ಉಡುಪಿ

ಡಾ. ಶ್ರೀನಿವಾಸ ರಿತ್ತಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ

Published On :

ಉಡುಪಿ: ಪ್ರೋತ್ಸಾಹ ಮತ್ತು ಅನುಕೂಲತೆಗಳಿಲ್ಲದಿದ್ದ ಆ ಕಾಲದಲ್ಲಿಯೂ ಗೋವಿಂದ ಪೈ ಸಾಹಿತ್ಯ ಕ್ಷೇತ್ರಲ್ಲಿ ಅತ್ಯಭೂತಪೂರ್ವ ಸಾಧನೆ ಮಾಡಿ ರಾಷ್ಟ್ರಕವಿ ಎನಿಸಿಕೊಂಡರು. ಆದರೆ, ಇಂದು ಸವಲತ್ತುಗಳು ಇವೆ, ಪ್ರೋತ್ಸಾಹವೂ ಹೆಚ್ಚಾಗಿದೆ. ಆದರೆ, ಸೃಷ್ಟಿಯಾಗುತ್ತಿರುವ ಸಾಹಿತ್ಯ ಗುಣಮಟ್ಟ ಕಳೆದುಕೊಂಡಿದೆ ಎಂದು ಧಾರವಾಡದ ಹಿರಿಯ ಸಂಶೋಧಕ ಡಾ. ಶ್ರೀನಿವಾಸ ಎಚ್. ರಿತ್ತಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ 'ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಅಧ್ಯಯನ, ಬರವಣಿಗೆಗೆ ಕಠಿಣ ವಿಷಯಗಳನ್ನು ಆರಿಸಿಕೊಂಡಿದ್ದ ಪೈ, ಅದೇ ಕಾರಣಕ್ಕೆ ಇತರ ವಿದ್ವಾಂಸರಿಗಿಂತ ಭಿನ್ನರೆನಿಸಿಕೊಂಡಿದ್ದಾರೆ. ಅವರ ಸಂಶೋಧನೆ ಕೇವಲ ಇತಿಹಾಸ ಹಾಗೂ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಅಖಿಲ ಭಾರತೀಯ ಮಟ್ಟದ ವ್ಯಾಪ್ತಿಗೆ ಹರಡಿಕೊಂಡಿತ್ತು ಎಂದು ಅವರು ಹೇಳಿದರು.
ಬರವಣಿಗೆಯಲ್ಲಿ ಸದಾ ಹೊಸ ಶಬ್ದ, ನವೀನತೆ ಬಯಸಿದ ಪೈ, ಇಂದಿನವರಿಗೆ ಮಾರ್ಗದರ್ಶಕರೂ, ಮಾದರಿಯೂ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ವಿದ್ವಾಂಸ ತಾಳ್ತಜೆ ವಸಂತ ಕುಮಾರ್ ಮಾತನಾಡಿ, ಗೋವಿಂದ ಪೈ ಅವರು ಸಂಶೋಧನೆಗೆ ವಿಶೇಷವಾದ ಆಯಾಮ ನೀಡಿದ್ದಾರೆ. ಅವರ ಖಚಿತತೆ, ನಿಖರತೆ, ನಿದರ್ಶನಗಳು ಕರಾರುವಕ್ಕಾಗಿದ್ದು, ಸತ್ಯದ ಪ್ರತಿಪಾದನೆಯ ಸಾಕ್ಷಿಗಳಾಗಿವೆ ಎಂದರು.
ಮಣಿಪಾಲ ವಿ.ವಿ.ಯ ಕುಲಪತಿ ಡಾ.ಎಂ. ರಾಮದಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಅನಂತ ಕೃಷ್ಣ, ಸಂಶೋಧಕ ಡಾ. ಗಣಪತಿ ಗೌಡ, ಕಾಲೇಜ್ ಟ್ರಸ್ಟಿನ ಅಧ್ಯಕ್ಷ ಟಿ. ಮೋಹನದಾಸ ಪೈ, ಪ್ರಾಂಶುಪಾಲ ಎನ್. ಹಾಲಾ ನಾಯ್ಕ್, ಅಕಾಡೆಮಿ ಅಧ್ಯಕ್ಷ ಎಚ್.ಎಸ್. ಬಲ್ಲಾಳ್ ಇದ್ದರು.
ಟಿ. ವಿಮಲಾ ವಿ. ಪೈ ಅವರ ತೈಲ ಚಿತ್ರ ಅನಾವರಣಗೊಳಿಸಲಾಯಿತು.
ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.