ಉಡುಪಿ

ಹೊಟೇಲ್ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Published On :

ಉಡುಪಿ: ಇಲ್ಲಿನ ಕಿದಿಯೂರು ಹೊಟೇಲ್ ಎದುರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ಭಾನುವಾರ ನಡೆದಿದೆ. ಸತೀಶ್ ಅಮಿನ್ ಎಂಬವರು ಉಡುಪಿ ಕಿದಿಯೂರು ಹೊಟೇಲ್ ಎದುರು ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಹೊಟೇಲ್‌ಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಕಳವಾಗಿದೆ. ಕಳವಾದ ಬೈಕಿನ ಮೊತ್ತ 45 ಸಾವಿರ ಎಂದು ಸತೀಶ್ ಅಮೀನ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀಪ್ ಮೇಲೆ ಮರ ಬಿದ್ದು ಐವರಿಗೆ ಗಾಯ
ಸುಬ್ರಹ್ಮಣ್ಯ: ಜೀಪ್ ಮೇಲೆ ಮರ ಬಿದ್ದು ಐದು ಮಂದಿ ಗಾಯಗೊಂಡ ಘಟನೆ ಪಂಜ ಸಮೀಪದ ಕೂತುಕುಂಜ ಎಂಬಲ್ಲಿ ನಡೆದಿದೆ. ಪಂಜ ಆಸುಪಾಸಿನ ನಾರಾಯಣ, ಪದ್ಮಾವತಿ, ರಾಮಣ್ಣ, ವಿನೋದ, ಜ್ಯೋತಿ ಎಂಬವರಿಗೆ ಗಾಯಗಳಾಗಿದ್ದು, ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಗುತ್ತಿಗಾರಿನಿಂದ ಪಂಜಕ್ಕೆ ಜೀಪ್ ಸಾಗುತ್ತಿದ್ದಾಗ ಮರ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಜೀಪ್‌ನಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದು, ಉಳಿದವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
ಬೈಕ್- ಜೀಪ್ ಡಿಕ್ಕಿ: ಸವಾರಗೆ ಗಂಭೀರ ಗಾಯ
ಉಪ್ಪಿನಂಗಡಿ: ಕಡಬ ಠಾಣೆ ವ್ಯಾಪ್ತಿಯ ಎಣ್ಮೂರು ಎಂಬಲ್ಲಿ ಬೈಕ್- ಜೀಪ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪಂಜದ ಆಶೀಶ್ ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಭಿಕಾರಿನಿಂದ ಕಾಣಿಯೂರು ಕಡೆಗೆ ಹೋಗುತ್ತಿದ್ದ ವೇಳೆ ಕಾಣಿಯೂರಿನಿಂದ ಮುದ್ವ ಕಡೆಗೆ ಬರುತ್ತಿದ್ದ ಜೀಪ್ ನಡುವೆ ಡಿಕ್ಕಿ ಸಂಭವಿಸಿದೆ. ಆಶೀಶ್ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಜೀಪ್-ಬೈಕ್ ಡಿಕ್ಕಿ: ಸಹಸವಾರಗೆ ತೀವ್ರ ಗಾಯ
ಉಪ್ಪಿನಂಗಡಿ: ರಾ.ಹೆ. 75ರ ಉಪ್ಪಿನಂಗಡಿಯಲ್ಲಿ ಜೀಪ್- ಬೈಕ್ ಡಿಕ್ಕಿಯಾಗಿ  ಬೈಕ್ ಸಹಸವಾರ ಗಂಭೀರ ಗಾಯಗೊಂದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕೊಯಿಲ ಗ್ರಾಮದ ಸಬಳೂರು ನಿವಾಸಿ ಚಂದಪ್ಪ ಗೌಡ ಕಾಲಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
  ಚಂದಪ್ಪ ಗೌಡ ಹಾಗೂ ಬೆಳ್ಳಿಯಪ್ಪ ಎಂಬವರು ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಎದುರುಗಡೆಯಿಂದ ಬಂದ ಜೀಪ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್‌ನ ಹಿಂಬದಿ ಕೂತಿದ್ದ ಚಂದಪ್ಪ ಗೌಡ ರಸ್ತೆಗೆ ಎಸೆಯಲ್ಪಟ್ಟು ಕಾಲು ಗಂಭೀರ ಸ್ವರೂಪದ ಮುರಿತಕ್ಕೆ ಒಳಗಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಚಿನ್ನದ ಸರ ಅಪಹರಣ
ಮಂಗಳೂರು: ಬಲ್ಮಠ ವಾಕ್‌ಲೇನ್ ಬಳಿ ನಡೆದುಕೊಂಡು ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವತಿಯ ಚಿನ್ನದ ಸರ ಅಪಹರಿಸಿದ್ದಾರೆ. ಕೆಎಂಸಿ ಆಸ್ಪತ್ರೆ ನರ್ಸ್ ಪ್ರಮೀಳಾ (24) ಕೆಲಸ ಮುಗಿಸಿ ಗೆಳತಿ ನಂದಿನಿ ಜತೆ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಮಿಷನ್ ಕಂಪೌಂಡ್‌ನತ್ತ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಕಳ್ಳರು ಕುತ್ತಿಗೆಯಲ್ಲಿದ್ದ 14 ಗ್ರಾಮ್ ತೂಗುವ ಚಿನ್ನದ ಸರ ಕಳವು ಮಾಡಿದ್ದಾರೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪಸ್ಮಾರ; ತೋಡಿಗೆ ಬಿದ್ದು ಯುವಕ ಸಾವು
ಸುಬ್ರಹ್ಮಣ್ಯ: ಸಮೀಪದ ನೂಚಿಲ ಎಂಬಲ್ಲಿ ಅಪಸ್ಮಾರ ಕಾಯಿಲೆಯಿಂದ ತೋಡಿಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಪಲತ್ತೂರು ನಿವಾಸಿ ಮುದರ ಎಂಬವರ ಮಗ ರವಿ (22) ಮೃತರು. ಅವರು ಸುಬ್ರಹ್ಮಣ್ಯದ ಖಾಸಗಿ ಗುತ್ತಿಗೆದಾರರ ಬಳಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಶೌಚಕ್ಕೆಂದು ತೋಡಿಗೆ ಹೋದಾಗ ಈ ಘಟನೆ ಸಂಭವಿಸಿದೆ.
