ಕೋಸ್ಟ ಮುಂದೆ ಉರುಗ್ವೆ ರೋಸ್ಟ್

ಫೋರ್ಟಾಲೆಜಾ: ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಹ ಪಂದ್ಯ ಸಾಗಿದಂತೆ ಅತ್ಯುತ್ತಮ ಸಂಯೋಜಿತ ಆಟಕ್ಕೆ ಮರಳಿ ಯಶಸ್ಸಿನ ಹಾದಿ ಕಂಡುಕೊಂಡ ಕೋಸ್ಟ ರಿಕಾ ತಂಡದ ಆಟಗಾರರು ವಿಶ್ವಕಪ್ನ ತಮ್ಮ ಮೊದಲ ಪಂದ್ಯದಲ್ಲೇ ಅಚ್ಚರಿ ಫಲಿತಾಂಶ ನೀಡಿ ಭರ್ಜರಿ ಆರಂಭ ಮಾಡಿದ್ದಾರೆ.
ಎಸ್ಟಾಡಿಯೊ ಕಾಸ್ಟೆಲೊ ಅಂಗಣದಲ್ಲಿ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಕೋಸ್ಟ ರಿಕಾ ತಂಡ 3-1 ಗೋಲುಗಳಿಂದ ಪ್ರಬಲ ಉರುಗ್ವೆ ತಂಡವನ್ನು ಸೋಲಿಸಿತು.
1930ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಆವೃತ್ತಿಯ ಹಾಗೂ 1950ರಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಮುಕುಟ ಧರಿಸಿದ್ದ ಉರುಗ್ವೆ ಆಟಗಾರರು ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೋಪಾ ಅಮೆರಿಕಾ ಚಾಂಪಿಯನ್ಸ್ ಉರುಗ್ವೆ ಮೇಲೆ ಅಪಾರ ನಿರೀಕ್ಷೆ ಹೊಂದಲಾಗಿತ್ತು. ಆದರೆ, ತಂಡದ ಪ್ರಮುಖ ಶಕ್ತಿ, ಮುನ್ಪಡೆ ಆಟಗಾರ ಲೂಯಿಸ್ ಸ್ಯೂರೆಜ್ ಅವರ ಅನುಪಸ್ಥಿತಿ ಉರುಗ್ವೆ ಮೇಲೆ ದೊಡ್ಡ ಪರಿಣಾಮ ಬೀರಿತು. ಮಂಡಿ ನೋವಿನಿಂದ ಬಳಲುತ್ತಿರುವ ಸ್ಯೂರೆಜ್ ಹೋರಾಟಕ್ಕಿಳಿಯಲಾಗದೇ ಬೆಂಚ್ ಕಾಯಿಸುವಂತಾಯಿತು. ಪಂದ್ಯ ಆರಂಭವಾಗಿ 24 ನಿಮಿಷ ಕಳೆಯುವಷ್ಟರಲ್ಲಿ ಎಡಿನ್ಸನ್ ಕವಾನಿ ಅವರು ದಕ್ಷಿಣ ಅಮೆರಿಕನ್ ತಂಡಕ್ಕೆ 1-0ಯಿಂದ ಮಹತ್ವದ ಮುನ್ನಡೆ ತಂದುಕೊಟ್ಟರು. ಗೋಲು ಪಟ್ಟಿಯ ಸಮೀಪ ಉರುಗ್ವೆ ತಂಡದ ನಾಯಕ ಡೀಗೊ ಲುಗಾನೊ ಅವರನ್ನು ಕೋಸ್ಟ ರಿಕಾ ತಂಡದ ರಕ್ಷಣಾ ಆಟಗಾರ ಜೂನಿಯರ್ ಡಿಯಾಜ್ ನೆಲಕ್ಕೆ ಬೀಳಿಸಿದರು. ಆಗ ಜರ್ಮನಿಯ ರೆಫರಿ ಫೆಲಿಕ್ಸ್ ಬ್ರೈಚ್ ಅವರು ಉರುಗ್ವೆ ತಂಡಕ್ಕೆ ಪೆನಾಲ್ಟಿ ಅವಕಾಶ ನೀಡಿದರು. ಈ ಅವಕಾಶ ತೆಗೆದುಕೊಂಡ ಕವಾನಿ ಗೋಲು ಗಳಿಸುವಲ್ಲಿ ಹಿಂದೆ ಬೀಳಲಿಲ್ಲ.
ವಿರಾಮದ ವೇಳೆಗೆ 0-1 ಗೋಲಿನಿಂದ ಹಿಂದಿದ್ದ ಕೋಸ್ಟ ರಿಕಾ ಉತ್ತರಾರ್ಧದಲ್ಲಿ ನೀಡಿದ ಹೋರಾಟದಿಂದ ುರುಗ್ವೆ ತಂಡ ಬೆಚ್ಚಿಬಿದ್ದಿತು. ನಿರಂತರ ಮೂರು ದಾಖಲಿಸಿ ಎದುರಾಳಿ ತಂಡ ಅಚ್ಚರಿಯಿಂದ ನೋಡುತ್ತ ನಿಲ್ಲುವಂತಾಯಿತು. 2002ರಲ್ಲಿ ಗುಂಪು ಹಂತದ ಸೆಣಸಿನಲ್ಲಿ ಚೀನಾ ತಂಡವನ್ನು ಸೋಲಿಸಿದ ನಂತರ ಕೋಸ್ಟ ರಿಕಾ ತಂಡಕ್ಕೆ ಇದು ವಿಶ್ವಕಪ್ನಲ್ಲಿ ದೊರೆತ ಮೊದಲ ಗೆಲುವಾಗಿದೆ.
ಈ ಮಧ್ಯೆ ಪಂದ್ಯದ ಹೆಚ್ಚುವರಿ ಸಮಯದ ಆಟದಲ್ಲಿ (903ನೇ ನಿಮಿಷ) ಉರುಗ್ವೆನ ಮ್ಯಾಕ್ಸಿ ಪೆರೇರಾಗೆ ಕೆಂಪು ಕಾರ್ಡ್ ನೀಡಿ ಹೊರಗೆ ಕಳುಹಿಸಲಾಯಿತು. ಕೋಸ್ಟ ರಿಕಾ ತಂಡದ ಆಟಗಾರ ಜೋ ಕ್ಯಾಂಬೆಲ್ ಚೆಂಡನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಮ್ಯಾಕ್ಸಿ, ಬೇಕಂತಲೇ ಅವರಿಗೆ ಅಡ್ಡಲಾಗಿ ಕಾಲಿಗೆ ಒದ್ದು ಬೀಳಿಸಿದ್ದರಿಂದ ಕೆಂಪು ಕಾರ್ಡ್ ಪಡೆದು ಮೈದಾನ ತೊರೆಯಬೇಕಾಯಿತು.
ಇದು ಈ ವಿಶ್ವಕಪ್ನಲ್ಲಿ ಆಟಗಾರ ಪಡೆದ ಮೊದಲ ಕೆಂಪು ಕಾರ್ಡ್ ಪ್ರಕರಣವಾಗಿದೆ. ವಿಶ್ವಕಪ್ ಇತಿಹಾಸದಲ್ಲಿ ಇದು ಒಟ್ಟಾರೆ 160ನೇ ಕೆಂಪು ಕಾರ್ಡ್ ಪ್ರಕರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


