ಉಡುಪಿ

ಕನ್ನಡ ಅಪ್ಪಟವಾಗಿ ಉಳಿದಿರುವುದು ಯಕ್ಷಗಾನದಲ್ಲಿ ಮಾತ್ರ: ಶಿವಾನಂದ

Published On :

ಹಂಗಾರಕಟ್ಟೆ: ಕನ್ನಡ ಅಪ್ಪಟವಾಗಿ ಉಳಿದಿರುವುದು ಇಂದು ಯಕ್ಷಗಾನ ರಂಗದಲ್ಲಿ ಮಾತ್ರ, ಅನುಕರಣೆಗೆ ನಿಲುಕದ ಯಕ್ಷಗಾನವು ವಿರೂಪಗೊಳ್ಳದೇ ಹಾಗೆಯೇ ಉಳಿದಿದೆ. ಓರ್ವ ಯಕ್ಷಗಾನ ಕಲಾವಿದನಿಗೆ ಯಾವುದೇ ಪಿಎಚ್ಡಿ ಪದವೀಧರರೊಂದಿಗೆ ವಾದ ನಡೆಸುವಷ್ಟು ಕನ್ನಡ ಭಾಷೆಯಲ್ಲಿ ಹಿಡಿತ, ಭಾಷಾ ಸಾಹಿತ್ಯವಿರುತ್ತದೆ ಎಂದು ನಿವೃತ್ತ ಅಧ್ಯಾಪಕ, ಅಂಕಣಕಾರ ಕೋಣಿ ಶಿವಾನಂದ ಕಾರಂತ ಹೇಳಿದರು.
ಅವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆದ ಕಲಾಕೇಂದ್ರದ ಸಂಸ್ಥಾಪಕ, ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ, ಯಕ್ಷಗಾನ ಚಿಂತಕ, ಸಹಕಾರಿ ತತ್ವದ ಪ್ರತಿಪಾದಕ ದಿ. ಐರೋಡಿ ಸದಾನಂದ ಹೆಬ್ಬಾರ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸದಾನಂದ ಪ್ರಶಸ್ತಿ- 2013 ಪ್ರದಾನ ಸಮಾರಂಭದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದರು.
ಐರೋಡಿ ಸದಾನಂದ ಹೆಬ್ಬಾರ್ ಅವರು ಅನೇಕ ಯಕ್ಷಗಾನ ಕಲಾವಿದರ ಸೃಷ್ಟಿಗೆ ನಾಂದಿ ಹಾಡಿದವರು. ಅವರ ಸಂಸ್ಮರಣೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು.
ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಕಲಾವಿದ, ಶಿಕ್ಷಕ, ಪ್ರಸಂಗಕರ್ತ ಎಂ.ಎ. ಹೆಗಡೆ ಅವರಿಗೆ ಸದಾನಂದ ಪ್ರಶಸ್ತಿ- 2013ರನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೆಗಡೆ, ರಂಗದಲ್ಲಿ ಮಾಡಿದ ಎಲ್ಲಾ ಸಾಧನೆಗೆ ಸಿಕ್ಕ ಗೌರವವನ್ನು ತನ್ನ ಗುರುಗಳಿಗೆ ಸಲ್ಲಬೇಕು. ಕೆರೆಮನೆ ಶಂಭು ಹೆಗಡೆಯವರ ಪ್ರೇರಣೆಯೇ ನನಗೆ ಯಕ್ಷಗಾನ ಪ್ರಸಂಗ ರಚನೆಗೆ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುದ್ದಣ್ಣ ಪ್ರಕಾಶನ ನಂದಳಿಕೆ ಇದರ ಗೌರವ ನಿರ್ದೇಶಕ ನಂದಳಿಕೆ ಬಾಲಚಂದ್ರ ರಾವ್, ಕೇಂದ್ರದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಮತ್ತು ಸದಾನಂದ ಹೆಬ್ಬಾರ್ರ ಕುಟುಂಬಿಕರಾದ ವೈಕುಂಠ ಹೆಬ್ಬಾರ್ ಇದ್ದರು.
ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು.
ಸೀತಾರಾಮ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮೀನಾ ಕಾರಂತ ಐರೋಡಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರಮಟ್ಟದ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಕಲಭಾಗ ಅವರ ತಂಡದವರಿಂದ ವಾದ್ಯ ವೈಭವ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.