ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಒಂದೇ ಸ್ಮಶಾನ ಅಭಿವೃದ್ಧಿ ಖಂಡಿಸಿ ಪ್ರತಿಭಟನೆ
ಪಡುಬಿದ್ರಿ: ಇಲ್ಲಿನ ಉಚ್ಚಿಲಬಡಾ ಗ್ರಾಪಂನಲ್ಲಿರುವ 2 ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಜಿಲ್ಲಾಧಿಕಾರಿಗಳ ಆದೇಶಕ್ಕೆ ವಿರುದ್ಧವಾಗಿ ಒಂದೇ ಸ್ಮಶಾನವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಎರ್ಮಾಳು ಬಡಾ ಮೊಗವೀರ ಸಭಾ ವತಿಯಿಂದ ಶುಕ್ರವಾರ ಸ್ಮಶಾನ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಭಾದ ಅಧ್ಯಕ್ಷ ಜಿನರಾಜ್ ಎರ್ಮಾಳ್, ಉಚ್ಚಿಲ ಬಡಾ ಗ್ರಾಮದಲ್ಲಿರುವ ಕಟ್ಟಿಂಗೇರಿ ಮತ್ತು ಬಡಾ ಶಾಲೆಯ ಬಳಿ ಇರುವ ಎರಡೂ ಸ್ಮಶಾನಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ, ಕಂದಾಯ ಇಲಾಖೆ, ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸ್ಥಳೀಯಾಡಳಿತ ಏಕಪಕ್ಷೀಯ ನಿರ್ಣಯ ಕೈಗೊಂಡು ಬಡಾ ಗ್ರಾಮದ ಸರ್ಕಾರಿ ಶಾಲೆ ಬಳಿ ಸ್ಮಶಾನದ 48 ಸೆಂಟ್ಸ್ ಜಮೀನನ್ನು 8.75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಣಯ ಕೈಗೊಂಡಿದೆ. ಇಲ್ಲಿ ಸರ್ಕಾರಿ ಶಾಲೆ ಇದ್ದು, ಸುತ್ತಮುತ್ತ ಮನೆಗಳಿಂದ ಜನನಿಬಿಡ ಪ್ರದೇಶವಾಗಿದೆ. ಅಲ್ಲದೆ ಈ ಸ್ಮಶಾನವನ್ನು ಸಾರ್ವಜನಿಕರು ಬಳಸುತ್ತಲೂ ಇಲ್ಲ. ಆದ್ದರಿಂದ ಕೇವಲ ಈ ಸ್ಮಶಾನವನ್ನು ಮಾತ್ರ ಅಭಿವೃದ್ಧಿಪಡಿಸುವುದು ಸರಿಯಲ್ಲ, ಸಾರ್ವಜನಿಕ ಹಿತದೃಷ್ಟಿಯಿಂದ ಎರಡೂ ಸ್ಮಶಾನವನ್ನು ಏಕಕಾಲದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಡುಪಿ ತಹಸೀಲ್ದಾರ್ ಗುರುಪ್ರಸಾದ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಕಾನೂನು ಪರಿಮಿತಿಯೊಳಗೆ ಸಮಸ್ಯೆಯ ಸೌಹಾರ್ದ ಇತ್ಯರ್ಥಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ. ಆದಷ್ಟು ಶೀಘ್ರ ಎರಡೂ ಕಡೆ ಸ್ಮಶಾನ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸಭಾ ಉಪಾಧ್ಯಕ್ಷ ಶೇಖರ್ ಎನ್. ಪುತ್ರನ್, ಕಾರ್ಯದರ್ಶಿ ಲಕ್ಷ್ಮಣ ತಿಂಗಳಾಯ, ಮಹಿಳಾ ಸಭಾ ಅಧ್ಯಕ್ಷೆ ಲಕ್ಷ್ಮೀ ಸಂಜೀವ ಸಾಲ್ಯಾನ್, ಸಮಿತಿ ಸದಸ್ಯರಾದ ಭರತ್ ಕುಮಾರ್ ಎರ್ಮಾಳ್, ಶೇಖರ ಗುರಿಕಾರ, ದಿನೇಶ್ ಎರ್ಮಾಳ್, ಮನೋಹರ ಕುಂದರ್, ಯಶೋಧಾ ಬಂಗೇರ, ರಾಮ ಸುವರ್ಣ ಮತ್ತಿತರರು ಈ ಸಂದರ್ಭ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

