ಉಡುಪಿ

ಶಾಸಕರಿಂದಲೇ ಬಿಪಿಎಲ್ ಕಾರ್ಡ್ ವಿತರಿಸಲು ಕಾಯುತ್ತಿರುವ ಅಧಿಕಾರಿಗಳು: ಆರೋಪ

Published On :

ಉಡುಪಿ: ಸರ್ಕಾರದಿಂದ ಹೊಸ ಬಿಪಿಎಲ್ ಪಡಿತರ ಕಾರ್ಡ್ಗಳು ಸಿದ್ಧವಾಗಿ ಫಲಾನುಭವಿಗಳಿಗೆ ವಿತರಣೆಗೆ ಈಗಾಗಲೇ ಬಂದಿವೆ. ಆದರೆ ಶಾಸಕ ಪ್ರಮೋದ್ ಮಧ್ವರಾಜ್ ಅವರೇ ಸ್ವತಃ ಗ್ರಾಪಂಗಳಿಗೆ ತೆರಳಿ ಈ ಬಿಪಿಎಲ್ ಕಾರ್ಡ್ಗಳನ್ನು ವಿತರಿಸುವುದಕ್ಕಾಗಿ ಅಧಿಕಾರಿಗಳು ಅವರ ಬಿಡುವಿನ ದಿನವನ್ನು ಕಾಯುತ್ತಿದ್ದಾರೆ. ಇದರಿಂದ ಈಗಾಗಲೇ ವಿಳಂಬದಿಂದ ತೊಂದರೆಗೀಡಾಗಿರುವ ಬಡವರು ಇನ್ನಷ್ಟು ಕಾಲ ಕಾಯುವ ಸ್ಥಿತಿ ಉಂಟಾಗಿದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ಮಾಜಿ ಶಾಸಕರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಶಾಸಕರ ಕಾರ್ಡ್ ವಿತರಣಾ ಸಮಾರಂಭಕ್ಕೆ ಕಾಯುವುದರಿಂದ ಬಡವರಿಗೆ ಈ ಕಾರ್ಡ್ಗಳಿಂದ ಸಿಗುವ ಅಕ್ಕಿ ಇತ್ಯಾದಿ ಸೌಲಭ್ಯಗಳು ಇನ್ನೂ ವಿಳಂಬವಾಗುತ್ತದೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಅನಗತ್ಯವಾಗಿ ಶಾಸಕರನ್ನು ಕಾಯದೇ ತಕ್ಷಣ ತಂತಮ್ಮ ಗ್ರಾಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಬಂದಿರುವ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೆ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವು ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಲೋಪವಾಗಿದ್ದು, ಅರ್ಹರು ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಅವರಿಗೆ ತಕ್ಷಣ ಬಿಪಿಎಲ್ ಕಾರ್ಡ್ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಅನರ್ಹ ಶ್ರೀಮಂತರು ಕೂಡ ಬಡವರ ಬಿಪಿಎಲ್ ಕಾರ್ಡ್ಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ದೂರುಗಳಿವೆ, ಅಂತಹವರನ್ನು ಗುರುತಿಸಿ ಅವುಗಳನ್ನು ರದ್ದುಗೊಳಿಸಬೇಕು ಎಂದೂ ರಘುಪತಿ ಭಟ್ ಆಗ್ರಹಿಸಿದರು.
ಒಂದು ವಾರದಲ್ಲಿ ಎಲ್ಲ ಗ್ರಾಪಂಗಳು ಅರ್ಹ ಫಲಾನುಭವಿಗಳಿಗೆ ಕಾರ್ಡ್ಗಳನ್ನು ವಿತರಿಸಿ, ಅದರಿಂದ ಸಿಗುವ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಬೇಕು, ಇಲ್ಲದಿದ್ದಲ್ಲಿ ಧರಣಿ ನಡೆಸಲಾಗುವುದು ಎಂದು ರಘಪತಿ ಭಟ್  ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಘುಪತಿ ಬ್ರಹ್ಮಾವರ, ತಾಪಂ ಮಾಜಿ ಸದಸ್ಯ ಧನಂಜಯ ಅಮೀನ್, ಜೀವನ್ ಶೆಟ್ಟಿ ಇದ್ದರು.

ಹಾಲಿ ಶಾಸಕರ ಮೇಲೆ ಮಾಜಿ ಶಾಸಕರ ಆರೋಪ
- ಬೇರೆ ಯಾವ ವಿಧಾನಸಭಾ ಕ್ಷೇತ್ರದಲ್ಲಿಯೂ ಇಲ್ಲದ ಬಿಪಿಎಲ್ ಕಾರ್ಡ್ ವಿತರಣಾ ಸಮಾರಂಭ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತಿದೆ. ಶಾಸಕರು ಇದನ್ನು ತಮ್ಮದೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ.
- ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ 14 ಮಾನದಂಡಗಳನ್ವಯ ಈ ಬಿಪಿಎಲ್ ಕಾರ್ಡ್ ಸಿದ್ಧವಾಗಿದ್ದು, ಇದು ಬಿಜೆಪಿ ಸರ್ಕಾರದ ಸಾಧನೆಯೇ ಹೊರತು ಶಾಸಕರು ಹೇಳುವಂತೆ ಕಾಂಗ್ರೆಸ್ ಸರ್ಕಾರದ ಸಾಧನೆಯಲ್ಲ.
- ಕಳೆದ 8 ವರ್ಷಗಳಿಂದ ಬಿಪಿಎಲ್ ಕಾರ್ಡ್ ವಿತರಣೆಯಾಗಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ, ಇದು ಸುಳ್ಳು, ಬಿಜೆಪಿ ಸರ್ಕಾರದ ಕಾಲದಲ್ಲಿ ಶೇ.50 ಕಾರ್ಡ್ ವಿತರಣೆಯಾಗಿದೆ.
- ಗ್ರಾಪಂಗಳಲ್ಲಿ ಕಾರ್ಡ್ ವಿತರಿಸುವ ಶಾಸಕರು ಇದು ತಮ್ಮ ಹುಟ್ಟುಹಬ್ಬದ ಕೊಡುಗೆ ಎಂದು ಹೇಳುತ್ತಿದ್ದಾರೆ, ಸರ್ಕಾರಿ ಸೌಲಭ್ಯವನ್ನು ಈ ರೀತಿ ವೈಯುಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
- ಕಾರಣಾಂತರದಿಂದ ಕಾರ್ಡ್ ವಿತರಣಾ ಸಮಾರಂಭದಲ್ಲಿ ತಮ್ಮ ಕೈಯಿಂದ ಕಾಡ್ ಸ್ವೀಕರಿಸಲು ಬಾರದ ಫಲಾನುಭವಿಗೆ ಕಾರ್ಡ್ ನೀಡದಂತೆ ಗ್ರಾಪಂ ಅಧಿಕಾರಿಗಳಿಗೆ ಶಾಸಕರು ನಿರ್ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.