ಫ್ರಾನ್ಸ್ ಎದುರು ಈಕ್ವೆಡಾರ್ ಪ್ರಿನ್ಸ್

ರಿಯೋ ಡಿ ಜನೈರೋ: ಕೇವಲ ಹತ್ತೇ ಆಟಗಾರರೊಂದಿಗೆ ಆಡಿದರೂ, ಬಲಿಷ್ಠ ಫ್ರಾನ್ಸ್ ತಂಡದ ವಿರುದ್ಧ ರಾಜಾರೋಷ ಹೋರಾಟ ನಡೆಸಿದ ಈಕ್ವೆಡಾರ್ ತಂಡ ಗುರುವಾರ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಡ್ರಾ ಸಾಧಿಸಿದರೂ, ಯೂರೋಪಿಯನ್ ಫೇವರಿಟ್ ಫ್ರಾನ್ಸ್ 'ಇ' ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ನಾಕೌಟ್ ತಲುಪಿತು.
ಈಗ ಅದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ದ್ವಿತಿಯಾರ್ಧ ಪಂದ್ಯ ಆರಂಭವಾದ ನಂತರ ನಾಯಕ ಆಂಟೋನಿಯೋ ವಾಲೆನ್ಸಿಯಾ ಅವರು ಅಂಗಣದಿಂದ ಹೊರಗಳಿದರು. ಆಗ ಕೇವಲ 10 ಆಟಗಾರರೊಂದಿಗೆ ಆಡಿದ ಈಕ್ವೆಡಾರ್ ಅದೃಷ್ಟ, ಸ್ವಯಂ ನಿರ್ಧಾರ ಹಾಗೂ ಅಲೆಗ್ಜಾಂಡರ್ ಡೋನಿಂಗುಜ್ ಅವರ ಪ್ರತಿಭಾನ್ವಿತ ಗೋಲ್‌ಕೀಪಿಂಗ್ ನೆರವಿನೊಂದಿಗೆ ಬಲಿಷ್ಠ ಫ್ರಾನ್ಸ್ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಫ್ರಾನ್ಸ್ ಕೋಚ್ ಡಿಡೀಯರ್ ಡೆಶಾಂಪ್ಸ್ ಅವರು ಬೇಸರಗೊಂಡರು. ಆದರೆ, ಅದು ಏಳು ಅಂಕಗಳೊಂದಿಗೆ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಲ್ಲದೆ, ಸೋಮವಾರ ನಡೆಯಲಿರುವ ದ್ವಿತೀಯ ಸುತ್ತಿನಲ್ಲಿ ತನಗಿಂತ ದುರ್ಬಲ ತಂಡ ಎದುರಾಗಲಿದ್ದು, ಹೋರಾಟದ ಭಾರವನ್ನು ಕಡಿಮೆ ಮಾಡಿಕೊಂಡಿದೆ.
ಇದೇ ಗುಂಪಿನಲ್ಲಿ ಹೊಂಡುರಾಸ್ ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಸ್ವೀಜರ್ಲೆಂಡ್ ತಂಡ, ನಾಕೌಟ್ ಹಂತದಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ. ಆದರೆ, ಈಕ್ವೆಡಾರ್ ತಂಡ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಹೋರಾಟ ಮುಕ್ತಾಯಗೊಳಿಸಿದ ಮೊದಲ ದಕ್ಷಿಣ ಅಮೆರಿಕ ತಂಡ ಎನಿಸಿದೆ. ಈ ಪಂದ್ಯದಲ್ಲಿ ಆರು ಬದಲಾವಣೆಗಳನ್ನು ಮಾಡಿದ್ದ ಫ್ರಾನ್ಸ್‌ನ ಡಿಶಾಂಪ್ಸ್ ಅವರು, ನೈಜೀರಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಫಿಟ್ ಇರುವ ಆಟಗಾರರನ್ನು