ಫಿಫಾ ವಿಶ್ವಕಪ್ 2014

ಜರ್ಮನಿಗೆ ಫ್ರಾನ್ಸ್ ಅಗ್ನಿ ಪರೀಕ್ಷೆ

ಜರ್ಮನಿಗೆ ಫ್ರಾನ್ಸ್ ಅಗ್ನಿ ಪರೀಕ್ಷೆ
Published On :

ರಿಯೊ ಡಿ ಜೆನೈರೊ: ಪ್ರಸಕ್ತ ಫಿಫಾ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಜರ್ಮನಿ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತನ್ನ ಹಳೇಯ ಎದುರಾಳಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಯೂರೋಪ್ನ ಎರಡು ಪ್ರಬಲ ತಂಡಗಳು ಸೆಮಿಫೈನಲ್ ಸುತ್ತಿನಲ್ಲಿ ಸ್ಥಾನ ಪಡೆಯಲು ಶುಕ್ರವಾರ ರಾತ್ರಿ ಮಾರಕಾನ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿರುವುದು ಅಭಿಮಾನಿಗಳ ಕುತೂಹಲ ಗರಿಗೆದರುವಂತೆ ಮಾಡಿದೆ.
ಜರ್ಮನಿ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದಿದ್ದರೂ, ಎಂಟರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ತಂಡ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ತಂಡದ ಕೋಚ್ ಜೊಚಿಮ್ ಲ್ಯೂವ್ ಮೇಲೆ ಒತ್ತಡ ಹೆಚ್ಚಾಗಿದೆ. ಈ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡ ಬರುವ ಮಂಗಳವಾರ ನಡೆಯಲಿರುವ ಉಪಾಂತ್ಯದ ಪಂದ್ಯದಲ್ಲಿ ಬ್ರೆಜಿಲ್ ಹಾಗೂ ಕೊಲಂಬಿಯಾ ನಡುವಣ ಕ್ವಾರ್ಟರ್ಫೈನಲ್ ಪಂದ್ಯದ ವಿಜೇತ ತಂಡದೊಂದಿಗೆ ಪ್ರಶಸ್ತಿ ಸುತ್ತಿಗಾಗಿ ಕಾದಾಟ ನಡೆಸಲಿದೆ. ಜರ್ಮನಿ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಗೆಲವು ಹಾಗೂ 1ರಲ್ಲಿ ಡ್ರಾ ಕಾಣುವ ಮೂಲಕ ಅಜೇಯ ವಾಗಿ ಉಳಿದಿದೆಯಾದರೂ, ತಂಡದಲ್ಲಿ ಈ ಹಿಂದಿನ ಲಯ ಕಾಣುತ್ತಿಲ್ಲ.       ಇನ್ನು ಫ್ರಾನ್ಸ್ ತಂಡ ಗುಂಪು ಹಂತದಲ್ಲಿ ಈಕ್ವೆಡಾರ್ ವಿರುದ್ಧ 0-0 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದ್ದು ಹೊರತುಪಡಿಸಿದರೆ, ಉಳಿದ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನದೊಂದಿಗೆ ಗೆಲವಿನ ಕೇಕೆ ಹಾಕುತ್ತಾ ಸಾಗಿದೆ. ಹಾಗಾಗಿ ಇದುವರೆಗೂ ಸೋಲರಿಯದ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಒಂದು ತಂಡ ಮಣಿಯಲೇಬೇಕಾಗಿದೆ. ಆ ತಂಡ ಯಾವುದು ಎಂಬ ಕುತೂಹಲ ಅಭಿಮಾನಿಗಳನ್ನು ಕಾಡತೊಡಗಿದೆ. ಜರ್ಮನಿ ತಂಡಕ್ಕೆ ಥಾಮಸ್ ಮುಲ್ಲರ್ ಟೂರ್ನಿಯುದ್ದಕ್ಕೂ ಆಧಾರವಾಗಿ ತಂಡವನ್ನು ಗೆಲವಿನ ಹಾದಿಯಲ್ಲಿ ಕರೆದುಕೊಂಡು ಬಂದಿದ್ದಾರೆ. ಟೂರ್ನಿಯಲ್ಲಿ 4 ಗೋಲು ದಾಖಲಿಸಿರುವ ಮುಲ್ಲರ್  ಗೋಲ್ಡನ್ ಬೂಟ್ ಪ್ರಶಸ್ತಿಪಡೆಯುವ ರೇಸ್ನಲ್ಲಿದ್ದಾರೆ. ಉಳಿದಂತೆ ಮಾರಿಯೊ ಗೊಟ್ಜೆ, ಮಿರೊಸ್ಲವ್ ಕ್ಲೊಸ್, ಆ್ಯಂಡ್ರೆ ಶೂರ್ಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇನ್ನು ಫ್ರಾನ್ಸ್ ತಂಡದ ಪರ ಒಲಿವರ್ ಗಿರೌಡ್, ಬ್ಲೈಸೆ ಮತೌಡಿ, ಪಾಲ್ ಪೊಗ್ಬಾ, ಮೌಸ್ಸಾ ಸಿಸ್ಸೊಕೊ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಒಟ್ಟಿನಲ್ಲಿ ಉಭಯ ತಂಡಗಳು ಸಮಬಲ ಹೊಂದಿದ್ದು, ಪಂದ್ಯ ಹೆಚ್ಚು ರೋಚಕವಾಗಿರುವ ನಿರೀಕ್ಷೆ ಇದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.