ನಕ್ಸಲರ ಹೊಸ ತಂತ್ರ?
ಕ.ಪ್ರ. ವಾರ್ತೆ , ಉಡುಪಿ , ಮೇ 15
ನಕ್ಸಲರು ಮತ್ತು ಅವರು ನೀಡುವ ಚುನಾವಣಾ ಬಹಿಷ್ಕಾರದ ಕರೆಗಳು, ಆ ಬಗ್ಗೆ ಅವರು ಹಂಚುವ ಕರಪತ್ರಗಳು, ಹಚ್ಚುವ ಪೋಸ್ಟರುಗಳು ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲೂ ಕರೆನಾಡು-ಮಲೆನಾಡು ಜಿಲ್ಲೆಗಳ ಪೊಲೀಸರಿಗೆ ದೊಡ್ಡ ತಲೆನೋವಾಗುತ್ತಿತ್ತು.
ಆದರೆ, ಈ ಬಾರಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆ ರೀತಿಯ ಯಾವುದೇ ಘಟನೆಗಳೂ ಬೆಳಕಿಗೆ ಬಂದಿರಲಿಲ್ಲ. ಈ ಪ್ರದೇಶದಲ್ಲಿ ನಕ್ಸಲರು ಇಲ್ಲವೇನೋ, ಕಾಲ್ಕಿತ್ತಿದ್ದಾರೇನೋ ಎಂಬಂತಿತ್ತು ಪರಿಸ್ಥಿತಿ.
ಆದರೆ, ಚುನಾವಣೆಗಳು ಮುಗಿದ ವಾರದಲ್ಲಿಯೇ ಚಿಕ್ಕಮಗಳೂರಿನ ಕೆರೆಕಟ್ಟೆ ಸಮೀಪ ಹೆಗ್ಗಾನೆ ಎಂಬಲ್ಲಿ ನಕ್ಸಲರು ಪೊಲೀಸರ ಮೇಲೆ ಗುಂಡು ಹಾರಿಸುವ ಮೂಲಕ, 'ನಾವಿನ್ನೂ ಇಲ್ಲೇ ಇದ್ದೇವೆ' ಎಂಬುದನ್ನು ತೋರಿಸಿಕೊಟಿದ್ದು, ಸ್ವಲ ದಿನ ಸುಮ್ಮನಿದ್ದು ಹೊಸ ಕಾರ್ಯತಂತ್ರ ರೂಪಿಸುತ್ತಿರುವ ಸುಳಿವು ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಕಾಣಿಸಿಕೊಂಡಿದ್ದವು. ನಂತರ ಈ ಚಟುವಟಿಕೆ ಕೊಡಗು ಜಿಲ್ಲೆಗೂ ವರ್ಗಗೊಂಡಿದ್ದವು. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದೊಂದು ವರ್ಷದಿಂದ ಇಲ್ಲವೆನ್ನುವಷ್ಟು ನಕ್ಸಲರ ಓಡಾಟ ಕಡಿಮೆಯಾಗಿತ್ತು.
ನಕ್ಸಲರ ಕರೆಗೆ ತಿರಸ್ಕಾರ: 2004ರ ನಂತರ ನಡೆದ ನಾಲ್ಕೈದು ಚುನಾವಣೆಗಳನ್ನು ಬಹಿಷ್ಕರಿಸುವಂತೆ ನಕ್ಸಲರು ನೀಡಿದ ಕರೆಯನ್ನು ಗ್ರಾಮಸ್ಥರು ಸಾರಾಸಗಟಾಗಿ ತಿರಸ್ಕರಿಸಿದ್ದರು. 2008ರಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನಾ ದಿನ ಕಾರ್ಕಳ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಪೊಲೀಸರ ಮಾಹಿತಿದಾರ, ಶಿಕ್ಷಕ ಭೋಜ ಶೆಟ್ಟಿ ಮತ್ತು ಅವರ ಸಂಬಂಧಿ ಸುರೇಶ ಶೆಟ್ಟಿ ಎಂಬವರನ್ನು ಕೊಂದ ನಕ್ಸಲೀಯರು ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದರು. ಆದರೂ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಶೇ.80ರಷ್ಟು ಮತದಾನವಾಗಿ, ಪ್ರಜಾಪ್ರಭುತ್ವದಲ್ಲಿ ತಮಗಿರುವ ವಿಶ್ವಾಸವನ್ನು ಜನರು ವ್ಯಕ್ತಪಡಿಸಿದ್ದರು.
ನಕ್ಸಲರ ಸಂಖ್ಯೆ ಕಡಿಮೆಯಾಗುತ್ತಿದೆ: ಈ ಬೆಳವಣಿಗೆ ಬಂದೂಕು ಹಿಡಿದು 'ಪ್ರಜಾರಾಜ್ಯ' ಕನಸು ಕಾಣುತ್ತಿರುವ ನಕ್ಸಲರ ನಿರಾಶೆಗೆ ಕಾರಣವಾಗಿತ್ತು. ತಮ್ಮೊಂದಿಗೆ ಇರುವಂತೆ ಕಾಣುವ ಕಾಡಂಚಿನ ಗ್ರಾಮಸ್ಥರು ತಮ್ಮ ಜತೆಯಿಲ್ಲ ಎಂಬುದು ಅವರಿಗೆ ಖಾತ್ರಿಯಾಗಿತ್ತು. ಅಲ್ಲದೇ ಪೊಲೀಸರೂ ಕೆಲವು ನಕ್ಸಲ್ ನಾಯಕರನ್ನು ಕೊಂದಿದ್ದರಿಂದ ಅವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಈ ಬಾರಿಯಂತೂ ಚುನಾವಣೆ ಬಗ್ಗೆ ನಕ್ಸಲರು ತುಟಿಪಿಟಿಕ್ಕೆಂದಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

