ಉಡುಪಿ

ಮಠಗಳಿಗೆ ಅಂಕುಶ ಪ್ರಸ್ತಾಪ; ಸರ್ಕಾರದ ವಿರುದ್ಧ ಮತ್ತೆ ಜನಾರ್ದನ ಪೂಜಾರಿ ಗರಂ

Published On :

ಉಡುಪಿ: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಠಗಳಿಗೆ ಅಂಕುಶ ಹಾಕುವ ಹೊಸ ಕಾಯ್ದೆ ತರುವ ರಾಜ್ಯ ಸರ್ಕಾರ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪೂಜಾರಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಕಾಯ್ದೆಯ ವಿಷಯ ಇಲ್ಲ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
 ಉಡುಪಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ, ಹೈಕೋರ್ಟ್ ಸೂಚನೆಯಂತೆ ಈ ಕಾಯ್ದೆ ತರುವುದಕ್ಕೆ ಯೋಚಿಸಲಾಗುತ್ತಿದೆ ಎಂದು ರಾಜ್ಯ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ, ಹೈಕೋರ್ಟ್ ಹೇಳಿದ್ದರೆ ಅದರ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿ, ಸರ್ವ ರೀತಿಯಲ್ಲಿಯೂ ಪ್ರಯತ್ನಗಳನ್ನು ಮಾಡಿ ಈ ಆದೇಶ ತೆರವು ಮಾಡಿಕೊಂಡು ಬನ್ನಿ ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು.  ಅಲ್ಲದೆ, ಈ ಹೇಳಿಕೆ ನೀಡಿರುವ ಮಂತ್ರಿಯನ್ನು ಕರೆದು ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಿ, ಈ ಕಾಯ್ದೆ ತರುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿ ಎಂದೂ ಪೂಜಾರಿ ಮುಖ್ಯಮಂತ್ರಿಗೆ ತಾಕೀತು ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಎಂ. ಎ., ಗಫೂರ್ ಮತ್ತು ಸದಸ್ಯ ದಿನೇಶ್ ಪುತ್ರನ್ ಇದ್ದರು.  
ಮಠಗಳ ಮೇಲೆ ಸಂಶಯ ಸಲ್ಲದು
ರಾಜ್ಯದಲ್ಲಿರುವ ಮಠಗಳು ಸಾವಿರಾರು ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ ಕೆ.ಜಿ.ಯಿಂದ ಪಿ.ಜಿ.ವರೆಗೆ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಈ ಶಿಕ್ಷಣವನ್ನು ಸರ್ಕಾರ ತನ್ನ ಶಾಲೆಗಳ ಮೂಲಕ ನೀಡುವುದಕ್ಕೆ ಖಂಡಿತಾ ಸಾಧ್ಯವಿಲ್ಲ. ಹಾಗಿರುವಾಗ ಇಂತಹ ಮಠಗಳ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ಎಂದವರು ತಮ್ಮ ವಾದವನ್ನು ಪೂಜಾರಿ ಸಮರ್ಥಿಸಿದರು. ಯಾವುದೇ ಒಂದು ಮಠದಲ್ಲಿ ಅವ್ಯವಹಾರ, ಹಣ, ಅಧಿಕಾರದ ದುರ್ಬಳಕೆ ನಡೆದರೆ ಅಂತಹ ಮಠದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ನಮ್ಮಲ್ಲಿ ಈಗಾಗಲೇ ಬೇಕಾದಷ್ಟು ಕಾನೂನುಗಳಿವೆ, ಅದನ್ನು ಬಳಸಿ, ಹೊಸ ಕಾಯ್ದೆ ಬೇಕಾಗಿಲ್ಲ ಎಂದು ಪೂಜಾರಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.