ಉಡುಪಿ

ಕಾಪು: ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ

Published On :

ಕಾಪು: ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿಯ ಮಜೂರು ಸ್ಥಾನೀಯ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಕೆಸರ್ಡ್ ಒಂಜಿ ಕಮಲ ಕೂಟ ಎಂಬ ಕೆಸರು ಗದ್ದೆ ಕ್ರೀಡಾಕೂಟವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸಿದರು.
ನಂತರ ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳಿಗೆ ತಿಲಾಂಜಲಿ ಇಟ್ಟು, ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವ ಈ ಸಮಯದಲ್ಲಿ ಇಂಥ ಕ್ರೀಡಾಕೂಟಗಳು ಪೂರಕ ಎನಿಸಿದೆ. ಭಾರತದ ಮೇಲೆ ಹಲವಾರು ವಿದೇಶಿಯರು ನಿರಂತರವಾಗಿ ದಾಳಿ ಮಾಡಿದರೂ ನಮ್ಮ ಸಂಸ್ಕೃತಿ ಇನ್ನೂ ಉಳಿದಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಕೃಷ್ಣಪ್ಪ ವಳದೂರು ಹಾಗೂ ಹಿರಿಯ ಕೃಷಿ ಕಾರ್ಮಿಕರಾದ ಕೊರಪಳು, ವಿಮಲ, ನಂದ ಮೂಲ್ಯದಿ, ಜಲಜ ಪೂಜಾರ್ತಿ, ಸುಂದರಿ ಮೂಲ್ಯದಿ ಇವರನ್ನು ಡಿ.ವಿ. ಸದಾನಂದ ಗೌಡ ಸನ್ಮಾನಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಕ್ಷೇತ್ರಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಡುಪಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ ಕುಲಾಲ್, ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, ತಾಪಂ ಸದಸ್ಯೆ ಶಾಂಭವಿ ಕುಲಾಲ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಶ್ಮಾ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮಲ ಕುಂದರ್, ಗ್ರಾಪಂ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಉರ್ದು ಪ್ರತಿಭಾ ಕಾರಂಜಿ
ಕಾಪು: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಇಲ್ಲಿನ ಕ್ರಸೆಂಟ್ ಇಂಟರ್‌ನ್ಯಾಶನಲ್ ಸಹಯೋಗದೊಂದಿಗೆ 2013- 14ನೇ ಸಾಲಿನ ಅಲ್ಪಸಂಖ್ಯಾತ ಭಾಷಾ ಶಾಲೆಗಳ ತಾಲೂಕು ಮಟ್ಟದ ಉರ್ದು ಸಾಂಸ್ಕೃತಿಕ ಸ್ಪರ್ಧೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸ್ಥಳೀಯ ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕ್ರಸೆಂಟ್ ಇಂಟರ್‌ನ್ಯಾಶನಲ್ ಶಾಲೆ ಸಂಚಾಲಕ ಶಂಶುದ್ದೀನ್ ಯೂಸುಫ್ ಸಾಹೇಬ್, ಕುತ್ಯಾರು ಗ್ರಾಪಂ ಪ್ರಭಾರ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ವಿಷಯ ಪರಿವೀಕ್ಷಕ ವೆಂಕಟೇಶ ನಾಯ್ಕ್, ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಲ್ಬರ್ನ್ ರೋಡ್ರಿಗಸ್, ಜನ ಸಂಪರ್ಕ ಜನಸೇವಾ ವೇದಿಕೆಯ ಅಧ್ಯಕ್ಷ ಕಳತ್ತೂರು ದಿವಾಕರ ಡಿ. ಶೆಟ್ಟಿ, ಶೆಹನಾಜ್ ಶಂಶುದ್ದೀನ್ ವೇದಿಕೆಯಲ್ಲಿದ್ದರು.
ಕಾರ್ಕಳ, ಉಡುಪಿ, ಬ್ರಹ್ಮಾವರ ವಲಯಗಳ ಅಲ್ಪ ಸಂಖ್ಯಾತ ಭಾಷಾ ಶಾಲೆ ವಿದ್ಯಾರ್ಥಿಗಳು, ವಿವಿಧ ಶಾಲೆ ಶಿಕ್ಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಡಾ. ಜಯರಾಮ್ ಶೆಟ್ಟಿಗಾರ್‌ಗೆ ಸನ್ಮಾನ