ಶಾಲೆ ಬಾಗಿಲು ಮುರಿದ ಕಳ್ಳರು
ಮಂಗಳೂರು: ಕಂಕನಾಡಿ ಸೇಂಟ್ ಜೋಸೆಫ್ ಶಾಲೆಗೆ ಬಾಗಿಲು ಮುರಿದ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಬಾಗಿಲು ಮತ್ತು ಕಿಟಕಿ ರಾಡ್ ಬೆಂಡ್ ಮಾಡಿದ್ದಾರೆ. ಆದರೆ ಯಾವುದೇ ಸೊತ್ತು ಕಳವಾಗಿಲ್ಲ. ಬುಧವಾರ ಸಂಜೆ 5 ಗಂಟೆ ಶಾಲೆ ಬಾಗಿಲು ಬಂದ್ ಮಾಡಿ ಹೋಗಿದ್ದು, ಶುಕ್ರವಾರ ಬೆಳಗ್ಗೆ 8.20ಕ್ಕೆ ಬಂದು ನೋಡುವಾಗ ಬಾಗಿಲು ಮುರಿದಿರುವುದು ಕಂಡು ಬಂತು ಎಂಗು ಮುಖ್ಯ ಶಿಕ್ಷಕಿ ಸೆಲಿನಾ ದೂರು ನೀಡಿದ್ದಾರೆ.
ರಿಕ್ಷಾ ತಡೆದು ಹಲ್ಲೆ
ಮಂಗಳೂರು: ಬಜಪೆ ಹಳೆ ವಿಮಾನ ನಿಲ್ದಾಣ ಬಳಿ ರಿಕ್ಷಾದಲ್ಲಿ ಬರುತ್ತಿದ್ದ ಅಶೋಕ್ ಎಂಬವರ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದೆ. ನಾರಾಯಣ ಬೋವಿ, ಪೂವಪ್ಪ, ಸುನೀಲ್ ಸೇರಿಕೊಂಡು ಬುಧವಾರ ಆಟೋ ರಿಕ್ಷಾ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂಗಡಿಯಿಂದ ಅಡಕೆ ಕಳವು
ವಿಟ್ಲ: ಅಡಕೆ ವ್ಯಾಪಾರಸ್ಥರೊಬ್ಬರ ಅಂಗಡಿಯಿಂದ ಸುಮಾರು 780 ಕೆ.ಜಿ. ಅಡಕೆ ಕಳವಾದ ಘಟನೆ ಕನ್ಯಾನದಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಕನ್ಯಾನ ಕೆಳಗಿನ ಪೇಟೆಯ ಬಾಳೆಕೋಡಿ ಮೋನು ಮತ್ತು ಪನೆಯಡ್ಕ ಮಹಮ್ಮದ್ ಸಿ.ಎಂ.ಗೆ ಸೇರಿದ ಅಡಕೆ ಅಂಗಡಿಯಿಂದ ಬುಧವಾರ ರಾತ್ರಿ ಸುಮಾರು 65 ಕೆ.ಜಿ. ತೂಕದ 12 ಗೋಣಿ ಚೀಲ ಅಡಕೆ ಕಳವಾಗಿದ್ದು, ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಶಿಕ್ಷಣಾಧಿಕಾರಿ ಕಚೇರಿಯಿಂದ ಪಠ್ಯ ಪುಸ್ತಕ ಕಳವು
ಉಡುಪಿ: ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಠ್ಯ ಪುಸ್ತಕ ಮಳಿಗೆಯಿಂದ ಪುಸ್ತಕಗಳನ್ನು ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಈ ಮಳಿಗೆಯು ನಗರದ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿದ್ದು, ಇದರ ಒಂದು ಭಾಗದಲ್ಲಿ ಉಚಿತ ಪಠ್ಯ ಪುಸ್ತಕಗಳನ್ನು ಮತ್ತು ಇನ್ನೊಂದು ಭಾಗದಲ್ಲಿ ಮಾರಾಟ ಪಠ್ಯಪುಸ್ತಕಗಳನ್ನು ಇಡಲಾಗಿದ್ದು, ಬುಧವಾರ ಕಚೇರಿಯ ಶಿಕ್ಷಣ ಸಂಯೋಜಕರು ಪುಸ್ತಕಗಳನ್ನು ವಿತರಿಸಿ ಸಂಜೆ ಬೀಗ ಹಾಕಿ ಹೋಗಿದ್ದರು. ರಾತ್ರಿ ಕಚೇರಿಯ ಹೆಂಚುಗಳನ್ನು ತೆಗೆದು ಒಳನುಗ್ಗಿ 2ನೇ ತರಗತಿಯ ಗಣಿತ 150 ಪುಸ್ತಕಗಳು, 5ನೇ ತರಗತಿಯ 200 ಪುಸ್ತಕಗಳು, 8ನೇ ತರಗತಿ ವಿಜ್ಞಾನ 150 ಪುಸ್ತಕಗಳು, 9ನೇ ತರಗತಿ 350 ಪುಸ್ತಕ ಮತ್ತು ಇತರ ಪುಸ್ತಕಗಳನ್ನು ಕಳವು ಮಾಡಲಾಗಿದೆ. ಕಳವಾದ 850 ಪುಸ್ತಕಗಳ ಮೌಲ್ಯ ಅಂದಾಜು ರು. 24,000. ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ವಸಂತ ಶೆಟ್ಟಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದುಹೋಗಿದ್ದ ಬ್ಯಾಗ್
ಪತ್ತೆಮಾಡಿದ ರೇಲ್ವೆ ಸಿಬ್ಬಂದಿ
ಮಂಗಳೂರು: ಚೆನ್ನೈ ಎಗ್‌ಮೋರ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳೆದುಹೋದ ರು. 1.32 ಲಕ್ಷ ನಗದು ಮೊತ್ತವನ್ನು ರೇಲ್ವೆ ಸಿಬ್ಬಂದಿ ಹಿಂದಿರುಗಿಸಿದ್ದಾರೆ.  ಅಬ್ದುಲ್ ಫತಾಹ್ ಎಂಬವರು ಕಣ್ಣೂರು-ಪಯ್ಯನ್ನೂರು ಮಧ್ಯೆ ಪ್ರಯಾಣಿಸುತ್ತಿದ್ದಾಗ ನಗದು, ಅಮೂಲ್ಯ ದಾಖಲೆಪತ್ರಗಳಿದ್ದ ಬ್ಯಾಗ್ ಕಳೆದುಹೋಗಿತ್ತು. ಈ ಬಗ್ಗೆ ರೇಲ್ವೆ ವಾಣಿಜ್ಯ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದರು. ಈ ವಿಚಾರವನ್ನು ರೇಲ್ವೆ ಟ್ರಾವಲಿಂಗ್ ಟಿಕೆಟ್ ಎಕ್ಸಾಮಿನರ್(ಟಿಟಿಇ)ಪರಮೇಶ್ವರನ್‌ಗೆ ಮಾಹಿತಿ ನೀಡಿದರು. ಕೂಡಲೇ ರೈಲಿನ ಬೋಗಿಯಲ್ಲಿ ಪತ್ತೆಮಾಡಿದ ಸಿಬ್ಬಂದಿಗಳು, ಬ್ಯಾಗ್‌ನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಿಂದಿರುಗಿಸಿದರು. ಬ್ಯಾಗ್‌ನ್ನು ನೀಲೇಶ್ವರದಲ್ಲಿ ಅಬ್ದುಲ್ ಪಡೆದುಕೊಂಡರು. ಬ್ಯಾಗ್‌ನಲ್ಲಿ ನಗದು ರು. 1.32 ಲಕ್ಷ, ದಾಖಲೆಗಳು ಸುರಕ್ಷಿತವಾಗಿತ್ತು.
  ಬ್ಯಾಗ್ ಪತ್ತೆಮಾಡಿದ ಟಿಟಿಇ ಪರಮೇಶ್ವರನ್‌ಗೆ ಫಾಲ್ಘಾಟ್ ವಿಭಾಗ ಮುಖ್ಯಸ್ಥ ಪಿಯೂಷ್ ಅಗರ್‌ವಾಲ್ ರು. 1 ಸಾವಿರ ನಗದು ಬಹುಮಾನ ನೀಡಿದ್ದಾರೆ. ವಿಭಾಗೀಯ ಹಿರಿಯ ವಾಣಿಜ್ಯ ಅಧಿಕಾರಿ ಧನಂಜಯನ್ ಶಿಫಾರಸ್ಸು ಮಾಡಿದ್ದರು ಎಂದು ರೇಲ್ವೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.