ಉಡುಪಿ: 262 ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರ
ಉಡುಪಿ: ಜಿಲ್ಲೆಯ 1 ನಗರಸಭೆ, 2 ಪುರಸಭೆ ಮತ್ತು 1 ಪಟ್ಟಣ ಪಂಚಾಯತ್ಗಳ 95 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಿರುವ 262 ಮಂದಿ ಅಭ್ಯರ್ಥಿಗಳ ಹಣೆಬರಹ ಗುರುವಾರ 148 ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ದಾಖಲಾಗಿದೆ. ಮತದಾರರು ಯಾರ ಹಣೆಬರಹವನ್ನು ಹೇಗೆ ಬರೆದಿದ್ದಾರೆ ಎನ್ನುವುದು ಸೋಮವಾರ ಬಹಿರಂಗಗೊಳ್ಳಲಿದೆ.
ಗುರುವಾರ ಈ ನಾಲ್ಕೂ ನಗರಾಡಳಿತ ಸಂಸ್ಥೆಗಳಿಗೆ 148 ಮತಗಟ್ಟೆಗಳಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಅತ್ಯಂತ ಶಾಂತಿಯುತವಾಗಿ ನಡೆಯಿತು. ಮುಂಜಾನೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೇ ಸರದಿ ಸಾಲಿನಲ್ಲಿ ಮಹಿಳೆಯರೇ ಹೆಚ್ಚು ಕಂಡು ಬರುತ್ತಿದ್ದರು. ಪ್ರತಿಯೊಂದು ಮತಗಟ್ಟೆಗಳ ಹೊರೆಗೆ ಜಿಲ್ಲೆಯ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ನ ಜತೆಗೆ ಕೆಲವು ಕಡೆಗಳಲ್ಲಿ ಜೆಡಿಎಸ್, ಸಿಪಿಎಂ, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳ ತಾತ್ಕಾಲಿಕ ಬೂತುಗಳಲ್ಲಿ ಆಯಾ ಪಕ್ಷದ ಕಾರ್ಯಕರ್ತರು ಚೀಟಿ ಕೊಡುವ ನೆಪದಲ್ಲಿ ಮತದಾರರನ್ನು ಒಲಿಸಿಕೊಳ್ಳುವ ಕೊನೆಯ ಕ್ಷಣದ ಪ್ರಯತ್ನಗಳು ನಡೆಯುತ್ತಿದ್ದುವಾದರೂ, ಯಾವುದೇ ಆತಂಕಕಾರಿ ಘಟನೆಗಳು ನಡೆದಿಲ್ಲ. ನಿಷೇಧ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ವಾಹನಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವ ವ್ಯವಸ್ಥೆ ಕೂಡ ಜಾರಿಯಲ್ಲಿತ್ತು.
ಸಂಜೆ 6 ಗಂಟೆಯ ಹೊತ್ತಿಗೆ ಉಡುಪಿ ನಗರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳ ಮತದಾನ ಯಂತ್ರಗಳನ್ನು ಉಡುಪಿ ನಗರದ ಸೈಂಟ್ ಸಿಸಿಲೀಸ್ ಪ್ರೌಢಶಾಲೆಗೆ ತಂದು ಸಂಗ್ರಹಿಸಲಾಗಿದೆ.
ಅದೇ ರೀತಿ ಕಾರ್ಕಳ ಪುರಸಭೆಯ ಮತದಾನ ಯಂತ್ರಗಳನ್ನು ಕಾರ್ಕಳ ತಾಲೂಕು ಕಚೇರಿ (ಮಿನಿ ವಿಧಾನಸೌಧ) ಮತ್ತು ಕುಂದಾಪುರ ಪುರಸಭೆಯ ಮತದಾನ ಯಂತ್ರಗಳನ್ನು ಶಾಸ್ತ್ರಿ ಸರ್ಕಲ್ನ ಕೊಯಕುಟ್ಟಿ ಸಭಾಂಗಣದಲ್ಲಿ ಸಂಗ್ರಹಿಸಲಾಗಿದೆ. ಈ ಮತಯಂತ್ರಗಳಿಗೆ ಸೋಮವಾರದವರೆಗೆ ಬಿಗಿ ಕಾವಲು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

