ಕೇಳಿದ್ದು ಒಂದು ಕೆ.ಜಿ., ಕೊಟ್ಟದ್ದು ಹತ್ತಾರು ಕೆ.ಜಿ.
ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಸ್ವಾತಂತ್ರ್ಯದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ತುಂಡುಗಳಾಗಿ ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ ವಿಶ್ವಮಾನ್ಯರಾದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ವಿಶ್ವದಾಖಲೆಯ ಪ್ರತಿಮೆ ಸ್ಥಾಪನೆಗೆ ಉಡುಪಿ ಜಿಲ್ಲೆಯಲ್ಲಿ ಕಬ್ಬಿಣ, ಮೃತ್ತಿಕೆ, ಸಹಿ ಸಂಗ್ರಹ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ.
ಮಂಗಳವಾರದವರೆಗೆ ಉಡುಪಿ ಜಿಲ್ಲೆಯ 146 ಗ್ರಾಮ ಪಂಚಾಯಿತಿಗಳಲ್ಲಿ 103 ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ಪೂರ್ಣಗೊಂಡಿದ್ದು, ಪಂಚಾಯಿತಿಗೆ 1 ಕೆ.ಜಿ.ಯಂತೆ 103 ಕೆ.ಜಿ. ಕಬ್ಬಿಣ ಸಂಗ್ರಹವಾಗಿದೆ.
ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ನರ್ಮದಾ ನದಿಯ ನಡುವೆ ವಿಶ್ವದಲ್ಲಿಯೇ ಅತೀ ಎತ್ತರ 186 ಮೀಟರ್ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲರ ಈ ವಿಗ್ರಹ ಸ್ಥಾಪನೆಯಾಗಲಿದೆ. ರೈತರ ನಾಯಕರಾಗಿದ್ದ ಸರ್ದಾರ್ ಅವರ ಈ ಪ್ರತಿಮೆಯನ್ನು ರೈತರು ತಮ್ಮ ಕೃಷಿ ಕಾರ್ಯಕ್ಕೆ ಬಳಸಿದ ಹಳೆಯ ಕಬ್ಬಿಣದಿಂದಲೇ ನಿರ್ಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ದೇಶದಾದ್ಯಂತ ಗ್ರಾಮ ಪಂಚಾಯಿತಿನಿಂದ 1 ಕೆ.ಜಿ. ಬಳಸಿದ ಕಬ್ಬಿಣವನ್ನು ಸಂಗ್ರಹಿಸುವ ಈ ಅಭಿಯಾನ ನಡೆಯುತ್ತಿದೆ.
ಜನಸಾಮಾನ್ಯರಿಂದ ಈ ಕಾರ್ಯಕ್ರಮಕ್ಕೆ ಎಂತಹ ಭರ್ಜರಿ ಬೆಂಬಲ ಸಿಕ್ಕಿದೆ ಎಂದರೆ ಉಡುಪಿ ಜಿಲ್ಲೆಯಲ್ಲಿ ರೈತರು ತಾವು ಬಳಸಿದ ಕತ್ತಿ, ಕೊಡಲಿ, ಹಾರೆ, ನೇಗಿಲು ಇತ್ಯಾದಿ ಹತ್ತಾರು ಕೆ.ಜಿ. ಕಬ್ಬಿಣದ ಉಪಕರಣಗಳನ್ನು ಕೊಡುವುದಕ್ಕೆ ಮುಂದೆ ಬಂದಿದ್ದಾರೆ. ಆದರೆ, ಪ್ರತಿಯೊಂದು ಗ್ರಾ.ಪಂ.ನಿಂದ ಕಡ್ಡಾಯವಾಗಿ 1 ಕೆ.ಜಿ. ಕಬ್ಬಿಣವನ್ನು ಮಾತ್ರ ಸಂಗ್ರಹಿಸುವುದಕ್ಕೆ ಅವಕಾಶ ಇದೆ.
2.50 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ: ಈ ಕೆ.ಜಿ. ಕಬ್ಬಿಣದ ಜೊತೆಗೆ ಆಯಾ ಗ್ರಾ.ಪಂ.ಗಳ ದೇವಸ್ಥಾನ, ದೈವಸ್ಥಾನ, ಗರೋಡಿ, ನಾಗಾಲಯ ಇತ್ಯಾದಿ ಶ್ರದ್ಧಾ ಕೇಂದ್ರಗಳಿಂದ ಒಂದು ಹಿಡಿ ಮಣ್ಣನ್ನು ಕೂಡ ಸಂಗ್ರಹಿಸಿ ಕಳುಹಿಸಲಾಗುತ್ತಿದೆ. ಅಲ್ಲದೇ ಆಯಾ ಗ್ರಾಮಗಳಿಂದ ಈ ಯೋಜನೆಗೆ ಬೆಂಬಲವಾಗಿ ಸಹಿ ಸಂಗ್ರಹ ಕೂಡ ನಡೆಯುತ್ತಿದೆ. ಉಡುಪಿ ಜಿಲ್ಲೆಯಿಂದ ಪ್ರತಿ ಗ್ರಾಮಗಳಿಂದ 2ರಿಂದ 3 ಸಾವಿರ ಮಂದಿಯ ಸಹಿಯಂತೆ 2.50 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದೆ.
ಈ ಕಾರ್ಯಕ್ರಮದ ಸಂಚಾಲಕತ್ವವನ್ನು ವಹಿಸಿಕೊಂಡಿರುವ ಉದಯಕುಮಾರ್ ಶೆಟ್ಟಿ ಅವರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರು ಆ ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪನೆಯಲ್ಲಿ ಕೈ ಜೋಡಿಸುವಂತೆ ಮಾಡುತ್ತಿದ್ದಾರೆ. ಫೆ. 15ರಂದು ಈ ಕಾರ್ಯಕ್ರಮ ಕೊನೆಗೊಳ್ಳಲಿದ್ದು, ಅಂದು ಉಡುಪಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಸಂಗ್ರಹಿಸಿ ತಂದಿರುವ ಕಬ್ಬಿಣ, ಮೃತ್ತಿಕೆ ಮತ್ತು ಸಹಿ ಸಂಗ್ರಹವನ್ನು ಜಿಲ್ಲಾ ಸಮಿತಿಗೆ ಹಸ್ತಾಂತರಿಸಲಾಗುವುದು. ಅಲ್ಲಿಂದ ವಿಶೇಷ ಲಾರಿಯೊಂದರಲ್ಲಿ ಬೆಂಗಳೂರಿಗೆ, ಅಲ್ಲಿಂದ ಗುಜರಾತ್ನ ನರ್ಮದಾ ನದಿ ತೀರಕ್ಕೆ ಈ ಲೋಹ, ಮೃತ್ತಿಕೆ, ಸಹಿ ಸಂಗ್ರಹಗಳನ್ನು ಕಳುಹಿಸಲಾಗುವುದು ಎಂದು ಉದಯಕುಮಾರ್ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

