ಸಂಸ್ಕಾರ ಶಿಕ್ಷಣ ಮೂಲೆಗುಂಪು: ಸ್ವಾಮಿ ಜಿತಕಾಮಾನಂದಜಿ ಖೇದ
ಕಾಂತಾವರ: ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಲಕ್ಷಾಂತರ ಗುರುಕುಲ ಪದ್ಧತಿಯ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದ ಬ್ರಿಟಿಷರು ವ್ಯವಸ್ಥಿತವಾಗಿ ತಮ್ಮ ಪಾಶ್ಚಾತ್ಯ ಶಿಕ್ಷಣ ಕ್ರಮವನ್ನು ಇಲ್ಲಿ ಜಾರಿಗೊಳಿಸಿ ಇಲ್ಲಿನ ಜನರ ಸಂಸ್ಕೃತಿ ಮತ್ತು ಆತ್ಮವಿಶ್ವಾಸವನ್ನು ನಾಶಮಾಡಿದ್ದರಿಂದಾಗಿ ಇಲ್ಲಿನ ಸಂಸ್ಕಾರಯುಕ್ತ ಶಿಕ್ಷಣ ಮೂಲೆ ಗುಂಪಾಯಿತು ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ತಿಳಿಸಿದರು.
ಕಾಂತಾವರ ಅಲ್ಲಮಪ್ರಭು ಪೀಠದ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ ಭಾನುವಾರ 'ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಚಿಂತನೆಗಳು' ವಿಷಯದ ಕುರಿತು ಅವರು ಮಾತನಾಡಿದರು. ನಮ್ಮ ದೇಶದ ಮತ್ತು ಪೂರ್ವಜರ ಭವ್ಯ ಪರಂಪರೆ ಬಗ್ಗೆ ನಮ್ಮ ಮಕ್ಕಳಿಗೆ ಅರಿವು ಮೂಡಿಸುವುದರ ಬದಲಿಗೆ ಇಂದು ಬಾಲ್ಯದಿಂದಲೇ ನಕಾರಾತ್ಮಕ ಚಿಂತನೆಯ ಶಿಕ್ಷಣವೇ ಸಿಗುತ್ತಿದೆ ಎಂದು ತಿಳಿಸಿದರು.
ಯಾವ ವಿದ್ಯಾಭ್ಯಾಸದಿಂದ ಒಬ್ಬ ವ್ಯಕ್ತಿಯ ಶೀಲ, ಸಚ್ಚಾರಿತ್ರ್ಯದೊಂದಿಗೆ ಆತ್ಮವಿಶ್ವಾಸವು ವೃದ್ಧಿಸಿ, ಅಭಿವ್ಯಕ್ತವಾಗುವುದೋ ಅದೇ ನಿಜವಾದ ಶಿಕ್ಷಣ. ವ್ಯಕ್ತಿತ್ವವನ್ನು ರೂಪಿಸುವುದೇ ನಮ್ಮೊಳಗಿನ ಸಂಸ್ಕಾರ ಮತ್ತು ಚಿಂತನೆಗಳಾದುದರಿಂದ ಶಿಕ್ಷಣದ ಅವಶ್ಯಕತೆ ಇಂದು ಎಂದಿಗಿಂತ ಹೆಚ್ಚಾಗಿದೆ ಎಂದು ಹೇಳಿದರು.
ನಮ್ಮ ದೇಶವಿಂದು ಹಲವು ವಿಷಯಗಳಲ್ಲಿ ಪ್ರಗತಿ ಹೊಂದಿದ್ದರೂ ಸಾಕಷ್ಟು ಪಿಡುಗುಗಳು ನಮ್ಮನ್ನು ದಿನಂಪ್ರತಿ ಬಾಧಿಸುತ್ತಿದೆ. ಆದರೆ, ಎಲ್ಲ ಸಮಸ್ಯೆ ಅನಾಹುತಗಳಿಗೆ ಗ್ರಾಮೀಣ ಭಾಗದ ಅನಕ್ಷರಸ್ಥರು ಕಾರಣರಾಗದೆ ಉನ್ನತ ವಿದ್ಯಾಭ್ಯಾಸದಲ್ಲಿ ಪರಿಣತರಾದವರೇ ಕಾರಣರಾಗುತ್ತಿರುವುದು ವಿಪರ್ಯಾಸ. ಶಿಕ್ಷಣ ಪದ್ಧತಿಯಲ್ಲಿರುವ ಲೋಪವೇ ಎಲ್ಲ ಅನಾಹುತಗಳಿಗೆ ಮೂಲ ಕಾರಣವಾಗಿದೆ. ಇದನ್ನು ಎಲ್ಲರೂ ಒಪ್ಪುತ್ತಿದ್ದರೂ ಸರಿಪಡಿಸುವ ಇಚ್ಚಾಶಕ್ತಿ ಇಲ್ಲದಿರುವುದರಿಂದ ಸಮಸ್ಯೆಗಳು ಪರಿಹಾರವಾಗದೆ ಬೆಳೆಯುತ್ತಲೇ ಇವೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು. ಸಿ.ಕೆ. ಪಡಿವಾಳ್ ಇದ್ದರು. ಬಾಬು ಶೆಟ್ಟಿ ನಾರಾವಿಯವರ ವಚನ ಗಾಯನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಡಾ. ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ. ಮೊಗಸಾಲೆಯವರು ಸ್ವಾಗತಿಸಿ, ಯಶೋಧರ್ ಪಿ. ಕರ್ಕೇರಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

