ಗಡಿಭಾಗದ ಕನ್ನಡಿಗರ ಗ್ರಾಮದಲ್ಲಿ ಹರಿಯುತ್ತಿದೆ ಎಂಡೋ ವಿಷ
ಮಂಗಳೂರು: ರಾಜ್ಯದ ಗಡಿಯಲ್ಲಿರುವ ಪುತ್ತೂರು ತಾಲೂಕು ಸುಳ್ಯಪದವು ನೆಟ್ಟಣಿಗೆ ಮುಡ್ನೂರಲ್ಲಿ ಕೇರಳ ಗೇರು ಅಭಿವೃದ್ಧಿ ನಿಗಮದ ಎಂಡೋಸಲ್ಫಾನ್ ಹುಗಿದು ಹಾಕಿ ಪರಿಸರ ವಿಷಮಯವಾಗಿದ್ದು, ಅಲ್ಲಿಂದ ರಾಜ್ಯದ ಜನರನ್ನು ಸ್ಥಳಾಂತರ ಮಾಡಬೇಕು ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನ್‌ಭಾಗ್ ಆಗ್ರಹಿಸಿದ್ದಾರೆ.
ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಶುಕ್ರವಾರ ಮಾಧ್ಯಮಗಳಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮಕ್ಕೆ ತಾಗಿಯೇ ಕೇರಳದ ನೂರಾರು ಎಕರೆ ಪ್ರದೇಶದಲ್ಲಿ ಗೇರು ನಿಗಮ ತೋಟಗಳಿವೆ ಇಲ್ಲಿ 2 ದಶಕಗಳ ಕಾಲ ಹೆಲಿಕಾಪ್ಟರ್‌ನಲ್ಲಿ ವರ್ಷಕ್ಕೆ ಮೂರು ಬಾರಿ ಎಂಡೋಸಲ್ಫಾನ್ ಸುರಿದಿದ್ದಾರೆ. ಪಕ್ಕದಲ್ಲಿಯೇ ಇರುವ ರಾಜ್ಯದ ನೆಟ್ಟಣಿಗೆ ಮುಡ್ನೂರು ಗ್ರಾಮಸ್ಥರು ಎಂಡೋ ದುರಂತದ ಬಲಿಪಶುಗಳಾಗಿದ್ದಾರೆ.
ಈಗಾಗಲೇ ಗ್ರಾಮದ 15 ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಈ ಗ್ರಾಮದ ಕರ್ನೂರ್ ಮಹಮ್ಮದ್ ಅವರ ಇಬ್ಬರು ಮಕ್ಕಳು ಸೇಫಿಯಾ ಫೌಸಿಯಾ ಹುಟ್ಟು ಕಿವುಡರು. ನಿರಂಜನ್ ಎರಡು ವರ್ಷದ ಮಗು ಶ್ವಾಸಕೋಶ ವಾತದಿಂದ ನರಳುತ್ತಿದೆ, ಮಾಲಿಂಗ ಪಾಟಾಳಿಯವರ ಮಕ್ಕಳಾದ ಪ್ರಶಾಂತ್ ಹಾಗೂ ಭವ್ಯ ಹುಟ್ಟಿನಿಂದಲೇ ಅಂಗವಿಕಲರು. ಹತ್ತು ವರ್ಷದ ನಿಜಾಮುದ್ದೀನ್‌ಗೆ ಬುದ್ಧಿಮಾಂದ್ಯದ ಜತೆಗೆ ಕಣ್ಣು ಕಾಣಿಸುವುದಿಲ್ಲ. ಈ ಗ್ರಾಮದಿಂದ ಒಟ್ಟು 130 ಮಂದಿ ಅಂಗವಿಕಲರು ಪುತ್ತೂರಲ್ಲಿ ನಡೆದ ಎಂಡೋಸಲ್ಫಾನ್ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ದಾಖಲೆಗಳಿವೆ.
ಈ ನಡುವೆ ಎಂಡೋಸಲ್ಫಾನ್ ಭೂಮಿ ಒಳಗೆ ಹುಗಿದು ಅಧಿಕಾರಿಗಳು ಬಚ್ಚಿಟ್ಟು ಇನ್ನೊಂದು ದುರಂತಕ್ಕೆ ನಾಂದಿ ಹಾಡಿದ್ದಾರೆ. ನೆಂಜುಪರಂಬ ಗೇರುತೋಟದಲ್ಲಿ ಎಂಡೋ ಸಲ್ಫಾನ್ ವಿಷಕಾರಕ ಗುಣಗಳು ಬಗ್ಗೆ ಜನಜಾಗೃತಿ ಮೂಡಿದ ಬಳಿಕ 2001ರಲ್ಲಿ ಗೇರು ನಿಗಮ ಈ ಕೀಟನಾಶಕ ಸಿಂಪಡಣೆ ನಿಲ್ಲಿಸಿತ್ತು.
