ಕೊರಗ ಸಮುದಾಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಯೋಜನೆ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿಶೇಷ ಪ್ಯಾಕೇಜನ್ನು ರೂಪಿಸಲು ಅನುಕೂಲವಾಗುವಂತೆ ಅಗತ್ಯ ಯೋಜನೆಗಳ ಪಟ್ಟಿ ತಯಾರಿಸಲು ಶಾಸಕ ಪ್ರಮೋದ್ ಮಧ್ವರಾಜ್ ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಉಡುಪಿ ಕೊರಗರ ತಾಲೂಕು ಸಮಿತಿ ಮತ್ತು ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ - ಕೇರಳ ಇದರ ಜಂಟಿ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೊರಗ ಸಮುದಾಯದ ಜನರ ಮನೆಗಳಿಗೆ ಭೇಟಿ ನೀಡಿ ಬಿಪಿಎಲ್ ಕಾರ್ಡು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು ಕೊರಗರ ಸಮಸ್ಯೆಗಳು ಬಗೆಹರಿಯಬೇಕಾದರೆ ಜನಪ್ರತಿನಿಧಿಗಳು ಅವರ ಬಳಿ ಹೋಗಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೌರಿ ಕೊರಗ, ಕೊರಗ ಸಮುದಾಯಕ್ಕೆ ನೀಡಲ್ಪಟ್ಟಿರುವ ಭೂಮಿಗಳು ಕೃಷಿಗೆ ಯೋಗ್ಯವಾಗಿಲ್ಲ ಹಾಗೂ ಕಳೆದ ಕೆಲವು ಸಮಯದಿಂದ ಭೂಮಿ ಕೊಡುವ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಅದನ್ನು ಪುನಃ ಪ್ರಾರಂಭಿಸಬೇಕಾಗಿ ತಿಳಿಸಿದರು. ಕೊರಗರಲ್ಲಿ ಕೆಲವರಿಗೆ ಇನ್ನೂ ಕೂಡ ಹಕ್ಕು ಪತ್ರಗಳು ಸಿಕ್ಕಿಲ್ಲ ಎಂದು ಶಾಸಕರ ಗಮನ ಸೆಳೆದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಮಾತನಾಡಿ, ಕೊರಗ ಸಮುದಾಯದ ಜನರು ಮದ್ಯಪಾನಕ್ಕೆ ತುತ್ತಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೊರಗ ಸಮುದಾಯದಲ್ಲಿ ಕಾಣುತ್ತಿರುವ ಮೂಲ ಸಮಸ್ಯೆಯೇ ಮಧ್ಯಪಾನ ಎಂದು ತಿಳಿಸಿ, ಸರ್ಕಾರ ನೀಡುವ ಸವಲತ್ತು ಉಪಯೋಗಿಸಬೇಕಾದರೆ ಆರೋಗ್ಯ ಸರಿಯಾಗಿರಬೇಕು ಎಂದರು.
ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಶಿಕಲಾ ಕೊರಗ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ತಹಸೀಲ್ದಾರ ಗುರುಪ್ರಸಾದ್, ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರ್ತಿ, ಸಮಗ್ರ ಗಿರಿಜ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಉದಯಕುಮಾರ್ ಶೆಟ್ಟಿ, ತಾ.ಪಂ. ನಿರ್ವಾಹಣಾಧಿಕಾರಿ ಡಿ. ಮಂಜುನಾಥಯ್ಯ ಮತ್ತಿತರರು ಇದ್ದರು. ಪದ್ಮ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಪ್ರಮೋದ್ ಮಧ್ವರಾಜ್, ಡಾ.ಪಿ.ವಿ. ಭಂಡಾರಿ ಹಾಗೂ ಕೊಕ್ಕರ್ಣೆ ಬೋಗ್ರ ಕೊರಗ ಇವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

