ಉಡುಪಿ

ಪಾಸ್‌ಪೋರ್ಟ್‌ಗೆ ನಕಲಿ ವರ್ಗಾವಣೆ ಪತ್ರ ಸಲ್ಲಿಕೆ: ಆರೋಪಿಗೆ ಜೈಲು, ದಂಡ

Published On :

ಉಡುಪಿ: ಉಡುಪಿ ಜಿಲ್ಲೆಯ ಶಾಲೆಯೊಂದರ ನಕಲಿ ವರ್ಗಾವಣೆ ಪತ್ರ ಮತ್ತು ಇಲ್ಲಿನ ವಿಳಾಸದಲ್ಲಿ ಪಡಿತರ ಚೀಟಿಯನ್ನು ಹೊಂದಿದ್ದು, ಅದೇ ವಿಳಾಸದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದ.ಕ. ಜಿಲ್ಲೆಯ ವ್ಯಕ್ತಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
 ಶಿಕ್ಷೆಗೊಳಗಾದವರು ಮಂಗಳೂರು ತಾಲೂಕು ಪಾವೂರು ಗ್ರಾಮದ ನಿವಾಸಿ ಸಯ್ಯದ್ ಯಾನೆ ಮಲ್ಲಾರು ಸಯ್ಯದ್ ಮುಸ್ತಾಫಾ. ಇವರು ಮಂಗಳೂರಿನ ಪಾವೂರು ಗ್ರಾಮದ ಮೂಲ ವಿಳಾಸದಲ್ಲಿ ಮೊದಲೇ ಒಂದು ಪಾಸ್‌ಪೋರ್ಟನ್ನು ಹೊಂದಿದ್ದಾರೆ. ಆದರೂ, ತಾನು ಉಡುಪಿ ತಾಲೂಕು ಶಿರ್ವ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಹಿಂಭಾಗದ ನೂರುಲ್ಲಾ ಜಮಲೀಯ ಮಸೀದಿಯ ಬಳಿಯ ನಿವಾಸಿ ಎಂದು ಸುಳ್ಳು ಹೇಳಿ, ಆ ವಿಳಾಸದಲ್ಲಿ ಇನ್ನೊಂದು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಮತ್ತು ಅದಕ್ಕಾಗಿ ಅದೇ ವಿಳಾಸದ ಪಡಿತರ ಚೀಟಿಯನ್ನು ಪಡೆದಿದ್ದ. ಅಲ್ಲದೇ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ಪಡೆದಿರುವುದಾಗಿ ನಕಲಿ ವರ್ಗಾವಣೆ ಪತ್ರವನ್ನು ಸೃಷ್ಟಿಸಿಕೊಂಡಿದ್ದ. ಪಾಸ್‌ಪೋರ್ಟ್ ಅರ್ಜಿ ಪರಿಶೀಲನೆ ವೇಳೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಶಿರ್ವ ಠಾಣೆಯಲ್ಲಿ ಕೇಸು ದಾಖಲಾಗಿದೆ.  ಪ್ರಕರಣ ತನಿಖೆ ನಡೆಸಿದ ಶಿರ್ವ ಠಾಣೆಯ ಎಸ್.ಐ. ಕೆ.ಆರ್. ನಾಯ್ಕ ಅವರು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನಂತರ ಉಡುಪಿ 3ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಿ, ನ್ಯಾಯಾಧೀಶೆ ಸುನೀತ ಅವರು ಮುಸ್ತಾಫ ಅವರಿಗೆ 6 ತಿಂಗಳ ಜೈಲು ಮತ್ತು ರು. 1 ಸಾವಿರ ದಂಡ ಹಾಗೂ ಪಾಸ್‌ಪೋರ್ಟ್ ಕಚೇರಿಗೆ ಸುಳ್ಳು ಮಾಹಿತಿ ನೀಡಿದಕ್ಕಾಗಿ ಪ್ರತ್ಯೇಕ 1 ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.