ಕಲ್ಯಾಣಪುರ: ಸ್ಥಳೀಯ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿವಿ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಇತ್ತೀಚಿಗೆ ಹಂಪಿಯ ಕನ್ನಡ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಜಯರಾಮ್ ಶೆಟ್ಟಿಗಾರ್ ಅವರನ್ನು ಶಾಸಕ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ರೆ.ಫಾ. ಸ್ಟ್ಯಾನಿ ಬಿ. ಲೋಬೋ, ಪ್ರಾಂಶುಪಾಲ ಡಾ. ನೇರಿ ಕರ್ನೇಲಿಯೊ, ಎಡ್ವರ್ಡ್ ಲೂವಿಸ್, ಪ್ರೊ. ಸುಬ್ರಹ್ಮಣ್ಯ ಜೋಶಿ, ಪೀಟರ್ ಡಿಸೋಜ ಉಪಸ್ಥಿತರಿದ್ದರು.
ಬೆಳ್ಮಣ್ ರೋಟರಿ ವೆಬ್‌ಸೈಟ್ ಉದ್ಘಾಟನೆ
ಉಡುಪಿ: ಬೆಳ್ಮಣ್ ರೋಟರಿ ಕ್ಲಬ್‌ನ ನೂತನ ಅಂತರ್ಜಾಲ ತಾಣವನ್ನು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180ರ ಮಾಹಿತಿ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಬಿ. ಪುಂಡಲೀಕ ಮರಾಠೆ ಉದ್ಘಾಟಿಸಿದರು. ಜಿಲ್ಲಾ ರೋಟರ್ಯಾಕ್ಟ್ ಸಮಿತಿ ಜಿಲ್ಲಾಧ್ಯಕ್ಷ ಅಭಿನಂದನ್ ಶೆಟ್ಟಿ, ವಲಯ ಸಹಾಯಕ ಗವರ್ನರ್ ಮಾಧವ ಸುವರ್ಣ, ವಲಯ ಸೇನಾನಿ ಎನ್.ಪಿ. ಶೆಟ್ಟಿ, ರೋಟರಿ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ, ಕಾರ್ಯದರ್ಶಿ ವಿಘ್ನೇಶ್ ಶೆಣೈ, ಸುನಿಲ್ ದೇವ್, ರೋಟರ್ಯಾಕ್ಟ್ ಅಧ್ಯಕ್ಷ ರಘುರಾಮ ರಾವ್, ಕಾರ್ಯದರ್ಶಿ ಸುಭಾಸ್ ಕುಮಾರ್ ಇದ್ದರು.
ಉಪನ್ಯಾಸ ಕಾರ್ಯಕ್ರಮ
ಉಡುಪಿ: ಶಿರ್ವದ ಶ್ರೀಕಾಶೀಮಠ ಶ್ರೀಮಹಾಲಸಾ ನಾರಾಯಣೀ ದೇವಳದಲ್ಲಿ ಇತ್ತೀಚಿಗೆ ಸಂಧ್ಯಾವಂದನೆ ಶಿಕ್ಷಣ ಮತ್ತು ದೇವರಪೂಜಾ ಬಗ್ಗೆ ವೇದಮೂರ್ತಿ ಚೇಂಪಿ ಶ್ರೀರಾಮಚಂದ್ರ ಅನಂತ ಭಟ್ ಉಪನ್ಯಾಸ ನೀಡಿದರು.  ಈ ಸಂದರ್ಭದಲ್ಲಿ ಶ್ರೀದೇವಳದ ಅರ್ಚಕ ರಘುರಾಮ ಶೆಣೈ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪಡುಬೆಳ್ಳೆ: ಶಿಕ್ಷಕ- ಪೋಷಕರ ಸಮಾವೇಶ
ಉಡುಪಿ: ಮಗುವಿಗೆ ತಾಯಿ ಪ್ರತ್ಯಕ್ಷ ದೇವರು ಹಾಗೂ ಪ್ರಧಾನ ಗುರುವಾಗಿದ್ದು, ಮಗುವಿನ ಕಲಿಕೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಗುವಿನ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಕ ಮತ್ತು ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಚಿಂತಕ ಬಿ. ಪುಂಡಲೀಕ ಮರಾಠೆ ನುಡಿದರು. ಸೋಮವಾರ ಇಲ್ಲಿನ ಪಡುಬೆಳ್ಳೆ ಪಾಂಬೂರು ಕ್ಯಾಥೋಲಿಕ್ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ- ಪೋಷಕರ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪಾಂಬೂರು ಶಾಂತಿಪುರ ಪವಿತ್ರ ಶಿಲುಬೆ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ಪೌಲ್ ರೇಗೋ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಕುಮಾರ್ ಇದ್ದರು.  ಹೆರಾಲ್ಡ್ ಡಿಮೆಲ್ಲೊ ಸ್ವಾಗತಿಸಿ, ಜೆನೆಟ್ ರೇಗೋ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.