ಕೃಷ್ಣ ಮಠ ಪಂಕ್ತಿಭೇದ ಪ್ರಕರಣ ಭೂಗತದೊರೆ ಜೀವ ಬೆದರಿಕೆ
ಉಡುಪಿ: ಮಾಧ್ಯಮಗಳಲ್ಲಿ ಭಾರಿ ಚರ್ಚೆ, ಎಡಪಕ್ಷಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಕೃಷ್ಣಮಠದ ಪಂಕ್ತಿಭೇದ ಪ್ರಕರಣ ಭೂಗತ ಜಗತ್ತಿನ ಪ್ರವೇಶದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.
ಕೆಲವು ದಿನಗಳ ಹಿಂದೆ ಕೃಷ್ಣ ಮಠದಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಸಮುದಾಯದ ಮಹಿಳೆಯನ್ನು ಬಲವಂತವಾಗಿ ಎಬ್ಬಿಸಿದ್ದ ಮಠದ ಸಿಬ್ಬಂದಿಗೆ ಉಡುಪಿ ಮೂಲದ, ಪ್ರಸ್ತುತ ದುಬೈಯಲ್ಲಿರುವ ಭೂಗತ ದೊರೆ ಕೊರಗ ವಿಶ್ವನಾಥ ಶೆಟ್ಟಿ ಜೀವಬೆದರಿಕೆ ಒಡ್ಡಿದ್ದಾನೆ.
ಹಿನ್ನೆಲೆ: ಕೆಲ ಸಮಯದ ಹಿಂದೆ ತನ್ನ ಸಹೋದ್ಯೋಗಿಗಳೊಂದಿಗೆ ಕೃಷ್ಣ ಮಠದಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಸಮುದಾಯದ ಶಿಕ್ಷಕಿಯನ್ನು ಆಕೆ ಬ್ರಾಹ್ಮಣಳಲ್ಲ ಎಂಬ ಕಾರಣಕ್ಕೆ ಮಠದ ಸಿಬ್ಬಂದಿ ಬಲವಂತವಾಗಿ ಎಬ್ಬಿಸಿ ಹೊರಗೆ ಕಳುಹಿಸಿದ್ದರು ಎಂದು ದೂರಲಾಗಿತ್ತು. ನಂತರ ಈ ಘಟನೆ ಗಮನಕ್ಕೆ ಬಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥರು ವಿಷಾದ ವ್ಯಕ್ತಪಡಿಸಿದ್ದರು.
ಇದರ ನಂತರವೂ ಬಂಟರ ವಿವಿಧ ಸಂಘಟನೆಗಳು, ಇದು ಬಂಟ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಕೃಷ್ಣಮಠದ ಮಡೆಸ್ನಾನವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಎಡ ಪಕ್ಷಗಳು ಈ ಪಂಕ್ತಿಭೇದ ವಿಷಯ ಕೈಗೆತ್ತಿಕೊಂಡು ಉಡುಪಿ ಸೇರಿದಂತೆ ರಾಜ್ಯದಾದ್ಯಂತ 4 ದಿನಗಳ ಪ್ರತಿಭಟನೆ ನಡೆಸಿದ್ದವು.
ಈ ನಡುವೆ ಬುಧವಾರ ಸಂಜೆ 'ಕನ್ನಡಪ್ರಭ' ಕಚೇರಿಗೆ ಕರೆ ಮಾಡಿದ, ಭೂಗತ ಪಾತಕಿ ಕೊರಗ ವಿಶ್ವನಾಥ ಶೆಟ್ಟಿ, ಈ ಪ್ರಕರಣ ಬಂಟ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಆದ್ದರಿಂದ ವನಿತಾ ಅವರನ್ನು ಅವಮಾನ ಮಾಡಿದ ಮಠದ ಸಿಬ್ಬಂದಿ ಬಹಿರಂಗ ಕ್ಷಮೆ ಕೇಳಬೇಕು. 2 ದಿನಗಳ ಕಾಲಾವಕಾಶ ನೀಡುತ್ತೇನೆ, ಇಲ್ಲದಿದ್ದಲ್ಲಿ ಮುಗಿಸುತ್ತೇನೆ ಎಂದು ಹೇಳಿದ್ದಾನೆ.
ಕೊರಗ ವಿಶ್ವನಾಥ ಶೆಟ್ಟಿ ಪಂಕ್ತಿಭೇದಕ್ಕೆ ಕಾರಣವಾದ ಮಠದ ಸಿಬ್ಬಂದಿಗೂ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಇದುವರೆಗೆ ಈ ಕುರಿತು ಪೊಲೀಸ್ ದೂರು ದಾಖಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

