ಉಡುಪಿ

ಉಡುಪಿ: ಇಳಿದ ಮಳೆ, ಏರುತ್ತಿದೆ ಕಡಲು ಕೊರೆತ

Published On :

ಉಡುಪಿ: ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದರೂ ಸಮುದ್ರ ಕೊರೆತ ಮಾತ್ರ ತೀವ್ರವಾಗಿದೆ. ಪಡುಬಿದ್ರಿ, ಉದ್ಯಾವರದ ಒಂದೆರಡು ಕಡೆಗಳಲ್ಲಿ ಆರಂಭವಾಗಿದ್ದ ಕೊರೆತ ಇದೀಗ ಸಮುದ್ರದುದ್ದಕ್ಕೂ ಆರಂಭವಾಗಿದೆ.
ಕೆಲವು ಕಡೆಗಳಲ್ಲಿ ತೀವ್ರವಾಗಿ ಭೂಮಿ ಸಮುದ್ರ ಪಾಲಾಗುತ್ತಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ತೆಂಗಿನ ತೋಟಕ್ಕೆ ಸಮದ್ರದ ನೀರು ನುಗ್ಗಿದೆ.
ಶುಕ್ರವಾರ ರಾತ್ರಿ ಸಮುದ್ರ ಭಾರಿ ಪ್ರಕ್ಷುಬ್ಧಗೊಂಡಿದ್ದು, ಪಡುಬಿದ್ರಿಯ ತೆಂಕ, ಉದ್ಯಾವರ, ಮಟ್ಟು, ಕನಕೋಡ, ಮಲ್ಪೆ, ಪಡುಕರೆ, ಮರವಂತೆ, ಸಿದ್ದಾಪುರ, ಗಂಗೊಳ್ಳಿ ಮುಂತಾದ ಪ್ರದೇಶಗಳಲ್ಲಿ ಕೊರೆತದಿಂದ ಸಾವಿರಾರು ಮೀಟರ್ ಭೂಮಿ ಸಮುದ್ರದ ಪಾಲಾಗಿದೆ.
ಉದ್ಯಾವರ ಪಡುಕರೆಯಲ್ಲಿ ಸಮುದ್ರ ಸುಮಾರು 50 ಮೀ.ನಷ್ಟು ಮುಂಚಾಚಿದ್ದು, ಇಲ್ಲಿನ ಮೀನುಗಾರಿಕಾ ರಸ್ತೆ ಅಪಾಯಕ್ಕೆ ಸಿಲುಕಿದೆ. ಶುಕ್ರವಾರ ರಾತ್ರಿ ಭಾರಿ ಗಾತ್ರದ ಅಲೆಗಳೂ ರಸ್ತೆ ದಾಟಿ ತೆಂಗಿನ ತೋಟಕ್ಕೂ ನುಗ್ಗಿವೆ. ಉದ್ಯಾವರದ ಹನುಮಾನ್ ಮಂದಿರ ಬಳಿ ಕೊರೆತ ತೀವ್ರಗೊಂಡಿದ್ದು, ಇಲ್ಲಿನ 10ಕ್ಕೂ ಹೆಚ್ಚು ಮನೆ ಮಂದಿ ಆತಂಕದಲ್ಲಿದ್ದಾರೆ. ಹತ್ತಾರು ತೆಂಗಿನ ಮರಗಳು, ನಾಲ್ಕೈದು ವಿದ್ಯುತ್ ಕಂಬಗಳು ಕೂಡ ಅಪಾಯದ ಅಂಚಿನಲ್ಲಿವೆ.
ಅಲ್ಲಲ್ಲಿ ಹಾನಿ: ಶುಕ್ರವಾರ ಹಗಲಿನಲ್ಲಿ ಮಳೆ ಕಡಿಮೆಯಾಗಿದ್ದರೂ, ರಾತ್ರಿ ಗಾಳಿ- ಮಳೆ ಜೋರಾಗಿತ್ತು.
 ಶನಿವಾರವೂ ಹಗಲಲ್ಲಿ ಬಿಸಿಲಿನ ವಾತಾವರಣ ಇತ್ತು, ಸಂಜೆಯಾಗುತ್ತಿದ್ದಂತೆ ಮಳೆ ಆರಂಭವಾಗಿತ್ತು.
ಶುಕ್ರವಾರ ರಾತ್ರಿ ಉಡುಪಿಯ ಬೆಳ್ಳಂಪಳ್ಳಿಯ ಗುಡ್ಡೆಯಂಗಡಿ ರಾಜೇಶ್ ಕುಲಾಲ್ ಎಂಬವರ ಮನೆಗೆ ಮರ ಬಿದ್ದು ರು. 75 ಸಾವಿರ ನಷ್ಟ ಸಂಭವಿಸಿದೆ ಹಾಗೂ ರಾಜೇಶ್ ಮತ್ತು ರತ್ನಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟಿನ ಅಶೋಕ ನಾಯಕ್ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿ 15 ಸಾವಿರ ನಷ್ಟವಾಗಿದೆ.
ಕಾರ್ಕಳ ನಂದಳಿಕೆ ಗ್ರಾಮದ ಉಮೇಶ ಪೂಜಾರಿ ಮನೆಗೆ ಸಾಗುವಾನಿ ಮರ ಬಿದ್ದು ಭಾಗಶಃ ಹಾನಿಯಾಗಿ ರು. 5 ಸಾವಿರ ನಷ್ಟ ಸಂಭವಿಸಿದೆ.
ಜಿಲ್ಲೆಯ ಮಳೆ ವಿವಿರ: ಜಿಲ್ಲೆಯಲ್ಲಿ ಶನಿವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಸರಾಸರಿ 18.76 ಮಿಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 14.70 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 10.8 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 30.8 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.