ಧರ್ಮಾಧಿಕಾರಿ, ಕುಟುಂಬದ ತೇಜೋವಧೆಗೆ ಖಂಡನೆ
ಗಂಗೊಳ್ಳಿ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬ ವರ್ಗದ ಮಾನ ಹಾನಿಕಾರ ಹೇಳಿಕೆ ಖಂಡನಾರ್ಹ ಎಂದು ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸರ್ವ ಸದಸ್ಯರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಲ್ಲಿ ವಿನಾಕಾರಣ ಕ್ಷೇತ್ರದ ಧರ್ಮಾಧಿಕಾರಿಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರುವುದು ಸರಿಯಲ್ಲ. ಇದು ಖಂಡನಾರ್ಹ ಎಂದು ಅಭಿಪ್ರಾಯಪಟ್ಟಿದೆ. ರಾಮರಾಜ್ಯದ ಕನಸನ್ನು ರಾಷ್ಟ್ರಪಿತ ಗಾಂಧೀಜಿ ಕಂಡಿದ್ದರೂ ಅದನ್ನು ನನಸು ಮಾಡಿದ್ದು ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳು. 40 ವರ್ಷದ ಅವರ ಸ್ವಾರ್ಥ ರಹಿತ ಸಮಾಜ ಸೇವೆ, ದೀನದಲಿತರ ಬಗ್ಗೆ ಕಳಕಳಿ, ಅದನ್ನು ನಾವು ಮೊದಲು ನೆನಪು ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ಮನವಿ ಮಾಡಿದ್ದಾರೆ. ಸಭೆಯಲ್ಲಿ ಇಂದುಶ್ರೀ ಮಹಿಳಾ ಸಂಘ, ಮಾತೃಶ್ರೀ ಬಾಲಕಿಯರ ಭಜನಾ ತಂಡ ಹಾಗೂ ಇಂದುಧರ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಧರ್ಮಸ್ಥಳ ವಿರುದ್ಧ ಆರೋಪ ಖಂಡನೀಯ: ಸುನಿಲ್ ಕುಮಾರ್
ಕಾರ್ಕಳ: ಸೌಜನ್ಯ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಆರೋಪಗಳನ್ನು ಮಾಡುತ್ತ ಅಗೌರವವಾಗಿ ಮಾತನಾಡುವುದು ಖಂಡನೀಯ ಎಂದು ಶಾಸಕ ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೌಜನ್ಯ ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದು, ಈ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಘಟನೆಯನ್ನು ಕೇಂದ್ರೀಕರಿಸಿಕೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಟುವಟಿಕೆ ಬಗ್ಗೆ ಅಗೌರವದಿಂದ ಮಾತನಾಡುತ್ತಿರುವುದು ಆಕ್ಷೇಪಾರ್ಹ. ಧರ್ಮಸ್ಥಳ ರಾಜ್ಯದ ಶ್ರದ್ಧಾಕೇಂದ್ರವಾಗಿದ್ದು, ಲಕ್ಷಾಂತರ ಭಕ್ತಾದಿಗಳ ನಂಬಿಕೆಯ ಕ್ಷೇತ್ರವಾಗಿದೆ. ಈ ಎಲ್ಲ ಚಟುವಟಿಕೆಗಳ ಮೂಲಕ ಡಾ. ಹೆಗ್ಗಡೆ ಅವರು ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಖಂಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಡಾ. ಹೆಗ್ಗಡೆ ವಿರುದ್ಧ ಅಪಪ್ರಚಾರಕ್ಕೆ ತಕ್ಕ ಉತ್ತರ: ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ
ಉಡುಪಿ: ಧರ್ಮಸ್ಥಳದ ಸೌಜನ್ಯ ನಿಗೂಢ ಸಾವಿನ ಪ್ರಕರಣದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಅವರ ಸಹೋದರ ಹರ್ಷೇಂದ್ರ ಕುಮಾರ್ ಮತ್ತವರ ಮಗನ ಹೆಸರನ್ನು ಅನವಶ್ಯಕವಾಗಿ ಎಳೆದು ತರುವ ಷಡ್ಯಂತ್ರ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಮಣಿಪಾಲದ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಮಾನ ಹಾನಿಕರ ಪ್ರಚಾರ ಸಹಿಸಲಾಗುವುದಿಲ್ಲ. ಆದ್ದರಿಂದ ಉಡುಪಿಯಲ್ಲಿ ಸದ್ಯದಲ್ಲೇ ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳು, ಭಜನಾ ಮಂಡಳಿಗಳು, ಸಂಘ ಸಂಸ್ಥೆಗಳು ಭಾರಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಮಣಿಪಾಲ ಅರ್ಬಿಯ ವೈಷ್ಣವಿ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಜ ಹೆಗ್ಡೆ ಮತ್ತು ಸಮಾಜಿಕ ಕಾರ್ಯಕರ್ತ ಭುವನಪ್ರಸಾದ್ ಹೆಗ್ಡೆ ಇದ್ದರು.
ಉಡುಪಿ: ಕಲಾರಂಗ ಖಂಡನೆ
ಉಡುಪಿ: ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಬಗ್ಗೆ ಕೆಲ ಮಂದಿ ತೀರಾ ಲಘುವಾಗಿ ಆಪಾದನೆಗಳನ್ನು ಮಾಡುತ್ತಿರುವುದನ್ನು ಉಡುಪಿಯ ಯಕ್ಷಗಾನ ಕಲಾರಂಗ ಖಂಡಿಸಿದೆ. ಈ ರೀತಿ ಆಪಾದನೆಗಳನ್ನು ಮಾಡುವುದು ಒಟ್ಟು ಸಮಾಜದ ಸ್ವಾಸ್ಥ್ಯಕ್ಕೆ ಆಘಾತಕಾರಿ ಬೆಳವಣಿಗೆಯಾಗಿದೆ. ಸಮಾಜಮುಖಿ ಕಾರ್ಯಕ್ರಮಗಳಿಂದ ಶ್ರೀಕ್ಷೇತ್ರ ಎಲ್ಲರಿಗೆ ಮಾದರಿಯಾಗಿದೆ. ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಮತ್ತು ಅವರ ಕುಟುಂಬವನ್ನು ಈ ಘಟನೆಯೊಂದಿಗೆ ತಳುಕು ಹಾಕಿರುವುದು ನೋವಿನ ವಿಚಾರ ಎಂದು ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

