ಸಮಾಜಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅಪಾರ: ಆನೆಗುಂದಿ ಶ್ರೀ
ಉಡುಪಿ: ಗ್ರಾಮೀಣ ಭಾಗದ ಹಿಂದುಳಿದ ಮಹಿಳೆಯರಲ್ಲಿ ಶಿಕ್ಷಣ, ಕೃಷಿ, ಪರಿಸರ ಸಂರಕ್ಷಣೆ, ಸಾಮಾಜಿಕ ಪಿಡುಗುಗಳ ಬಗ್ಗೆ ಕಾಳಜಿ ಮೂಡಿಸುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಕ್ಕೆ ಕೊಡುಗೆ ಅಪಾರ ಎಂದು ಕಟಪಾಡಿ ಆನೆಗುಂದಿ ಸರಸ್ವತಿ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ಇಲ್ಲಿನ ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ದೇವಳದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮಟ್ಟದ 13 ಒಕ್ಕೂಟಗಳ ಪದಗ್ರಹಣ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪಾಂಬೂರು ಪವಿತ್ರ ಶಿಲುಬೆ ದೇವಾಲಯದ ಪ್ರಧಾನ ಗುರು ವಂ.ಚಾರ್ಲ್ಸ್ ಲೂವಿಸ್ ಮಾತನಾಡಿ, ಅಬಲೆಯರೆಂದು ಕರೆಯಲಾಗುವ ಮಹಿಳೆಯರನ್ನು ಸಬಲೆಯರನ್ನಾಗಿ ಮಾಡಿ ಕುಟುಂಬದ ನಿರ್ವಹಣೆಯ ಜೊತೆಗೆ ಸಮಾಜದಲ್ಲಿ ಗುರುತಿಸುವಂತೆ ಮಾಡುವಲ್ಲಿ ಶ್ರೀಕ್ಷೇ.ಧ.ಗ್ರಾ.ಯೋಜನೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಿರ್ವ ಸುನ್ನಿ ಜಾಮೀಯಾ ಮಸೀದಿಯ ಖತೀಬ ಸಿರಾಜುದ್ದೀನ್ ಮೌಲವಿ ಮಾತನಾಡಿ, ದೇಶದಲ್ಲೆಡೆ ಮತ, ಧಮಗಳ ನಡುವೆ ಘರ್ಷಣೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ಶ್ರೀಕ್ಷೇ.ಧ.ಗ್ರಾ.ಯೋಜನೆಯು ಎಲ್ಲಾ ಧರ್ಮಗಳ ಜನರನ್ನು ಒಗ್ಗೂಡಿಸಿ ಸಾಮರಸ್ಯದ ಸಹಬಾಳ್ವೆಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಕಳ ಗ್ರಾ.ಯೋಜನಾಧಿಕಾರಿ ಮುರಲೀಧರ್ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ನಾಯಕ್, ಉಡುಪಿ ತಾಲೂಕು ಯೋಜನಾಧಿಕಾರಿ ಮಾಲತಿ, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ. ದೇವದಾಸ ಹೆಬ್ಬಾರ್ ಇದ್ದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ಅಧ್ಯಕ್ಷತೆ ವಹಿಸಿದ್ದರು.
ಪದಗ್ರಹಣ: ಇದೇ ಸಂದರ್ಭ, ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಅತಿ ಹೆಚ್ಚು ಲಾಭಾಂಶ ಪಡೆದ ಒಕ್ಕೂಟಗಳಿಗೆ ಲಾಭಾಂಶದ ಚೆಕ್ ವಿತರಿಸಲಾಯಿತು.
ಬಂಟಕಲ್ಲು ಸೇವಾ ಪ್ರತಿನಿಧಿ ಗಣಪತಿ ಪ್ರಭು ಪಾಲಮೆ, ಶಿರ್ವ ವಲಯ ಮೇಲ್ವಿಚಾರಕ ಮೋಹನ್ ಕೆ. ಇದ್ದರು. ಪಡುಬೆಳ್ಳೆ ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು. ದೇವಿಪ್ರಸಾದ್ ಮುದರಂಗಡಿ ನಿರೂಪಿಸಿದರು. ಸೇವಾ ಪ್ರತಿನಿಧಿ ಹೇರೂರು ವಸಂತಿ ಅಶೋಕ್ ಆಚಾರ್ಯ ವಂದಿಸಿದರು.
ಪೂರ್ವಾಹ್ನ ಶ್ರೀಸತ್ಯನಾರಾಯಣ ಪೂಜಾ ವೈದಿಕ ವಿಧಿಗಳನ್ನು ಶ್ರೀದೇವಳದ ಅರ್ಚಕ ವೇದಮೂರ್ತಿ ಸುಧೀಂದ್ರ ಭಟ್ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

