ಗೆಲ್ಲೋರು ನಾಕೌಟ್‌ಗೆ, ಸೋಲೋರು ಮನೆಗೆ
ನಟಾಲ್: ನಾಲ್ಕು ಬಾರಿಯ ಚಾಂಪಿಯನ್ ಇಟಲಿ ಹಾಗೂ ಎರಡು ಬಾರಿ ಪ್ರಶಸ್ತಿ ಸಂಪಾದಿಸಿರುವ ಉರುಗ್ವೆ ತಂಡಗಳ ಆಟಗಾರ ಮುಂದೆ ಈಗ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಇಬ್ಬರ ಪಾಲಿಗೂ ಇದೊಂದು ಅಗ್ನಿಪರೀಕ್ಷೆಯಾಗಿದ್ದು, ಯಾರು ಉತ್ತೀರ್ಣರಾಗಬಲ್ಲರು ಎಂದು ಹೇಳುವುದು ಸದ್ಯಕ್ಕೆ ಕಷ್ಟ.
ಎಸ್ಟಾಡಿಯೊ ಡಾಸ್ ಡುನಾಸ್‌ನಲ್ಲಿ ಮಂಗಳವಾರ ನಡೆಯಲಿರುವ ಡಿ ಗುಂಪಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಇಟಲಿ ಮತ್ತು ಉರುಗ್ವೆ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದವರು ನಾಕೌಟ್ ಸುತ್ತು ಪ್ರವೇಶಿಸಲಿದ್ದರೆ, ಸೋತವರು ವಿಶ್ವಕಪ್ ಅಖಾಡದಿಂದ ಹೊರಬೀಳಬೇಕಾಗುತ್ತದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ, ಉತ್ತಮ ಗೋಲಿನ ಸರಾಸರಿ ಆಧಾರದ ಮೇಲೆ ಈ ಗುಂಪಿನಿಂದ ಎರಡನೇ ತಂಡವಾಗಿ ಇಟಲಿ ನಾಕೌಟ್ ಪ್ರವೇಶಿಸಲಿದೆ. ಹಾಗಾಗಿ, ಇಟಲಿ ಪಾಲಿಗೆ ಹೆಚ್ಚಿನ ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಬೇಕಾದ ಜವಾಬ್ದಾರಿ ಆ ತಂಡದ ಮೇಲಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ ಸಹ ಇಟಲಿ ತಂಡ ಮೊದಲ ಸುತ್ತಿನ ಸೆಣಸಿನಿಂದಲೇ ಪಂದ್ಯಾವಳಿಯಿಂದ ಹೊರನಡೆದಿತ್ತು. ಈಗ ಸತತ ಎರಡನೇ ಬಾರಿಗೆ ಆ ಮುಖಭಂಗ ತಪ್ಪಿಸಿಕೊಳ್ಳಲು ಕೋಚ್ ಸೆಸಾರ್ ಪ್ರಾಂಡೆಲ್ಲಿ ಗರಡಿಯಲ್ಲಿ ಪಳಗಿರುವ ಇಟಲಿ ಆಟಗಾರರಿಗೆ ಜಯ ಅನಿವಾರ್ಯವಾಗಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿ ಶುಭಾರಂಭ ಮಾಡಿದ್ದ ಇಟಲಿ, ಎರಡನೇ ಪಂದ್ಯದಲ್ಲಿ ಕೋಸ್ಟ ರಿಕಾ ಕೈಯಲ್ಲಿ ಏಕೈಕ ಗೋಲಿನಿಂದ ಸೋಲಿನ ಕಹಿ ಉಂಡಿತ್ತು.
ಮತ್ತೊಂದೆಡೆ ಉರುಗ್ವೆ ಆಟಗಾರರ ಸ್ಥಿತಿ ಇಟಲಿಗಿಂತಲೂ ಶೋಚನೀಯವಾಗಿದೆ. ಗೆಲುವೊಂದೇ ಅದಕ್ಕೆ ಮುಂದಿನ ದಾರಿ ತೋರಿಸಬಲ್ಲದು. ಹಾಗಾಗಿ, ಕೋಚ್ ಆಸ್ಕರ್ ಟಾಬರೆಜ್ ತಮ್ಮ ತಂಡದ ಆಟಗಾರರಿಗೆ ಹೆಚ್ಚು ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾರೆ.
ಗುಂಪಿನ ಪಂದ್ಯದಲ್ಲಿ ಕೋಸ್ಟ ರಿಕಾ ಎದುರು 1-3 ಗೋಲುಗಳಿಂದ ದಯನೀಯ ಸೋಲನುಭವಿಸಿದ್ದ ಉರುಗ್ವೆ ತಂಡ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 2-1 ಗೋಲುಗಳಿಂದ ಗೆಲವಿನ ಕೇಕೆ ಹಾಕುವ ಮೂಲಕ ನಾಕೌಟ್ ತಲುಪುವ ಆಸೆ ಹೆಚ್ಚಿಸಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

