ಗ್ರಾಮೀಣ ಕ್ರಿಕೆಟ್ ಆಟಗಾರರಿಗೆ ವಿಫುಲ ಅವಕಾಶ: ಪದ್ಮಶ್ರೀ ಸಯ್ಯದ್ ಕಿರ್ಮಾನಿ
ಉಡುಪಿ: ಪ್ರತಿಭಾವಂತ ಹಾಗೂ ನಿಷ್ಠಾವಂತ ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ವಲಯ ಮಟ್ಟದ ಮಾತ್ರವಲ್ಲದೆ ರಾಷ್ಟ್ರ ಮಟ್ಟದ ತಂಡಗಳಲ್ಲಿ ಮಿಂಚಲು ವಿಫುಲ ಅವಕಾಶಗಳಿವೆ. ಆದರೆ ಉತ್ತಮ ವ್ಯಕ್ತಿತ್ವ, ಕಠಿಣ ಪರಿಶ್ರಮದ ಜೊತೆಗೆ ಶಿಸ್ತುಬದ್ಧ ಜೀವನ ಮೈಗೂಡಿಸಿಕೊಳ್ಳಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.
ಕಟಪಾಡಿಯ ಕೆಆರ್ಎಸ್ ಕ್ರಿಕೆಟ್ ಅಕಾಡೆಮಿಗೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಧುನಿಕ ಕ್ರಿಕೆಟ್ ಬಹಳಷ್ಟು ಮುಂದುವರಿದಿದ್ದು, ಐಪಿಎಲ್, ಕೆಪಿಎಲ್ ಪಂದ್ಯಾವಳಿಗಳಿಂದಾಗಿ ನೂರಾರು ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಕಲ್ಪಿಸಿದಂತಾಗಿದೆ. ಕೆಆರ್ಎಸ್ ಕ್ರಿಕೆಟ್ ಅಕಾಡೆಮಿಯ ಮಕ್ಕಳು ಕೂಡ ಒಂದಲ್ಲ ಒಂದು ದಿನ ಭಾರತ ತಂಡವನ್ನು ಪ್ರತಿನಿಧಿಸುವುದು ಖಂಡಿತ ಎಂದು ಭವಿಷ್ಯ ನುಡಿದರು.
ಅಕಾಡೆಮಿಯ ಗೌರವ ಅಧ್ಯಕ್ಷ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್ ಮಾತನಾಡಿ, ಸಯ್ಯದ್ ಕಿರ್ಮಾನಿ ಕೆಆರ್ಎಸ್ ಕ್ರಿಕೆಟ್ ಅಕಾಡೆಮಿಯ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಕಿರ್ಮಾನಿ ಅವರಿಂದ ಗ್ರಾಮೀಣ ಮಕ್ಕಳು ತರಬೇತಿ ಪಡೆಯುತ್ತಿರುವುದು ಭಾಗ್ಯ ಎಂದರು.
ಕೆಆರ್ಎಸ್ ಅಕಾಡೆಮಿ ಮುಖ್ಯಸ್ಥ ಉದಯಕುಮಾರ್ ವೈ. ಮಾತನಾಡಿ, ಮೂರು ದಿನಗಳ ಕಾಲ ಬೇಸಿಗೆ ಕ್ರಿಕೆಟ್ ಶಿಬಿರದ ಶಿಬಿರಾರ್ಥಿಗಳಿಗೆ ಕಿರ್ಮಾನಿ ವಿಶೇಷ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಪ್ರಸ್ತುತ ಸುಮಾರು 60 ಮಂದಿ ಯುವ ಕ್ರಿಕೆಟಿಗರಿಗೆ ಬ್ಯಾಟಿಂಗ್, ಬೌಲಿಂಗ್, ಕೀಪಿಂಗ್ ಸೇರಿದಂತೆ ಪೂರ್ಣ ಪ್ರಮಾಣದ ತರಬೇತಿಯನ್ನು ವಿವಿಧ ಹಂತಗಳಲ್ಲಿ ನೀಡಲಿದ್ದಾರೆ. ಮೇ 20ರಂದು ಸಂಜೆ 4ಕ್ಕೆ ಕಟಪಾಡಿ ಎಸ್ವಿಎಸ್ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಕೆಆರ್ಎಸ್ ಕ್ರಿಕೆಟ್ ಅಕಾಡೆಮಿಯ 6ನೇ ವಾರ್ಷಿಕೋತ್ಸವ ಉದ್ಘಾಟಿಸಲಿದ್ದಾರೆ ಎಂದರು. ಜಿಲ್ಲಾ ಕ್ರಿಕೆಟ್ ಅಕಾಡೆಮಿ ಪದಾಧಿಕಾರಿ ವಾಸು ಸೇರಿಗಾರ್, ವೈ. ಸುಧೀರ್ ಕುಮಾರ್, ಡಾ. ಗಣೇಶ್ ಕುಮಾರ್, ಸುಕೂರ್ ಸಾಹೇಬ್, ಕೃಷ್ಣ ಸನಿಲ್, ಜಗದೀಶ್ ಕಾಮತ್, ಕಿರಣ್ ಲೂಯಿಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

