ಉಡುಪಿ

ಎಚ್‌ಐವಿ ಪೀಡಿತ ಮಕ್ಕಳಿಗೆ ಮಾಸಾಶನವೂ ಮರೀಚಿಕೆ...

Published On :

ಉಡುಪಿ: ಹೆತ್ತವರು ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿಗೆ, ಏಡ್ಸ್ ಪೀಡಿತರೆಂಬ ಹಣೆಪಟ್ಟಿ ಕಟ್ಟಿಕೊಂಡು ಸಂಬಂಧಿಕರಿಂದ, ಸಮಾಜದಿಂದ ಪರಿತ್ಯಕ್ತರಾಗುತ್ತಿರುವುದೂ ಸಾಲದೆಂಬಂತೆ ಸರ್ಕಾರದಿಂದಲೂ ನಿರ್ಲಕ್ಷ್ಯಕ್ಕೊಳಗಾದ ವ್ಯಥೆಯ ಕತೆ ಇದು.
 ಉಡುಪಿ ಜಿಲ್ಲೆಯಲ್ಲಿ 18 ವರ್ಷದೊಳಗಿನ 287 ಎಚ್‌ಐವಿ ಸೋಂಕಿತ ಮತ್ತು ಎಚ್‌ಐವಿ ಸೋಂಕಿತ ಹೆತ್ತವರ ಮಕ್ಕಳಿದ್ದಾರೆ. ಅವರಲ್ಲಿ ಸರ್ಕಾರದಿಂದ ಕೇವಲ 92 ಮಕ್ಕಳು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. ಉಳಿದ ಮಕ್ಕಳು ನಾವೇನೂ ತಪ್ಪು ಮಾಡಿದ್ದೇವೆ? ನಮಗೂ ಯಾಕೆ ಇಲ್ಲ ಮಾಸಾಶನ? ಎಂದು ಕೇಳುತ್ತಿದ್ದಾರೆ.    
ಏನಿದು ಯೋಜನೆ?: ರಾಜ್ಯ ಸರ್ಕಾರವು 18 ವರ್ಷದೊಳಗಿನ ಎಚ್‌ಐವಿ ಸೋಂಕಿತ ಮಕ್ಕಳಿಗೆ ಮತ್ತು ಎಚ್‌ಐವಿ ಸೋಂಕಿತ ಹೆತ್ತವರ ಮಕ್ಕಳಿಗೆ ಪ್ರತಿ ತಿಂಗಳು ರು. 800 ಮಾಸಾಶನ ನೀಡುವ ಯೋಜನೆಯೊಂದಿದೆ. 'ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆ' ಎಂದು ಇದಕ್ಕೆ ಹೆಸರು.
2011-12ರಲ್ಲಿ ಜಾರಿಗೆ ಬಂದಿರುವ ಈ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಈ ಮಾಸಾಶನ ವಿತರಿಸಲಾಗುತ್ತಿತ್ತು. ಆದರೆ ಈ ಸಾಲಿನಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ಈ ಹೊಣೆ ಹೊರಿಸಲಾಗಿದೆ.  
 ಕುಟುಂಬದವರಿಂದ, ಸಮಾಜದಿಂದ ಅಮಾನವೀಯವಾಗಿ ರೀತಿಯಲ್ಲಿ ಕಡೆಗಣಿಸಲ್ಪಡುತ್ತಿರುವ, ಜೀವನೋಪಾಯಕ್ಕೆ ಅತ್ಯಂತ ಸಂಕಷ್ಟದಲ್ಲಿರುವ, ತಮಗರಿವಿಲ್ಲದಂತೆ ಹತ್ತಾರು ಕಾಯಿಲೆಗಳಿಂದ ನರಳುತ್ತಿರುವ ಈ ಮಕ್ಕಳಿಗೆ ಈ ರು. 800 ಅತಿ ಅಗತ್ಯ ಜೀವನಾಧಾರವಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯ ನೀತಿಯಿಂದಾಗಿ ಉಡುಪಿಯಲ್ಲಿ ಸುಮಾರು 195 ಮಕ್ಕಳಿಗೆ ಈ ಆಧಾರವೂ ಇಲ್ಲವಾಗಿದೆ.
