ಉಡುಪಿ

ಪಡುಬಿದ್ರಿ: ಬೈಪಾಸ್ ನಿರ್ಮಾಣ ವಿರುದ್ಧ ಬೃಹತ್ ಪ್ರತಿಭಟನೆ

Published On :

ಪಡುಬಿದ್ರಿ: ಇಲ್ಲಿನ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರುವ ಪಾದೆಬೆಟ್ಟು ಎಂಬಲ್ಲಿ ಬೈಪಾಸ್ ನಿರ್ಮಾಣವನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಶನಿವಾರ ಸಂಜೆ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ದ್ವಾರದಿಂದ ಪಡುಬಿದ್ರಿ ಪೇಟೆಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ರಾ.ಹೆ. 66ರ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪಡುಬಿದ್ರಿ ಪೇಟೆಯಲ್ಲಿ ರಾ.ಹೆ. ಅಗಲೀಕರಣಕ್ಕೆ ವಿರೋಧ ವ್ಯಕ್ತವಾಗಿದ್ದು, ಪಕ್ಕದಲ್ಲಿ ಬೈಪಾಸ್ ರಸ್ತೆ ನಿರ್ಮಾಣದ ಪ್ರಸ್ತಾಪ ಕೂಡ ಇದೆ. ಈ ಬೈಪಾಸ್ ರಸ್ತೆಯಿಂದ ದಲಿತರು ತಮ್ಮ ಮನೆ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಬೈಪಾಸ್ ನಿರ್ಮಾಣ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸಮಿತಿಯ ಸದಸ್ಯ ಸುಂದರ ಮಾಸ್ತರ್, ಭೂ ಸಾರಿಗೆ ಇಲಾಖಾ ಸಚಿವ ಆಸ್ಕರ್ ಫೆರ್ನಾಂಡಿಸ್, ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೈಪಾಸ್ ನಿರ್ಮಾಣದ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ಬಿಟ್ಟು ಕೊಡದೆ ವಂಚಿಸುತ್ತಿದ್ದಾರೆ. ಹೆದ್ದಾರಿ ಇಲಾಖೆ ಕೂಡ ರಾ.ಹೆ. ಅಗಲೀಕರಣದ ಸಂದರ್ಭದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ನಿಯಮವನ್ನು ಪಾಲಿಸುತ್ತಿದೆ. ಪಡುಬಿದ್ರಿ ಪೇಟೆಯ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು, ಅಲ್ಲಿ ರಾ.ಹೆ. ಅಗಲಗೊಳಿಸದೆ ದಲಿತ ಕುಟುಂಬವೇ ಹೆಚ್ಚಾಗಿರುವ ಪ್ರದೇಶದಲ್ಲಿ ಬೈಪಾಸ್ ನಿರ್ಮಾಣಕ್ಕೆ ಯತ್ನಿಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಬೈಪಾಸ್ ನಿರ್ಮಾಣ ಕೈಬಿಡುವ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದರು.
ನಂತರ ಪ್ರತಿಭಟನಾಕಾರರು ಪಡುಬಿದ್ರಿ ಗ್ರಾ.ಪಂ. ಪಿಡಿಒ ಅವರ ಮುಖಾಂತರ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಹೂವಪ್ಪ ಮಾಸ್ಟರ್, ನಾಯಕರಾದ ಸುಂದರ ಗುಜ್ಜರಬೆಟ್ಟು, ಶಂಕರದಾಸ್ ಚೇಂಡ್ಕಳ, ಅಣ್ಣಪ್ಪ ಕೊಳಲಗಿರಿ, ಶ್ಯಾಮರಾಜ್ ಬಿರ್ತಿ, ವಿಠಲ ಮಾಸ್ತರ್ ಪಡುಬಿದ್ರಿ, ಭಾಸ್ಕರ್ ಪಡುಬಿದ್ರಿ, ಲೋಕೇಶ್ ಕಂಚಿನಡ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.