ನಕಲಿ ದಾಖಲೆ ಸೃಷ್ಟಿ ಆರೋಪ: ದೂರು
ಉಡುಪಿ: ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗ ವೈದ್ಯಾಧಿಕಾರಿ ಡಾ. ಶರತ್ ಕುಮಾರ್ ರಾವ್ ಅವರು ತಮ್ಮ ವಿರುದ್ಧ ಮಹಿಳೆಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ವೀಣಾ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಆರೋಗ್ಯ ಇಲಾಖೆಯು ಡಾ. ಶರತ್ ಅವರನ್ನು ಕರ್ತವ್ಯಲೋಪದ ಆರೋಪ ಹೊರಿಸಿ ಸೇವೆಯಿಂದ ಇಲಾಖೆ ತನಿಖೆ ಮುಗಿಯುವರೆಗೆ ಅಮಾನತುಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಡಾ. ಶರತ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ, ವೀಣಾ ಶೆಟ್ಟಿ ತಮ್ಮ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಸಹಿ ಹಾಕಿ ತಮ್ಮ ವಿರುದ್ಧ ಇಲಾಖೆಗೆ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ವೀಣಾ ಶೆಟ್ಟಿ ಅವರ ಜೊತೆಗೆ ಉಡುಪಿ ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮತ್ತು ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಯಂತ್ರ ಮೈಮೇಲೆ ಬಿದ್ದು ವ್ಯಕ್ತಿ ಸಾವು
ಉಡುಪಿ: ವರ್ಕ್ ಶಾಪ್ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಮೇಲೆ ಗ್ರೈಂಡರ್ ಮೆಷಿನ್ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಪುತ್ತೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಾಧವ ಶೆಟ್ಟಿಗಾರ ಮೃತರು. ಇವರು ಎಂದಿನಂತೆ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿರುವಾಗ ಹೊಟ್ಟೆಯ ಮೇಲೆ ಗ್ರೈಂಡರ್ ಮೆಷಿನ್ ಬಿದ್ದಿದೆ.
ಅದನ್ನು ತೆಗೆಯಲು ಬಂದಾಗ ಸೋಮಶೇಖರ್ಗೆ ವಿದ್ಯುತ್ ಶಾಕ್ ಹೊಡೆದ ಅನುಭವ ಉಂಟಾದಾಗ ಮೇನ್ ಸ್ವಿಚ್ ಆಫ್ ಮಾಡಿ ನಂತರ ಮಾಧವ ಶೆಟ್ಟಿಗಾರ್ ಮೇಲಿದ್ದ ಮೆಷಿನ್ ತೆಗೆದು ಮಾಧವ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾಧವ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಸಹೋದರ ಸೋಮಶೇಖರ ಶೆಟ್ಟಿಗಾರ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಿದ ದಾರಿದೀಪ
ಕಾರ್ಕಳ: ಪುರಸಭಾ ವ್ಯಾಪ್ತಿಯ ಅನಂತಶಯನದಲ್ಲಿ ಕೆಟ್ಟುಹೋಗಿದ್ದ ದಾರಿದೀಪವನ್ನು ಸರಿಪಡಿಸಲಾಗಿದೆ. ಬುಧವಾರ 'ಕನ್ನಡಪ್ರಭ'ದಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಕಂಡು ಎಚ್ಚೆತ್ತ ಪುರಸಭೆ ಹಾಗೂ ಮೆಸ್ಕಾಂ ಇಲಾಖೆ ದಾರಿದೀಪ ಸರಿಪಡಿಸುವ ಕಾರ್ಯ ನಡೆಸಿವೆ.
ಬೆಳಪು ಗ್ರಾ.ಪಂ.ಗೆ
95 ಲಕ್ಷ ಮಂಜೂರು
ಬೆಳಪು: ಕಾಪು ವಿಧಾನಸಭಾ ಕ್ಷೇತ್ರದ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದಿಂದ 95 ಲಕ್ಷ ಮಂಜೂರುಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಈ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಪು ಶಾಸಕರೂ ಆಗಿರುವ ಸಚಿವ ಸೊರಕೆ ಅವರ ಶಿಫಾರಸ್ಸಿನಂತೆ ರು. 33 ಲಕ್ಷ, ಸ್ಥಳೀಯ ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು ಶಿಫಾರಸ್ಸಿನಂತೆ 47 ಲಕ್ಷ, ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಶಿಫಾರಸ್ಸಿನಂತೆ 2 ಲಕ್ಷ ಮಂಜೂರಾಗಿದೆ. ಈ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣ, ಕುಡಿಯುವ ನೀರು ಪೂರೈಕೆ, ಆಸ್ಪತ್ರೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಮುಂದೆ ಸಚಿವರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಜಾರಂದಯ ಕೆರೆ ಅಭಿವೃದ್ಧಿಪಡಿಸಲಾಗುವುದು. ಬೆಳಪು ಗ್ರಾಮವನ್ನು ಶೈಕ್ಷಣಿಕ ಗ್ರಾಮವನ್ನಾಗಿಸುವ ಉದ್ದೇಶದಿಂದ ಇಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಲಿದೆ. ಈ ಎಲ್ಲ ಅಭಿವೃದ್ಧಿಗೆ ಪೂರಕವಾಗಿ ಮುಂಬೈ, ಮಂಗಳೂರು ಎಕ್ಸ್ಪ್ರೆಸ್ ರೈಲನ್ನು ಪಡುಬಿದ್ರಿ (ಬೆಳಪು) ನಿಲ್ದಾಣದಲ್ಲಿ ನಿಲುಗಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

