'ಕಾಂಗ್ರೆಸನ್ನು ಟೀಕಿಸುವ ನೈತಿಕತೆ ರಘುಪತಿ ಭಟ್ಟ್ಗಿಲ್ಲ'
ಉಡುಪಿ: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಉಡುಪಿಯ ನಗರಸಭೆಯ ಅಭಿವೃದ್ಧಿಗಾಗಿ ಕುಡ್ಸೆಂಪ್ ಯೋಜನೆಯಡಿ ರು. 128 ಕೋಟಿ ಬಿಡುಗಡೆ ಮಾಡಿದ್ದರು. ಈ ಹಣದಲ್ಲಿ ಸ್ವರ್ಣ ನದಿಯಿಂದ ಕುಡಿಯುವ ನೀರು ತರುವ 2ನೇ ಹಂತದ ಯೋಜನೆಯ ಕಾರ್ಯಕ್ರಮಗಳಿಗೆ ಬಿಜೆಪಿ ಶಾಸಕರು ಶಿಷ್ಟಚಾರಕ್ಕಾದರೂ ಹಿಂದಿನ ಕಾಂಗ್ರೆಸ್ ಶಾಸಕರನ್ನು ಕರೆದಿರಲಿಲ್ಲ, ಈಗ ಅದೇ ಶಾಸಕರಿಗೆ ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಹೊರಿಸುವುದಕ್ಕೆ ನೈತಿಕತೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ತಾವು ಶಾಸಕರಾಗಿದ್ದಾಗ ಮಂಜೂರಾದ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಕಾಂಗ್ರೆಸ್ ಶಾಸಕರನ್ನು ಸೌಜನ್ಯಕ್ಕಾದರೂ ತಮ್ಮನ್ನು ಕರೆದಿಲ್ಲ ಎಂಬ ಮಾಜಿ ಶಾಸಕ ಕೆ. ರಘುಪತಿ ಭಟ್ಟರ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ.
ರಾಜ್ಯದಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಗಳಿದ್ದಾಗ ಆದಿಉಡುಪಿ- ಕಡಿಯಾಳಿ ಚತುಷ್ಪಥ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೂ ಬಿಜೆಪಿಯ ಶಾಸಕ ರಘುಪತಿ ಭಟ್ಟರಿಗೆ ಕಾಂಗ್ರೆಸ್ ಮಾಜಿ ಶಾಸಕರನ್ನು ಕರೆಯಬೇಕು ಎಂಬ ಶಿಷ್ಟಾಚಾರ ನೆನಪಾಗಲಿಲ್ಲ. ಜೆ.ಎಚ್. ಪಟೇಲರ ಅಧಿಕಾರವಧಿಯಲ್ಲಿ ಉಡುಪಿಯನ್ನು ಜಿಲ್ಲೆಯನ್ನಾಗಿ ಮಾಡುವುದಕ್ಕೆ ಕಾರಣರಾದವರು ಆಗಿನ ಉಸ್ತುವಾರಿ ಸಚಿವರಾಗಿದ್ದ, ಕಾಂಗ್ರೆಸ್ ಸಂಸದ ಜಯಪ್ರಕಾಶ್ ಹೆಗ್ಡೆ ಅವರು, ಆದರೆ ಮಣಿಪಾಲದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣಗಳನ್ನು ಉದ್ಘಾಟಿಸುವಾಗ ಹೆಗ್ಡೆ ಅವರನ್ನು ಕರೆಯುವ ಸೌಜನ್ಯವನ್ನು ರಘುಪತಿ ಭಟ್ ತೋರಿಸಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ತಿರುಗೇಟು ನೀಡಿದೆ.
ಮಳೆಗಾಲ ಮುಗಿಯುತ್ತಲೇ ಆಡಂಬರ, ಪ್ರಚಾರವಿಲ್ಲದೆ ಆರಂಭಿಸಿ, ಶೀಘ್ರವಾಗಿ ಜನರ ಉಪಯೋಗಕ್ಕೆ ಬಿಟ್ಟುಕೊಡುವ ಉದ್ದೇಶದಿಂದ ನಗರೋತ್ಥಾನ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಆರಂಭಿಸಿದ್ದಾರೆ. ಇದನ್ನು ಟೀಕಿಸುವ ನೈತಿಕತೆ ಬಿಜೆಪಿಯ ಮಾಜಿ ಶಾಸಕರಿಗಿಲ್ಲ.
ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅದಕ್ಕೆ ಸಂಬಂಧಪಟ್ಟ ಪರಿಣಿತ ಅಧಿಕಾರಿಗಳು ಇದ್ದಾರೆ. ಇದನ್ನು ಮಾಜಿ ಶಾಸಕರು ಹೇಳುವ ಅಗತ್ಯವಿಲ್ಲ. ಅವರ ಕಾಲದಲ್ಲಿ ನಗರ ಒಳಾಂಗಣ ಕ್ರೀಡಾಂಗಣದ ನೆಲದ ಮರದ ಹಾಸುಗಳು ವರ್ಷದೊಳಗೆ ಕಿತ್ತು ಹೋಗಿ ಪುನಃ ಲಕ್ಷಾಂತರ ವೆಚ್ಚದಲ್ಲಿ ನವೀಕರಣಗೊಳ್ಳುವಂತಾದಕ್ಕೆ ಅವರ ಕಾಲದ ಕಾಮಗಾರಿಗಳ ಗುಣಮಟ್ಟವನ್ನು ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಭ್ರಷ್ಟಾಚಾರವನ್ನು ವಿರೋಧಿಸುವ ಶಾಸಕ ಪ್ರಮೋದ್ ಮಧ್ವರಾಜ್ ಅವರ ನಿಲುವನ್ನು ಮಾಜಿ ಶಾಸಕರು ವ್ಯಂಗ್ಯದ ಮೂಲಕ ಟೀಕಿಸಿದ್ದನ್ನು ನೋಡಿದಾಗ ಅವರು ತಮ್ಮ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಂತೆ ಕಾಣುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

