ಗ್ರಾಮೀಣ ಭೂಮಿಗೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ನಿಯಮ ಕೈಬಿಡಲು ಪರಿಹಾರ ಸಮಿತಿ ಒತ್ತಾಯ
ಉಡುಪಿ: ಜಿಲ್ಲೆಯಲ್ಲಿ ಭೂಮಿಯನ್ನು ಮಾರಾಟ ಮಾಡುವಾಗ ಶೇ.25 ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಬೇಕು. ಗ್ರಾಮಾಂತರ ಪ್ರದೇಶದ ಭೂಮಿಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂಬ ನಿಯಾಮಳಿಗಳನ್ನು ಕೈ ಬಿಡಲು ತುರ್ತ ಆದೇಶ ನೀಡುವಂತೆ ಕಂದಾಯ ಇಲಾಖಾ ಸಮಸ್ಯೆಗಳ ಪರಿಹಾರ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಸಮಿತಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಇಲಾಖಾ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ ಮನವಿ ಸಲ್ಲಿಸಲಾಗಿದೆ. ಇತ್ತೀಚಿಗೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಕಂದಾಯ ಕಾನೂನಿನಲ್ಲಿ ರಿಯಾಯತಿ ನೀಡಿರುವುದನ್ನು ಇಲಾಖಾಧಿಕಾರಿಗಳು ಒಪ್ಪಿ, ಈಗ ಈ ಜಿಲ್ಲೆಯಲ್ಲಿರುವ ಜನ ವಿರೋಧಿ ಕಾನೂನು ಹಾಗೂ ಸುತ್ತೋಲೆಗಳನ್ನು ಹಿಂಪಡೆಯಲು ಒಪ್ಪಿಗೆ ನೀಡಿದ್ದರೂ ಉಡುಪಿ ಜಿಲ್ಲಾಧಿಕಾರಿಗಳೂ ಈ ಸಂದರ್ಭದಲ್ಲಿ ಜಿಲ್ಲೆಗೆ ಸದ್ಯ ಇರುವ ಜನವಿರೋಧಿ ಕಾನೂನನ್ನು ಬಲವಾಗಿ ಸಮರ್ಥಿಸಿರುವುದು ಖಂಡನೀಯ.
ಜಿಲ್ಲೆಯಲ್ಲಿ ಹೆಚ್ಚಾಗಿ ತುಂಡು ಭೂಮಿಗಳೇ ಜಾಸ್ತಿ ಇರುವುದಲ್ಲದೆ ಒಂದು ಸೆಂಟ್ಸ್ ಜಾಗಕ್ಕೂ ಪ್ರತ್ಯೇಕ ಆರ್‌ಟಿಸಿ ಇರುತ್ತದೆ. ಜಿಲ್ಲೆಯಲ್ಲಿ ಅವಿಭಕ್ತ ದೊಡ್ಡ ಕುಟಂಬಗಳಿದ್ದು, ಇರುವ ಜಮೀನನ್ನು ಪಾಲು ಅಥವಾ ಮಾರಾಟ ಮಾಡಲು ಬೇಕಾದ ಸನ್ನಿವೇಶವನ್ನು ತಿಳಿದು ಕಂದಾಯ ಕಾನೂನು ಮಾಡುವಾಗ ಸುಮಾರು 1990ರ ಮೊದಲೇ ಕರಾವಳಿ ಜಿಲ್ಲೆಗೆ ರಿಯಾಯತಿ ನೀಡಿದ ವಿಚಾರ ತಿಳಿಯದ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ತಿಳಿಯುವ ಹೃಯದ ವೈಶಾಲ್ಯವಿಲ್ಲ ಎಂದು ಟೀಕಿಸಿದರು.
ಈಗಿನ ಜಿಲ್ಲಾಧಿಕಾರಿಗಳು ಈ ಜಿಲ್ಲೆಯಲ್ಲಿ ಅಧಿಕಾರ ವಹಸಿಕೊಂಡ ನಂತರ ಅನುಮತಿ ನೀಡಿದ ಬಹುಮಹಡಿ ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳಿಗೆ ಕನಿಷ್ಠ ಸೆಟ್ ಬ್ಯಾಕ್, ಪಾರ್ಕಿಂಗ್ ಸ್ಥಳ, ಪಾರ್ಕ್ ಇಲ್ಲದ, ರಸ್ತೆಯ ಮೇಲೆಯೆ ಕಟ್ಟಿದ, ಒಂದು ಸೆಂಟ್ಸ್ ಜಾಗವನ್ನೂ ಕಾದಿರಿಸದ ಕಾನೂನು ಬಾಹಿರ ನಿರ್ಮಾಣಗಳು ರಾಶಿ ರಾಶಿ ಇರುವಾಗ ಹಳ್ಳಿ ಪ್ರದೇಶದಲ್ಲಿ 40 ಅಡಿ ರಸ್ತೆ ನಿರ್ಮಿಸಿ, ಶೇ.45 ಸ್ಥಳ ಬಿಟ್ಟು ಮಾರಾಟ ಮಾಡಬೇಕು, ಕಟ್ಟಡ ಕಟ್ಟಬೇಕು ಎನ್ನುವುದರ ಹಿಂದೆ ಏನಿದೆ ಎಂದು ಪ್ರಶ್ನಿಸಿ, ಯಾರೆಲ್ಲಾ ಇದರ ಹಿಂದೆ ಇದ್ದಾರೆ ಎನ್ನುವುದನ್ನು ತುರ್ತಾಗಿ ತನಿಖೆ ಮಾಡಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದೇವೆ. ಮುಂದಿನ 15 ದಿನಗಳ ಒಳಗೆ ಈ ವಿಚಾರದಲ್ಲಿ ಸೂಕ್ತ ಆದೇಶ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗುರುಪ್ರಸಾದ್ ಪೂಜಾರಿ ಬೆಂಗ್ರೆ, ಕಿಶೋರ ಶೆಟ್ಟಿ, ಬ್ಯಾಪಿಸ್ಟ್ ಡಯಾಸ್, ಅವೆಲಿನ್ ಲೂಯಿಸ್, ಪ್ರಸಾದ್ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

