ಮೂಡಬಿದರೆಯಲ್ಲಿ ಯಕ್ಷಗಾನ ಬೊಂಬೆಯಾಟ
ಕಾಸರಗೋಡು: ಡಾ. ಎಂ. ಮೋಹನ ಆಳ್ವ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ನಡೆದ ಒಂಭತ್ತನೇ ವರ್ಷದ ರಾಷ್ಟ್ರೀಯ ಸಮ್ಮೇಳನ 'ನುಡಿಸಿರಿ'ಯಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಯಕ್ಷಗಾನ ಬೊಂಬೆಯಾಟ ಜನಮನ ಸೆಳೆಯಿತು.
ಆಳ್ವಾಸ್ ನುಡಿಸಿರಿಯ ಪ್ರಥಮ ದಿನ ರಾತ್ರಿ ಕೊಯಿರಾ ಎನ್. ಬಾಳಪುಣಿ ವೇದಿಕೆಯಲ್ಲಿ 'ನರಕಾಸುರ ವಧೆ- ಗರುಡ ಗರ್ವಭಂಗ' ಯಕ್ಷಗಂಧರ್ವ ಲೋಕವನ್ನು ಸೃಷ್ಟಿಸಿತು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ ಅವರ ನೇತೃತ್ವದಲ್ಲಿ ಡಾ. ಕೆ.ವಿ. ಓಂಪ್ರಕಾಶ್, ಕೆ.ವಿ. ತಿರುಮಲೇಶ್, ಕೆ.ವಿ. ಸುದರ್ಶನ್, ಚಂದ್ರಶೇಖರ ವಿ., ಕುಮಾರಸ್ವಾಮಿ ಸಹ ಸೂತ್ರಧಾರಿಗಳಾಗಿ ಸಹಕರಿಸಿದರು.
ಕನ್ನಡ ನಾಡುನುಡಿಯ ಹಬ್ಬವಾಗಿ ಗಮನ ಸೆಳೆದ ಆಳ್ವಾಸ್ ನುಡಿಸಿರಿಯಲ್ಲಿ ರಾಷ್ಟ್ರದ ಮೂಲೆಮೂಲೆಗಳಿಂದ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದರು. ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ಮನದಲ್ಲಿ ಮೂಡಿದ ಭಾವನೆಗಳು ಭಾರತದ ಸಾಹಿತ್ಯದ ಸಾಂಸ್ಕೃತಿಕ ಲೋಕದಲ್ಲಿ ಮೂಡುಬಿದಿರೆಗೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಯಶಸ್ವಿಯಾಗಿ ಒಂಭತ್ತು ನುಡಿಸಿರಿಗಳನ್ನು ನಡೆಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಕಾಸರಗೋಡಿನ ಯಕ್ಷಗಾನ ಬೊಂಬೆಯಾಟ ಪ್ರದರ್ಶನಕ್ಕೆ ಈ ಬಾರಿ ಪ್ರಥಮ ಅವಕಾಶ ಲಭಿಸಿತ್ತು. ಡಾ. ಮೋಹನ ಆಳ್ವ ಅವರು ಕೆ.ವಿ. ರಮೇಶ ಮತ್ತು ಸಹಕಲಾವಿದರನ್ನು ಅಭಿನಂದಿಸಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್. ರಮೇಶ್ ಶೆಟ್ಟಿ, ಉಪನ್ಯಾಸಕರಾದ ಟಿ.ಎ.ಎನ್. ಖಂಡಿಗೆ, ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ಸಿರಿಗನ್ನಡ ಪ್ರೆಸ್ನ ಮಾಲಿಕರಾಗಿದ್ದ ಕೀರ್ತಿಶೇಷ ಕೆ. ವೆಂಕಟಕೃಷ್ಣಯ್ಯ ಅವರಿಂದ ಸ್ಥಾಪನೆಯಾದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಕಲಾಸಂಘವು ಆಳ್ವಾಸ್ ನುಡಿಸಿರಿಯಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನಡೆಸುವ ಮೂಲಕ ಸಿರಿಗನ್ನಡದ ಸೌರಭದೊಂದಿಗೆ ಯಕ್ಷಗಾನದ ಸೌಂದರ್ಯ ನೀಡಿ ಸಾರ್ಥಕತೆ ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