ಅಧಿಕಾರಿಗಳು ಹೇಳುವುದೇನು?: ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಕೇಳಿದರೆ, ನಮ್ಮ ಸರ್ವೇಯಲ್ಲಿ ಸಿಕ್ಕಿರುವ ಮಕ್ಕಳ ಸಂಖ್ಯೆ ಕೇವಲ 92 ಮಾತ್ರ, ಅವರಿಗೆ ಮಾಸಾಶನದ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ.
 ಆದರೆ ಉಡುಪಿಯ ಎಚ್‌ಐವಿ ಪರೀಕ್ಷೆ -ಚಿಕಿತ್ಸೆ ಮಾಡುವ ಎ.ಆರ್.ಟಿ. (ಆಂಟಿ ರೆಟ್ರೋ ವೈರಲ್ ಥೆರಫಿ) ಕೇಂದ್ರದ ಅಧಿಕೃತ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 287 ಎಚ್‌ಐವಿ ಸೋಂಕಿತ ಮತ್ತು ಸೋಂಕಿತ ಹೆತ್ತವರ ಮಕ್ಕಳಿದ್ದಾರೆ ಮತ್ತು ಅವರೆಲ್ಲರೂ ಈ ಮಾಸಾಶನ ಯೋಜನೆಗೆ ಯೋಗ್ಯರಿದ್ದಾರೆ.   
ಆದರೆ ಸರ್ಕಾರದ ಸುತ್ತೋಲೆ ಪ್ರಕಾರ ಈ ಮಾಸಾಶನ ಪಡೆಯಬೇಕಾದರೆ ಮಕ್ಕಳ ರಕ್ಷಣಾ ಘಟಕ ವತಿಯಿಂದ ಪ್ರತ್ಯೇಕ ಮನೆ ಸರ್ವೇ ನಡೆಸಬೇಕಾಗಿದೆ ಮತ್ತು ಆಯಾ ಗ್ರಾ.ಪಂ. ವತಿಯಿಂದ ಈ ಮಕ್ಕಳ ಬಗ್ಗೆ ದೃಢೀಕರಣ ಪತ್ರ ಪಡೆಯಬೇಕಾಗಿದೆ. ಅದರಂತೆ, 'ನಾವು ಇದುವರೆಗೆ 92 ಮಕ್ಕಳ ಬಗ್ಗೆ ಸರ್ವೇ ಮಾಡಿದ್ದೇವೆ' ಎನ್ನುತ್ತಾರೆ ಅಧಿಕಾರಿಗಳು.
ಸುತ್ತೋಲೆಯೇ ವಿಲನ್: ಸರ್ಕಾರದ ಎ.ಆರ್.ಟಿ. ಕೇಂದ್ರಗಳಲ್ಲಿ ಈ ಮಕ್ಕಳ ಎಲ್ಲ ವಿವರ, ದಾಖಲೆ, ವಿಳಾಸ, ದೃಢೀಕರಣ ಎಲ್ಲವೂ ಇದೆ. ಆದರೆ, ಮಕ್ಕಳ ರಕ್ಷಣಾ ಘಟಕ ವತಿಯಿಂದ ಪ್ರತ್ಯೇಕ ಸರ್ವೇ ಮಾಡಬೇಕು ಎನ್ನುವ ಸರ್ಕಾರ ಸುತ್ತೋಲೆಯಿಂದ ನೂರಾರು ಮಕ್ಕಳು ಮಾಸಾಶನದಿಂದ ವಂಚಿತರಾಗುತ್ತಿದ್ದಾರೆ, ಸರ್ಕಾರ ಈ ಅಸಹಾಯಕ ಮಕ್ಕಳಲ್ಲಿಯೇ ತಾರತಮ್ಯ ಮಾಡುವ ಮೂಲಕ ಅವರ ಪೀಡನೆ ಇನ್ನಷ್ಟು ಹೆಚ್ಚಿಸುತ್ತಿದೆ ಎನ್ನುವುದು ಮಾತ್ರ ವಿಪರ್ಯಾಸ.
