ಬಿಜೆಪಿ ಜನಾಂದೋಲನ ಪಾದಯಾತ್ರೆ ಎರಡನೇ ದಿನಕ್ಕೆ
ಉಡುಪಿ: ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲೆಯ ದಕ್ಷಿಣದಿಂದ ಉತ್ತರದವರೆಗೆ ನಡೆಸುತ್ತಿರುವ 4 ದಿನಗಳ ಜನಾಂದೋಲನ ಪಾದಯಾತ್ರೆ ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿತು.
ಈ ಪಾದಯಾತ್ರೆಯ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ ಬಿಜೆಪಿಯ ನಾಯಕರು ನಿರೀಕ್ಷಿಸಿದಷ್ಟು ಜನರ ಬೆಂಬಲ ವ್ಯಕ್ತವಾಗಿಲ್ಲ, ಪಾದಯಾತ್ರೆಯುದ್ದಕ್ಕೂ ಸುಮಾರು 1000 ಮಂದಿ ಭಾಗವಹಿಸುತ್ತಾರೆ. ಅಲ್ಲಲ್ಲಿ ಮತ್ತೆ 1000ದಷ್ಟು ಕಾರ್ಯಕರ್ತರು ಸೇರಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದರೂ, ಒಟ್ಟಾರೆ ಪಾದಯಾತ್ರೆಯಲ್ಲಿ 500ಕ್ಕೂ ಕಡಿಮೆ ಜನರು ಭಾಗವಹಿಸಿದ್ದರು.
ಜಿಲ್ಲೆಯನ್ನು ಹಾದು ಹೋಗುವ ರಾ.ಹೆ. 66ರ ಚತುಷ್ಪಥ ಕಾಮಗಾರಿಯಲ್ಲಾಗುತ್ತಿರುವ ವಿಳಂಬ, ಕೇಂದ್ರ ಸರ್ಕಾರದ ಅಡಕೆ ಬೆಳೆ ನಿಷೇಧ ಪ್ರಸ್ತಾಪ, ಕರಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಉಗ್ರರ ಚಟುವಟಿಕೆ ಇತ್ಯಾದಿಗಳನ್ನು ಖಂಡಿಸಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಉಡುಪಿಯ ಕರಾವಳಿ ಬೈಪಾಸ್ನಿಂದ ಹೊರಟ ಪಾದಯಾತ್ರೆ ಸಂಜೆ ಕುಂದಾಪುರದ ತೆಕ್ಕಟ್ಟೆಯಲ್ಲಿ ವಿಶ್ರಾಂತಗೊಂಡಿದೆ. ನಡುವೆ ಕಲ್ಯಾಣಪುರ- ಸಂತೆಕಟ್ಟೆ ಬೈಪಾಸ್, ಬ್ರಹ್ಮಾವರ, ಸಾಲಿಗ್ರಾಮ ಮತ್ತು ಕೋಟದಲ್ಲಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ನಾಯಕರು ಹಾಗೂ ಪ್ರಮುಖರು ಈ ಸಭೆಗಳನ್ನುದ್ದೇಶಿಸಿ ಮಾತನಾಡಿದರು.
ಲೋಕಸಭಾ ಚುನಾವಣೆಗೆ ರಣವೀಳ್ಯ...
ಬಿಜೆಪಿ ಜನಾಂದೋಲನ ಪಾದಯಾತ್ರೆ ಸಾಗುವ ದಾರಿ ಮಧ್ಯೆ ಉಪ್ಪೂರು ಗ್ರಾಮಸ್ಥರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುವಂತೆ ರಣವೀಳ್ಯವನ್ನು ನೀಡಿದ ಕುತೂಹಲಕಾರಿ ಘಟನೆ ನಡೆಯಿತು. ಈ ಗ್ರಾಮದ ಸುನಿಲ್ ಎಂಬವರ ನೇತೃತ್ವದಲ್ಲಿ ವೀಳ್ಯ ಹಾಗೂ 11 ರುಪಾಯಿಯನ್ನು ಬಿಜೆಪಿ ನಾಯಕರಿಗೆ ನೀಡಿ ಪಾದಯಾತ್ರೆಯನ್ನು ಸ್ವಾಗತಿಸಲಾಯಿತು. ಮುಂದಿನ ಚುನಾವಣೆಯಲ್ಲಿ ವಿಜಯ ಸಾಧಿಸುವಂತೆ ಹಾರೈಸಲಾಯಿತು.
2ನೇ ದಿನ ಪಾದಯಾತ್ರೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಮಾಜಿ ಶಾಸಕ ರಘುಪತಿ ಭಟ್, ಮಾಜಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಶ್ಯಾಮಲಾ ಕುಂದರ್, ವಿಹಿಂಪ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ, ವಿಲಾಸ್ ನಾಯಕ್, ದೇವದಾಸ್ ಹೆಬ್ಬಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

