ಮಹಿಳೆಯರೇ.. ಫೇಸ್ ಬುಕ್ ನಲ್ಲಿ ತೆಳ್ಳಗಿರೋರ ಫೊಟೊ ನೋಡ್ತಾ ಇದ್ರೆ ಸಮಸ್ಯೆ ಗ್ಯಾರಂಟಿ..!

ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೆಳ್ಳಗಿರೋರ ಫೊಟೋಗಳನ್ನು ನೋಡ್ತಾ ಇದ್ರೆ ದೈಹಿಕ ಖಾಯಿಲೆಗಳು ಬರುತ್ತವೆ..
ಫೇಸ್ ಬುಕ್
ಫೇಸ್ ಬುಕ್

ಹೌದು...ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತೆಳ್ಳಗಿರೋರ ಫೊಟೋಗಳನ್ನು ನೋಡ್ತಾ ಇದ್ರೆ ದೈಹಿಕ ಖಾಯಿಲೆಗಳು ಬರುತ್ತವೆ ಎಂದು ಅಧ್ಯಯನವೊಂದು ಹೇಳಿದೆ.

ಪ್ರಮುಖವಾಗಿ ಮಹಿಳೆಯರು ಮತ್ತು ಯುವತಿಯರು ಈ ಬಗ್ಗೆ ಹೆಚ್ಚಿನ ಜಾಗೃತಿಯಿಂದ ಇರಬೇಕಾಗಿದ್ದು, ಫೇಸ್ ಬುಕ್, ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ನಂತಹ ಸಾಮಾಜಿಕ ಜಾಲಣತಾಣಗಳಲ್ಲಿ ತೆಳ್ಳಗಿನ ಮಹಿಳೆ ಅಥವಾ ಯುವತಿಯರನ್ನು ಕಂಡು ಪ್ರೇರಿತರಾಗುವ ಬಹುತೇಕ ಮಹಿಳೆಯರಲ್ಲಿ ದೈಹಿಕ ಅಸಮತೋಲನ ಮತ್ತು ಆಹಾರ ಸಂಬಂಧಿ ಖಾಯಿಲೆಗಳು ಕಂಡುಬಂದಿವೆ.

ತೆಳ್ಳಗಿರುವ ಮಹಿಳೆ ಅಥವಾ ಯುವತಿಯ ಫೋಟೋಗಳನ್ನು ನೋಡುತ್ತಲೇ ತಾವೂ ಕೂಡ ಹೀಗೇ ಬದಲಾಗಬೇಕು ಎಂದು ಮಹಿಳೆಯರು ಮತ್ತು ಯುವತಿಯರು ಯೋಚಿಸುವುದು ಹೆಚ್ಚು. ಹೀಗಾಗಿ ತಮ್ಮ ಆಹಾರ ವಿಧಾನ ಮತ್ತು ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಾರೆ. ಇದರಿಂದ ಈ ಮಹಿಳೆಯರು ಮತ್ತು ಯುವತಿಯರಲ್ಲಿ ಮಾನಸಿಕ ಮತ್ತು ದೈಹಿಕ ಖಾಯಿಲೆಗಳು ಸಾಮಾನ್ಯವಾಗುತ್ತಿದೆ. ಇಂತಹುದೊಂದು ಆಘಾತಕಾರಿ ಮಾಹಿತಿಯನ್ನು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ಜನ್ನತ್ ಘಜ್ನವಿ ಎಂಬುವವರ ಅಧ್ಯಯನ ಹೊರಹಾಕಿದೆ.