ಮರಳಿ ಕಣಕ್ಕಿಳಿಸಲಿದ್ದಾರೆ. ಹೋಂಡುರಾಸ್ ಮತ್ತು ಸ್ವಿಜರ್ಲೆಂಡ್ ವಿರುದ್ಧ ಫ್ರಾನ್ಸ್ ಗೆದ್ದಾಗ 3 ಗೋಲುಗಳನ್ನು ಗಳಿಸಿದ್ದ ಕರೀಮ್ ಬೆಂಜೆಮಾ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಆದರೆ, ನಿಷೇಧಕ್ಕೊಳಗಾಗಿರುವ ಮಥೀವು ವಲ್ಬುನಾ ಹಾಗೂ ಯೋಹಾನ ಕಾಬೇ ಅವರ ಕ್ರಿಯಾಶೀಲತೆಯಿಂದ ಫ್ರಾನ್ಸ್ ವಂಚಿತವಾಗಿದೆ. ಮೊದಲಾರ್ಧ ಪಂದ್ಯದಲ್ಲಿ ಫ್ರಾನ್ಸ್ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೆ, ಸ್ಫೂರ್ತಿಯ ಪ್ರದರ್ಶನ ನೀಡಿದ ಈಕ್ವೆಡಾರ್‌ನ ಅಲೆಗ್ಜಾಂಡರ್ ಡೋಮಿಂಜ್ ಅವರು ಫ್ರಾನ್ಸ್‌ಗೆ ಗೋಲು ದಾಖಲಿಸುವ ಯಾವುದೇ ಅವಕಾಶವನ್ನು ನೀಡಲಿಲ್ಲ. ಫ್ರಾನ್ಸ್‌ನ ಮೌಸ್ಸಾ ಸಿಸ್ಸೋಕೊ, ಪೌಲ್ ಪೊಗ್ಬಾ ಅವರ ಗೋಲು ದಾಖಲಿಸಲು ಯತ್ನಿಸಿದಾಗ ತುಂಬಾ ಜಾಗರೂಕತೆಯಿಂದ ಅದನ್ನು ತಡೆಯುವಲ್ಲಿ ಯಶಸ್ವಿಯಾದ ಈಕ್ವೆಡಾರ್ ಗೋಲ್ ಕೀಪರ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲು ಪ್ರಮುಖ ಪಾತ್ರ ನಿರ್ವಹಿಸಿದರು. ದ್ವಿತೀಯಾರ್ಧದ ಆರಂಭದಲ್ಲಿ ಈಕ್ವೆಡಾರ್ ಉತ್ತಮ ಹೋರಾಟ ಆರಂಭಿಸಿತ್ತು. ಎನ್ನೆರ್ ವೆಲೆನ್ಸಿಯಾ ಅವರು ಗೋಲು ದಾಖಲಿಸಲು ಅದ್ಭುತ ಪ್ರಯತ್ನ ಮಾಡಿದ್ದರು. ಅದರೆ, ಅದನ್ನು ಫ್ರಾನ್ಸ್‌ನ ಹುಗೊ ಲಾರಿಸ್ ಅವರು ತಡೆಗಟ್ಟುವಲ್ಲಿ ಯಶಸ್ವಿಯಾದರು. ಬೆಂಜೆಮಾ ಮತ್ತು ಪೌಲ್ ಬೊಗ್ಬಾ ಅವರು ತಮ್ಮ ಎಲ್ಲ ಅನುಭವವನ್ನು ಪಂದ್ಯದಲ್ಲಿ ಧಾರೆ ಎರೆದರೂ ಫ್ರಾನ್ಸ್ ತಂಡಕ್ಕೆ ಒಂದು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಇದರೊಂದಿಗೆ ಈಕ್ವೆಡಾರ್ ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ 'ಇ' ಗುಂಪಿನಲ್ಲಿ ಮೂರನೇ ಸ್ಥಾನ ಪಡೆದು ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಆದರೆ, ಈ ಗುಂಪಿನಲ್ಲಿ ಆಡಿದ ಇನ್ನೊಂದು ತಂಡ ಹೋಂಡುರಾಸ್, ಯಾವುದೇ ಪಂದ್ಯವನ್ನೂ ಗೆಲ್ಲದೆ ಪಂದ್ಯಾವಳಿಯಿಂದ ತವರಿಗೆ ನಿರ್ಗಮಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


