲ್ಲಿ ಪಂಚಕರ್ಮ ಚಿಕಿತ್ಸಾಲಯ ಆರಂಭ
ಉಡುಪಿ: ಆಧುನಿಕ ಯುಗದಲ್ಲಿ ಅನಾರೋಗ್ಯಕರ ಬೆಳವಣಿಗೆಯಿಂದ ದಿನದಿಂದ ದಿನಕ್ಕೆ ಮನುಷ್ಯ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನುರಿತ ವೈದ್ಯರ ಆತ್ಮವಿಶ್ವಾಸದ ನುಡಿಗಳೇ ರೋಗವನ್ನು ನಿಯಂತ್ರಿಸಬಲ್ಲದು. ವ್ಯಾಪಾರೀಕರಣವೆ ಮುಖ್ಯವಲ್ಲದ ವೈದ್ಯರ ಮಾನವೀಯ ಸೇವೆಯೇ ಬದುಕನ್ನು ಹಸನುಗೊಳಿಸುತ್ತದೆ ಎಂದು ಮಣಿಪಾಲ ಕೆಎಂಸಿ ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಕಾಮತ್ ತಿಳಿಸಿದರು. ಅವರು ಇಲ್ಲಿನ ಕಡಿಯಾಳಿಯಲ್ಲಿ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಟಿ. ಶ್ರೀಧರ ಬಾಯರಿ ಆರೋಗ್ಯದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಎಸ್. ಜಯರಾಂ, ಯೋಗೀಶ್ ಶೆಣೈ ಉಪಸ್ಥಿತರಿದ್ದರು. ಸಂಸ್ಥೆಯ ವೈದ್ಯ ಡಾ. ದೀಪಕ್ ಸ್ವಾಗತಿಸಿದರು. ಭರತ್ ಕುಮಾರ್ ನಿರೂಪಿಸಿದರು. ಅಶ್ವನಿ ಕುತ್ಪಾಡಿ ವಂದಿಸಿದರು.
ಸಿಎ ಮಾಹಿತಿ ಶಿಬಿರ
ಉಡುಪಿ: ಇಲ್ಲಿನ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾಣಿಜ್ಯ ವಿಭಾಗವು ಸಿ.ಎ. (ಲೆಕ್ಕಪರಿಶೋಧನೆ) ವಿಷಯದ ಕುರಿತಾಗಿ ಮಾಹಿತಿ ನೀಡುವ ಕಾರ್ಯಕ್ರಮವನ್ನು ಇತ್ತೀತೆಗೆ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಿಎ ಕಿರಣವಸಂತ್ ಮಾತನಾಡುತ್ತ, ಹಗಲು ಹೊತ್ತಿನಲ್ಲಿ ಸಿ.ಎ. ತರಬೇತಿ ಪಡೆಯುತ್ತ ಸಂಧ್ಯಾ ಕಾಲೇಜಿನಲ್ಲಿ ಪದವಿಯನ್ನು ಪಡೆದರೆ, ಟೂ- ಇನ್- ಒನ್ ಲಾಭ ಪಡೆಯಬಹುದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಸಿಎ ಗೋಪಾಲಕೃಷ್ಮ ಭಟ್, ಸಿಎ ಕೋರ್ಸ್ನ ಹಲವು ಮಜಲುಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಮಾಧವಿ ಎಸ್. ಭಂಡಾರಿ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಸಂತೋಷ ಕುಮಾರ್ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿ, ವಿವೇಕ್ ಕಾಮತ್ ವಂದಿಸಿದರು.
ಉಡುಪಿ: ಪುಸ್ತಕ ವಿತರಣೆ
ಉಡುಪಿ: ಇಲ್ಲಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 'ಸ್ಕೂಲ್ ಚಲೋ' ಕಾರ್ಯಕ್ರಮದ ಅಂಗವಾಗಿ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಜಿಲ್ಲಾ ಕಚೇರಿಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಪಿಎಫ್ಐ ಉಡುಪಿ ವಲಯಾಧ್ಯಕ್ಷ ಮಕ್ಸೂದ್, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ನ್ಯಾಮಹತ್ ಅಲಿ ಕಾಪು, ಸಲೀಂ ಅಸ್ಸಾದಿ, ರಹ್ಮಾನ್ ಉಡುಪಿ, ಆಸಿಫ್ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.
ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಉಡುಪಿ: 2012 ಸಾಲಿನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿರ್ವ ಸಂತ ಜೋಸೆಫ್ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಪೃಥ್ವಿ ಪೂಜಾರಿ (ಶೇ. 89.92), ದೀಕ್ಷಾ ಶೆಟ್ಟಿ (ಶೇ. 88), ವೈಷ್ಣವಿ ಜೋಗಿ (ಶೇ. 82.36), ಸುಮಲತಾ (ಶೇ. 85.92) ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬ್ರಹ್ಮಾವರ ಎಸ್ಎಂಎಸ್ಗೆ ಶೇ. 100 ಫಲಿತಾಂಶ
ಬ್ರಹ್ಮಾವರ: ಪ್ರಸ್ತುತ ಸಾಲಿನಲ್ಲಿ ಕೇಂದ್ರಿಯ ಶಿಕ್ಷಣ ಮಂಡಳಿ ನಡೆಸಿದ ಎಐಎಎಇ ಪರೀಕ್ಷೆಯಲ್ಲಿ ಇಲ್ಲಿನ ಎಸ್.ಎಂ.ಎಸ್. ಅಂಗ್ಲ ಮಾಧ್ಯಮ ಶಾಲೆ ಶೇ. 100 ಫಲಿತಾಂಶ ದಾಖಲಿಸಿದೆ. ಈ ಶಾಲೆಯಿಂದ 79 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 8 ವಿದ್ಯಾರ್ಥಿಗಳು ಪೂರ್ತಿ 10 ಅಂಕಗಳನ್ನು ಪಡೆದಿದ್ದಾರೆ. 22 ಮಕ್ಕಳು ವಿಶಿಷ್ಟಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಹಿರಿಮೆ ತಂದಿದ್ದಾರೆ. ಈ ಯಶಸ್ಸಿಗಾಗಿ ಶಾಲಾಡಳಿತ ಮಂಡಳಿಯು ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.
ಸತೀಶ್ ಕುಲಾಲ್ ರಾಜಿನಾಮೆ
ಉಡುಪಿ: ಕರ್ನಾಟಕ ಸರ್ಕಾರದ ಕುಂಬಾರಿಕೆ ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶನ ಸದಸ್ಯರಾಗಿದ್ದ ಸತೀಶ್ ಕುಲಾಲ್ ಕಡಿಯಾಳಿ ಮಂಡಳಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಮೊಹಮ್ಮದ್ ಶರೀಫ್ ಆಯ್ಕೆ
ಕಾರ್ಕಳ: ಜಮಿಯ್ಯತುಲ್ ಫಲಾಹ್ ದ.ಕ., ಉಡುಪಿ ಜಿಲ್ಲೆ ಇದರ 2013- 15ನೇ ಸಾಲಿನ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಪುರಸಭಾ ಸದಸ್ಯ, ಪತ್ರಕರ್ತ ಮೊಹಮ್ಮದ್ ಶರೀಫ್ ಬಂಗ್ಲೆಗುಡ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