ಉದ್ದೇಶ ಒಳ್ಳೆಯದು, ತಾರತಮ್ಯ ಸರಿಯೇ?
ಸರ್ಕಾರದ ಉದ್ದೇಶ ಬಹಳ ಒಳ್ಳೆಯದು, ತುಂಬಾ ಮಕ್ಕಳಿಗೆ ಲಾಭ ಆಗಿದೆ, ಆದರೆ ಕೆಲವು ಸೋಂಕಿತ ಮಕ್ಕಳಿಗೆ ಮಾತ್ರ ಮಾಸಾಶನ ನೀಡಿ, ಇತರ ಸೋಂಕಿತ ಮಕ್ಕಳಿಗೆ ಇಲ್ಲ ಎನ್ನುವುದು ಬಹಳ ನೋವಾಗುತ್ತದೆ. ಆ ಮಕ್ಕಳು ಏನು ತಪ್ಪು ಮಾಡಿದ್ದಾರೆ? ಇದು ಒಂಥರಾ ಶೋಷಣೆಯೇ ಆಗಿದೆ. ಸರ್ಕಾರಕ್ಕೆ ನಿಜವಾಗಿಯೂ ಈ ಮಕ್ಕಳ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಈ ತಪ್ಪು ಸರಿಪಡಿಸಬೇಕು.
 ಸಂಜೀವ ವಂಡ್ಸೆ, ಎಚ್‌ಐವಿ ಪೀಡಿತ ಮಕ್ಕಳಪರ ಹೋರಾಟಗಾರ
ಗೌಪ್ಯತೆ ಪಾಲನೆ ಅವಕಾಶವಿಲ್ಲ
ಎಚ್‌ಐವಿ ಸೋಂಕಿತರ ಬಗ್ಗೆ ಯಾವುದೇ ವಿವರ ಬಹಿರಂಗಗೊಳಿಸದಂತೆ ಗೌಪ್ಯತೆಯ ಕಾಯ್ದೆಯೇ ಇದೆ. ಅದರಂತೆ ಎ.ಆರ್.ಟಿ. ಕೇಂದ್ರಗಳಲ್ಲಿರುವ ಎಚ್‌ಐವಿ ಸೋಂಕಿತರ ಎಲ್ಲ ವಿವರಗಳನ್ನು ಅತ್ಯಂತ ಗೌಪ್ಯವಾಗಿ, ಸುರಕ್ಷಿತವಾಗಿ ಇಡಲಾಗುತ್ತದೆ.
 ಆದರೆ ಸರ್ಕಾರದ ಸುತ್ತೋಲೆ ಈ ಕಾಯ್ದೆಯನ್ನೇ ಉಲ್ಲಂಘಿಸುತ್ತಿದೆ. ಮಾಸಾಶನ ಪಡೆಯುವುದಕ್ಕೆ ಮನೆಮನೆ ಸರ್ವೇ ನಡೆಸಲು ಸರ್ಕಾರ ಹೇಳಿದೆ. ಇದರಿಂದ ಸೋಂಕಿತರ ಗೌಪ್ಯತೆ ಬಹಿರಂಗವಾದ ಸಾಕಷ್ಟು ಪ್ರಕರಣಗಳು ನಡೆದಿವೆ.
ಅದರಲ್ಲೂ ಸೋಂಕಿತರ ಬಗ್ಗೆ ಆಯಾ ಗ್ರಾ.ಪಂ.ಗಳಿಂದ ದೃಢೀಕರಣ ಪತ್ರ ಪಡೆಯುವುದು ಎಂದರೆ ಆ ಸೋಂಕಿತರ ಬಗ್ಗೆ ಗ್ರಾಮದಲ್ಲಿ ಟಾಂಟಾಂ ಮಾಡಿದಂತೆಯೇ ಸರಿ. ಇದರಿಂದ ಸಾಕಷ್ಟು ಮಂದಿ ಸೋಂಕಿತರು ನೋವು, ಅವಮಾನ ಅನುಭವಿಸಿದ್ದೂ ಇದೆ.


-ಸುಭಾಶ್ಚಂದ್ರ ಎಸ್. ವಾಗ್ಳೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.