ಉಡುಪಿ

ಕನ್ನಡಕ್ಕೆ ಆತಂಕದ ಪರಿಸ್ಥಿತಿ ಎದುರಾಗಿರುವುದು ದೊಡ್ಡ ದುರಂತ

Published On :

ಹೆಬ್ರಿ: ಜಗತ್ತಿನ 30 ಪ್ರಮುಖ ಭಾಷೆಗಳಲ್ಲಿ ಒಂದೆಂದು ಮಾನ್ಯತೆ ಪಡೆದಿದ್ದರೂ, 2000 ವರ್ಷಗಳ ಇತಿಹಾಸವಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆದಿದ್ದರೂ ಕನ್ನಡ ಭಾಷೆ ಇಂದು ಆತಂಕದ ಪರಿಸ್ಥಿತಿ ಎದುರಿಸುತ್ತಿರುವುದು ದೊಡ್ಡ ದುರಂತ. ಈ ಆತಂಕವನ್ನು ನಿವಾರಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನಗಳು ಮಾಡಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.
 ಅವರು ಗುರುವಾರ ಇಲ್ಲಿನ ಅನಂತಪದ್ಮನಾಭ ದೇವಾಲಯದಲ್ಲಿ ಉಡುಪಿ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಆಂಗ್ಲ ಭಾಷೆಯ ಪ್ರಾಬಲ್ಯ ಎಷ್ಟು ಜೋರಾಗಿದೆ ಎಂದರೆ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿದೆ. ಇದಕ್ಕಿಂತಲೂ ಕನ್ನಡ ಭಾಷೆ ಹೊಟ್ಟೆ ತುಂಬಿಸುವ ಅನ್ನವನ್ನು ನೀಡುವುದಿಲ್ಲ ಎಂಬ ಭ್ರಮೆ ಜನರ ಮನಸ್ಸಿನಲ್ಲಿ ಬೇರೂರಿದೆ. ಪೋಷಕರಿಗೆ ಮಕ್ಕಳ ಭವಿಷ್ಯ ಮುಖ್ಯವಾಗಿದೆ ಹೊರತು ಭಾಷೆಯ ಭವಿಷ್ಯ ಮುಖ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅದೆಷ್ಟೋ ಕನ್ನಡ ಮಾಧ್ಯಮ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುವ ಪರಿಸ್ಥಿತಿಯಲ್ಲಿವೆ. ಈ ಸಂದರ್ಭದಲ್ಲಿ ಕನ್ನಡವನ್ನು ಉಳಿಸಲು ಸರ್ಕಾರ ಮಾತ್ರವಲ್ಲದೆ, ಸಾಹಿತಿಗಳು ಹಾಗೂ ಕನ್ನಡ ಮಾತನಾಡುವ, ಹೋರಾಡುವ ಜನರೆಲ್ಲರೂ ಗಂಭೀರ ಚಿಂತನೆ ಮಾಡಬೇಕಾದ ಅಗತ್ಯ ಇದೆ. ಕನ್ನಡ ಬದುಕನ್ನು ಕಟ್ಟಿಕೊಳ್ಳವ ಭಾಷೆಯಾಗಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಅಂಬಾಯತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಹಿರಿಯ ಚಿತ್ರ ಕಲಾವಿದ ರಮೇಶ್ ರಾವ್, ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ, ರಾಜ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕುಂದಾಪುರದ ಎ.ಎಲ್.ಎನ್. ಹೆಬ್ಬಾರ್  ಶುಭಹಾರೈಸಿದರು.  ಉಡುಪಿ ವಾರ್ತಾಧಿಕಾರಿ ಎಂ. ಜುಂಜಣ್ಣ, ಹಿರಿಯ ಸಾಹಿತಿ ಪಳಕಳ ಸೀತಾರಾಮ ಭಟ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್, ಕಾಸರಗೋಡು ಜಿಲ್ಲೆಯ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ದ.ಕ. ಜಿಲ್ಲೆಯ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಇದ್ದರು.   ಸ್ವಾಗತ ಸಮಿತಿ ಅಧ್ಯಕ್ಷ ಯೋಗೀಶ್ ಭಟ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಸಂಚಾಲಕ ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಂಗಪ್ಪಯ್ಯ ಹೊಳ್ಳ ವಂದಿಸಿದರು.
ಸಮ್ಮೇಳನದ
ಸುತ್ತಮುತ್ತ...
-  ಸಮಾರಂಭದ ಪೂರ್ವದಲ್ಲಿ ಹೆಬ್ರಿ ಬಂಟರ ಭವನದಿಂದ ಸಮ್ಮೇಳನದ ಸಭಾಂಗಣದವರೆಗೂ ಸಮ್ಮೇಳನಾಧ್ಯಕ್ಷರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.
-  ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪುಸ್ತಕ ಮಳಿಗೆಯನ್ನು, ಕಲಾವಿದ ರಮೇಶ ರಾವ್ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು.
-  ಸಮಾರಂಭದಲ್ಲಿ ಜೋಲಿ ಲಾಲಿ, ಹವಿಕ, ಆರೋಗ್ಯವಂತ ಮಹಿಳೆ, ಲಘು- ಬಿಗು, ಸುತ್ತಾಟದ ಸೊಗಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
-  ಸಮ್ಮೇಳನದ ವೇದಿಕೆಯನ್ನು ಕನ್ನಡ ಮತ್ತು ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ತೆಂಗಿನ ಗರಿ, ಅಡಕೆ ಹಾಳೆಗಳಿಂದ ಕಲಾತ್ಮಕವಾಗಿ ಅಲಂಕರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.