ನದಿಯಲ್ಲಿ ಮುಳುಗಿ ಯುವಕ ಸಾವು
ಸಿದ್ದಾಪುರ: ಇಲ್ಲಿನ ಸಮೀಪದ ದುಬಾರೆಯ ಕಾವೇರಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ್ದು, ಮೃತನ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಮೈಸೂರು ಜಿಲ್ಲೆಯ ವರುಣ ಕ್ಷೇತ್ರದ ಜಯಂತಗಳ್ಳಿ ಗ್ರಾಮದ ಸಿದ್ದಯ್ಯ ರಾಜಮ್ಮ ದಂಪತಿಯ ಪುತ್ರ ಜಗದೀಶ್ (26) ತನ್ನ ಇತರ 13 ಮಂದಿ ಸ್ನೇಹಿತರೊಂದಿಗೆ ಮಂಗಳೂರು ಹಾಗೂ ಕೊಡಗಿನ ವಿವಿಧ ಪ್ರದೇಶಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ದುಬಾರೆಯ ಕಾವೇರಿ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಸಂದರ್ಭ ಈಜಲು ಬಾರದೆ ನದಿಯ ಆಳಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬುಧವಾರ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಮಧ್ಯಾಹ್ನ ಮೃತನ ಪಾರ್ಥಿವ ಶರೀರವನ್ನು ಸಿದ್ದಾಪುರ ಶವಾಗಾರಕ್ಕೆ ತರಲಾಯಿತು.
ಕೊಲೆ ಶಂಕೆ- ಪ್ರತಿಭಟನೆ: ಜಗದೀಶ್ ಮೃತಪಟ್ಟಿರುವುದನ್ನು ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಿಕರು ಹಾಗೂ ಮೃತನ ಸ್ನೇಹಿತರು ಜಗದೀಶನ ಸಾವು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಕೂಡ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಿದರು.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಮೃತನ ಮಾವ ಮೂರ್ತಿ, ಮೈಸೂರು ಅರಮನೆಯ ವಸ್ತು ಸಂಗ್ರಹಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಗದೀಶ್ ಅಧಿಕಾರಿಗಳೊಂದಿಗೆ ಅನ್ಯೋನ್ಯವಾಗಿ ಇದ್ದದನ್ನು ಕಂಡು ಸಹಿಸಲಾಗದ ಕೆಲವು ಸಹವರ್ತಿಗಳು ಈತನಿಗೆ ಪೀಡಿಸುತ್ತಿದ್ದರು. ಈತ ಮನೆಯಲ್ಲಿ, ಕುಟುಂಬದವರೊಂದಿಗೆ ಘಟನೆಯ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿದ್ದನು. ಇನ್ನು ಮೂರು ತಿಂಗಳುಗಳ ನಂತರ ಸೇವೆ ಕಾಯಂ ಆಗಲಿದ್ದು, ಇದನ್ನು ಸಹಿಸದ ಕೆಲವರು ಜಗದೀಶನಿಗೆ ಪ್ರವಾಸಕ್ಕೆ ಹೋಗುವುದು ಇಷ್ಟವಿಲ್ಲದಿದ್ದರೂ ಬಲತ್ಕಾರವಾಗಿ ಕರೆಸಿದ್ದಾರೆ. ನದಿಯಲ್ಲಿ ಸಂಜೆ 6 ಸುಮಾರಿಗೆ ಪ್ರವಾಸಕ್ಕೆ ಬಂದ 14 ಮಂದಿ ಪೈಕಿ ಕೇವಲ ಮೂರು ಮಂದಿ ಮಾತ್ರ ನದಿ ದಾಟಲು ಕರೆದೊಯಿದಿದ್ದರು ಎನ್ನಲಾಗಿದೆ. ಕೆಲ ಸಮಯದ ನಂತರ ನೀರಿನಲ್ಲಿ ಮುಳುಗಿ ಹೋಗಿರುವ ಬಗ್ಗೆ ವಿಷಯ ತಿಳಿಸಲಾಗಿದ್ದರೂ ಯಾರು ಕೂಡ ಈತನ ರಕ್ಷಣೆಗೆ ಮುಂದಾಗಲಿಲ್ಲ. ಇದು ವ್ಯವಸ್ಥಿತವಾಗಿ ಕೊಲೆ ಮಾಡುವ ಸಂಚು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದರೂ ಪೊಲೀಸರು ದೂರು ಸ್ವೀಕರಿಸಲಿಲ್ಲ. ಸ್ಥಳಕ್ಕೆ ಉನ್ನತ ಆಧಿಕಾರಿಗಳು ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಡಿವೈಎಸ್ಪಿ ಪ್ರಸನ್ನ ವಿ. ರಾಜು, ವೃತ್ತ ನಿರೀಕ್ಷಕರಾದ ಬೋಸಯ್ಯ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ತನಿಖೆಯೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಮೇರೆಗೆ ದೂರನ್ನು ಸ್ವೀಕರಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಸಂಬಂಧಿಕರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಕೈಗೊಂಡಿರುವುದಾಗಿ ಡಿವೈಎಸ್ಪಿ ಪ್ರಸನ್ನ ವಿ. ರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