ಕಾಸರಗೋಡು ಜಿಲ್ಲಯೆ ವಿವಿಧ ಗೋಡೌನ್‌ನಗಳಲ್ಲಿ ದಾಸ್ತಾನಿದ್ದ ಕೀಟನಾಶಕ ನಾಶಪಡಿಸಲು ಕೆಲ ಸಮಯದ ಹಿಂದೆ ನಾಗಪುರದಿಂದ ರಾಸಾಯನಿಕ ತಜ್ಞರು ಆಗಮಿಸಿದ್ದರು. ಅಲ್ಲಿನವರು ಆಕ್ಷೇಪ ವ್ಯಕ್ತಪಡಿಸಿದ್ದರು. ದಾಸ್ತಾನು ಎಂಡೋವನ್ನು ಬೇರೆಡೆ ಸಾಗಿಸಲು ಆಗ್ರಹಿಸಿದರು. ಇದರಿಂದ ಕಿರಿಕಿರಿಗೊಳಗಾದ ನಿಗಮದ ಅಧಿಕಾರಿಗಳು ಗಡಿಭಾಗದ ನೆಟ್ಟಣಿಗೆ ಗುಡ್ಡದಲ್ಲಿರುವ ಹಾಳು ಬಾವಿಗೆ ಸುರಿದು ಮಣ್ಣು ತುಂಬಿದರು.
ಈ ವಿಚಾರವನ್ನು ಇತ್ತೀಚೆಗೆ ನಿವೃತ್ತರಾದ ತೋಟದ ಕಾವಲುಗಾರ ಅಚ್ಚುತ ಮಣಿಯಾಣಿ ಸ್ಥಳೀಯರಿಗೆ ತಿಳಿಸಿರುವುದರಿಂದ ಹಗರಣ ಬೆಳಕಿಗೆ ಬಂದಿದೆ.
2005ರಲ್ಲಿ ಕೀಟನಾಶಕದ ಹಲವಾರು ಕಂಟೈನರ್ ಬಾವಿಗೆ ಎಸೆಯಲಾಗಿತ್ತು. 2013ರ ಫೆಬ್ರವರಿಯಲ್ಲಿ ಹಲವಾರು ಮೂಟೆ ಎಂಡೋ ಸುರಿಯಲಾಗಿತ್ತು.
ಮುಚ್ಚಿರುವ ಬಾವಿ ದಂಡೆ ಮೇಲಿರುವ ಮರಗಿಡಗಳು ಕರಟಿ ಕಲಕಲಾಗಿದೆ. ಎತ್ತರದ ಪ್ರದೇಶದಲ್ಲಿ ಬಾವಿ ಇದ್ದು, ಪಕ್ಕದ ತಗ್ಗು ಪ್ರದೇಶ ಕರ್ನಾಟಕಕ್ಕೆ ಸೇರಿದೆ. ಮೇಲಿಂದ ನೀರು ರಾಜ್ಯದ ತೋಡುಗಳಲ್ಲಿ ಹರಿಯುತ್ತಿದ್ದು, ಬಾವಿಯ ಅಂತರ್ಜಲದಲ್ಲಿಯೂ ಸೇರಿರುವ ಸಾಧ್ಯತೆಗಳಿವೆ.
ಕೇರಳ ವಿಜ್ಞಾನ ಮತ್ತು ಪರಿಸರ ನಿರ್ದೇಶನಾಲಯಕ್ಕೆ ಈ ವಿಚಾರ ತಿಳಿದಿದ್ದು, ಕೂಡಲೇ ತನಿಖೆ ನಡೆಸಲು ಕ್ಯಾಲಿಕಟ್ ನಲ್ಲಿರುವ ಕೇಂದ್ರೀಯ ನೀರಿನ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆಗೆ ಆದೇಶ ನೀಡಿದ್ದಾರೆ. ವರದಿ ಇನ್ನಷ್ಟೇ ಬರಬೇಕಿದೆ.
ಎಂಡೋ ದುಷ್ಪರಿಣಾಮದಿಂದ ಹಲವು ದಶಕಗಳ ಕಾಲ ಈ ಪ್ರದೇಶ ಜನರ ವಾಸಕ್ಕೆ ಅಯೋಗ್ಯ ಎಂದು ಘೋಷಿಸಬೇಕಾಗುತ್ತದೆ. ಬಾವಿಗೆ ಈಗಾಗಲೇ ಮಣ್ಣು ಮುಚ್ಚಿರುವುದರಿಂದ ಮಣ್ಣು ತೆಗೆದು ಶುಚಿ ಮಾಡುವುದು ಸಾಧ್ಯವಿಲ್ಲ. ಅಲ್ಲಿನ ಜನರನ್ನು ಆ ಹಳ್ಳಿಯಿಂದ ಬೇರೆಡೆ ವರ್ಗಾಯಿಸುವುದೆ ಬೇರೆ ಮಾರ್ಗವಿಲ್ಲ ಎಂದು ಶಾನ್‌ಭಾಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

