ಉಡುಪಿ

ಮೀನುಗಾರರಲ್ಲದ ಉದ್ಯಮಿಗಳ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶ: ಪರ್ಸೀನ್ ಸಂಘ ಪ್ರತ್ಯಾರೋಪ

Published On :

ಉಡುಪಿ: ಮೀನುಗಾರಿಕೆಯಲ್ಲಿ ಅನುಭವ ಇಲ್ಲದ ವಾಣಿಜ್ಯೋದ್ಯಮಿಗಳು ಮಲ್ಪೆ ಬಂದರಿನ ಮೂಲಕ ಭಾರಿ ಗಾತ್ರದ ಯಾಂತ್ರೀಕೃತ ಬೋಟುಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಸಮುದ್ರದಲ್ಲಿ ಮೀನಿನ ಮರಿ, ಮೀನಿನ ಮೊಟ್ಟೆ ಮತ್ತು ಇತರ ಜಲಚರಗಳು ನಾಶವಾಗುತ್ತಿವೆ. ಇದರಿಂದ ಲಕ್ಷಾಂತರ ಮೀನುಗಾರರ ಜೀವನಾಧಾರವಾಗಿರುವ ಮೀನಿನ ಸಂತತಿಯೇ ನಾಶವಾಗುವ ಭೀತಿ ಉಂಟಾಗಿದೆ ಎಂದು ಮಲ್ಪೆಯ ಪರ್ಸೀನ್ ಮೀನುಗಾರರ ಸಂಘ ಆರೋಪಿಸಿದೆ.
ಮಲ್ಪೆ ಬಂದರಿನ ಪಿಶರ್‌ಮನ್ ಡೀಪ್ ಸೀ ಟ್ರಾಲ್ ಬೋಟ್ ಅಸೋಸಿಯೇಶನ್‌ನ ನಾಯಕರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಪರ್ಸೀನ್ ಬೋಟ್ ಮೀನುಗಾರರು 8 ಮಿಮಿಗೂ ಚಿಕ್ಕ ತೂತಿನ ಬಲೆ ಬಳಸಿ ಮೀನುಗಾರಿಕೆ ನಡೆಸುತ್ತಿದ್ದಾರೆ ಮತ್ತು ಬಲೆಗೆ ಬಿದ್ದ ಉಪಯೋಗಕ್ಕೆ ಬಾರದ ಚಿಕ್ಕ ಮೀನುಗಳನ್ನು ಸಮುದ್ರಕ್ಕೆ ಚೆಲ್ಲಿ ಜಲಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪರ್ಸೀನ್ ಬೋಟ್ ಮೀನುಗಾರರು, ಪಿಶರ್ ಮನ್ ಡೀಪ್ ಸೀ ಟ್ರಾಲ್ ಬೋಟ್ ಅಸೋಸಿಯೇಶನ್‌ನಲ್ಲಿರುವ ಮೀನುಗಾರರಲ್ಲದ ಉದ್ಯಮಿಗಳು ನಡೆಸುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಮೀನು ಸಂತತಿ ನಾಶವಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದರು.
ಪರ್ಸೀನ್ ಬೋಟ್‌ಗಳಲ್ಲಿ ಮೀನುಗಾರಿಕೆ ನಡೆಸುವರು ಯಾರೂ 8 ಮಿಮಿಗಿಂತ ಚಿಕ್ಕ ತೂತುಗಳಿರುವ ಬಲೆಗಳನ್ನು ಬಳಸುತ್ತಿಲ್ಲ, ಆದ್ದರಿಂದ ಪರ್ಸೀನ್ ಬೋಟ್ ಮೀನುಗಾರಿಕೆಯಿಂದ ಮೀನು ಸಂತತಿ ನಾಶವಾಗುತ್ತಿಲ್ಲ ಅಥವಾ ಜಲಮಾಲಿನ್ಯವಾಗುತ್ತಿಲ್ಲ. ಇದು ಶುದ್ಧ ಸುಳ್ಳು ಆರೋಪ. ಈ ಆರೋಪ ಮಾಡಿರುವ ಪಿಶರ್ ಮನ್ ಡೀಪ್ ಸೀ ಟ್ರಾಲ್‌ಬೋಟ್ ಅಸೋಸಿಯೇಶನ್ ಪದಾಧಿಕಾರಿಗಳಾದ ದಯಾನಂದ ಕುಂದರ್, ಗೋಪಾಲ ಆರ್.ಕೆ., ಕಿಶೋರ್ ಸುವರ್ಣ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ ಸಂಘದ ಪರವಾಗಿ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.