ಮೆಸ್ಸಿ ಮುಂದೆ ಸ್ವಿಸ್ ಸ್ವಿಚ್ ಆಫ್

ಸೌ ಪೌಲೊ: ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಅರ್ಜೆಂಟೀನಾ ಆಟಗಾರರು ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡುವ ಮೂಲಕ ಎದುರಾಳಿ ಸ್ವಿಜರ್ಲೆಂಡ್ ತಂಡದ ಸವಾಲನ್ನು ಹೊಡೆದುರುಳಿಸಿ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಎರೆನಾ ಕೋರಿಂಥಿಯನ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಏಕೈಕ ಗೋಲಿನಿಂದ ಸ್ವಿಜರ್ಲೆಂಡ್ ತಂಡವನ್ನು ಸದೆಬಡಿಯಿತು. ಹೆಚ್ಚುವರಿ ಸಮಯದ ಆಟದಲ್ಲಿ ನಾಯಕ ಲಯೋನೆಲ್ ಮೆಸ್ಸಿ ನೀಡಿದ ಪಾಸ್ನಲ್ಲಿ ಸಂಪರ್ಕ ಆಟಗಾರ ಆ್ಯಂಗೆಲೊ ಡಿ ಮಾರಿಯಾ (ಪಂದ್ಯದ 118ನೇ ನಿಮಿಷ) ಆಕರ್ಷಕ ಗೋಲು ಬಾರಿಸಿ ಅರ್ಜೆಂಟೀನಾ ತಂಡದ ಗೆಲವಿನ ರೂವಾರಿಯಾದರು.
ಪಂದ್ಯದಲ್ಲಿ ಸ್ವಿಜರ್ಲೆಂಡ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಅರ್ಜೆಂಟೀನಾವನ್ನು ಸಂಕಷ್ಟಕ್ಕೆ ಗುರಿಪಡಿಸಿದ್ದಲ್ಲದೇ ಮೇಲುಗೈ ಸಾಧಿಸುವ ಅವಕಾಶವನ್ನೂ ಹೊಂದಿದ್ದರು. ಆದರೆ, ದಡದ ಅಂಚಿನಲ್ಲಿ ಅದೃಷ್ಟ ಸಾಥ್ ನೀಡದೇ ಇದ್ದ ಪರಿಣಾಮ ಅಂತಿಮವಾಗಿ ಸೋಲು ಕಾಣದೇ ವಿಧಿ ಇರಲಿಲ್ಲ. ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮೊದಲ 90 ನಿಮಿಷಗಳ ಆಟದಲ್ಲಿ ಅರ್ಜೆಂಟೀನಾ ಆಟಗಾರರು ಪ್ರಭುತ್ವ ಸ್ಥಾಪಿಸಿದ್ದರೂ ಸಹ ಗೋಲಿನ ಖಾತೆ ತೆರೆಯಲಾಗಲಿಲ್ಲ. ಮುಖ್ಯವಾಗಿ ಸ್ವಿಜರ್ಲೆಂಡ್ ಪ್ರಬಲ ರಕ್ಷಣಾ ಗೋಡೆ ನಿರ್ಮಿಸುವ ಮೂಲಕ ತನ್ನ ಕೋಟೆಯೊಳಗೆ ಅರ್ಜೆಂಟೀನಾ ಆಟಗಾರರು ನುಗ್ಗಿ ಬರಲು ಬಿಡಲಿಲ್ಲ. ಅದರಲ್ಲೂ ಗೋಲ್ಕೀಪರ್ ಡೀಗೊ ಬೆನಾಗ್ಲಿಯೊ ಅವರು ಅತ್ಯುತ್ತಮ ತಡೆಗೋಡೆ ನಿರ್ಮಿಸುವ ಮೂಲಕ ಅರ್ಜೆಂಟೀನಾದ ಸುಮಾರು 6 ಅತ್ಯುತ್ತಮ ಪ್ರಯತ್ನಗಳನ್ನು ವ್ಯರ್ಥಗೊಳಿಸಿದರು.
ನಿಗದಿತ ಸಮಯದಲ್ಲಿ ಅರ್ಜೆಂಟೀನಾ ಪಂದ್ಯದ ಪ್ರತಿಶತ 61ರಷ್ಟು ಹಿಡಿತ ಸಾಧಿಸಿತ್ತು. ಆದರೂ ಗುರಿ ಸೇರುವ ಹಾದಿಯಲ್ಲಿ ಅವರು ನಿರಾಸೆ ಕಾಣುವಂತಾಯಿತು.
ಎಫ್ ಗುಂಪಿನಲ್ಲಿ ಆಡಿದ ಮೂರೂ ಲೀಗ್ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಅಗ್ರಸ್ಥಾನಿ ತಂಡವಾಗಿ ಅರ್ಜೆಂಟೀನಾ ನಾಕೌಟ್ ತಲುಪಿತ್ತು. ಇನ್ನು ಸ್ವಿಜರ್ಲೆಂಡ್ ಆಟಗಾರರು 'ಇ' ಗುಂಪಿನಲ್ಲಿ ಎರಡು ಗೆಲವು ಮತ್ತು ಒಂದು ಸೋಲಿನ ಫಲಿತಾಂಶ ಪಡೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ಈ ಹಂತ ಪ್ರವೇಶಿಸಿದ್ದರು.
ಗೋಲು ವಿವರ
ಅರ್ಜೆಂಟೀನಾ - 1
ಸ್ವಿಜರ್ಲೆಂಡ್- 0
ಆ್ಯಂಗೆಲ್ ಡಿ ಮಾರಿಯಾ-118ನೇ ನಿಮಿಷ
(ಹೆಚ್ಚುವರಿ ಸಮಯದಲ್ಲಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