ತಮ್ಮ ಅಧ್ಯಯನಕ್ಕಾಗಿ ಜನ್ನತ್ ಘಜ್ನವಿ ಮತ್ತು ವಿವಿಯ ಮತ್ತೋರ್ವ ಸಹಾಯಕ ಪ್ರಾಧ್ಯಾಪಕ ಲರಮಿ ಟೇಲರ್ ಅವರು ಟ್ವಿಟ್ಟರ್, ಫೇಸ್ ಬುಕ್ ಮತ್ತು ಪಿಂಟರೆಸ್ಟ್ ಜಾಲತಾಣಗಳಲ್ಲಿನ ಸುಮಾರು 300ಕ್ಕೂ ಅಧಿಕ ಫೊಟೋಗಳ ಪರೀಕ್ಷೆ ನಡೆಸಿದ್ದು, ಪರೀಕ್ಷೆ ವೇಳೆ ಹಲವು ಪ್ರಮುಖ ಅಂಶಗಳ ಬೆಳಕಿಗೆ ಬಂದಿವೆ. ಸಾಮಾಜಿಕ ಜಾಲತಾಣಗಳಿಂದ ಪ್ರೇರಿತರಾದ ಮಹಿಳೆಯರು ಮತ್ತು ಯುವತಿಯರು ತೆಳ್ಳಗೆ ಕಾಣಲು ತಮ್ಮ ಜೀವನ ಶೈಲಿಯಲ್ಲಿ ಹಲವು ಅಪಾಯಕಾರಿ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗುತ್ತಾರೆ. ಮಿತಿ ಮೀರಿದ ಪಥ್ಯ, ಅತಿಯಾದ ವ್ಯಾಯಾಮದಂತಹ ಹಾನಿಕಾರಕ ಅಭ್ಯಾಸಗಳಿಂದ ಅವರ ದೈಹಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಆ ಮೂಲಕ ದೈಹಿಕ ಖಾಯಿಲೆಗಳು ಮತ್ತು ಆಹಾರ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ವರದಿ ಹೇಳಿದೆ.

ಜನ್ನತ್ ಘಜ್ನವಿ ಪರೀಕ್ಷೆಗೊಳಪಡಿಸಿದ ಪೋಸ್ಟ್ ಗಳ ಪೈಕಿ ಬಹುತೇಕ ಪೋಸ್ಟ್ ಗಳಲ್ಲಿನ ಫೋಟೋಗಳಲ್ಲಿ ತಲೆ ಭಾಗವನ್ನು ಕತ್ತರಿಸಿ ದೇಹದ ಇತರೆ ಭಾಗಗಳನ್ನು ಪೋಸ್ಟ್ ಮಾಡಲಾಗಿದೆ. ಆ ಮೂಲಕ ತಮ್ಮ ತೆಳ್ಳಗಿನ ದೇಹ ಪ್ರಚಾರಕ್ಕೆ ಮಹಿಳೆಯರು ಮತ್ತು ಯುವತಿಯರು ಮುಂದಾಗಿರುವುದು ಕಂಡುಬಂದಿದೆ. ಇಂತಹ ಪೋಸ್ಟ್ ಗಳಿಂದ ಪ್ರೇರಿತರಾಗುವ ಮಹಿಳೆಯರು ತಾವೂ ಕೂಡ ಹೀಗೆಯೆ ಕಾಣಬೇಕು ಎಂದು ಬಯಸುತ್ತಾರೆ. ಅಲ್ಲದೆ ತಮ್ಮ ಬಯಕೆ ಈಡೇರಿಕೆಗಾಗಿ ಮುಂದಾಗುವ ಮಹಿಳೆಯರಲ್ಲಿ ಅಪಾಯಕಾರಿ ನಡವಳಿಕೆಗಳು ಕಂಡುಬಂದಿದ್ದು, ಅತಿಯಾದ ಪಥ್ಯ, ಅತಿಯಾದ ವ್ಯಾಯಾಮದಂತಹ ಲಕ್ಷಣಗಳು ಗೋಚರಿಸಿವೆ. ಹೀಗಾಗಿ ಇಂತಹ ಮಹಿಳೆಯರಲ್ಲಿ ದೈಹಿಕ ಅಸಮತೋಲನದಂತಹ ತೊಂದರೆಗಳು ಕಾಣಸಿಗುತ್ತವೆ ಎಂದು ಘಜ್ನವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com