"ಹಾನಿಕರ ಪ್ಲಾಸ್ಟಿಕ್ ಅಕ್ಕಿ"ಯನ್ನು ಮನೆಯಲ್ಲೇ ಗುರುತಿಸುವ ಸುಲಭ ವಿಧಾನ ಇಲ್ಲಿದೆ!

ಕಳೆದೊಂದು ವಾರದಿಂದ ದೇಶ ಮಾತ್ರವಲ್ಲದೇ ರಾಜ್ಯದ ವಿವಿಧ ಮೂಲೆಗಳಿಂದಲೂ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಮಾಧ್ಯಮಗಳಲ್ಲೂ ಈ ಬಗ್ಗೆ ವ್ಯಾಪಕ ಸುದ್ದಿಗಳು ಪ್ರಸಾರವಾಗುತ್ತಿವೆ.
ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವ ಬಗೆ
ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವ ಬಗೆ

ಬೆಂಗಳೂರು: ಕಳೆದೊಂದು ವಾರದಿಂದ ದೇಶ ಮಾತ್ರವಲ್ಲದೇ ರಾಜ್ಯದ ವಿವಿಧ ಮೂಲೆಗಳಿಂದಲೂ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಮಾಧ್ಯಮಗಳಲ್ಲೂ ಈ ಬಗ್ಗೆ ವ್ಯಾಪಕ ಸುದ್ದಿಗಳು ಪ್ರಸಾರವಾಗುತ್ತಿವೆ.

ಅಕ್ಕಿಯ ಬೆಲೆ ಗಗನಕ್ಕೇರುತ್ತಿದ್ದಂತೆಯೇ ಕಲಬೆರಕೆ ಮಾಫಿಯಾ ಕಣ್ಣು ಅಕ್ಕಿಯ ಮೇಲೆ ಬಿದ್ದಿದ್ದು, ಇದೀಗ ನಿತ್ಯ ಸೇವಿಸುವ ಅಕ್ಕಿಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರಣ ಮಾಡಿ ಮಾರುಕಟ್ಟೆದೆ ಬಿಡುಗಡೆ  ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ನಿತ್ಯ ಬಳಕೆಯ ವಸ್ತುವಾದರೂ ಇದು ದೇಹ ಸೇರಿದರೆ ಆರೋಗ್ಯದ ಮೇಲೆ ಭಾರಿ ಪ್ರಮಾಣ ದುಷ್ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಈ ಪ್ಲಾಸ್ಟಿಕ್ ಅಕ್ಕಿ ನಿಜವಾದ ಅಕ್ಕಿಯನ್ನು ಎಷ್ಟು ಮಟ್ಟಿಗೆ  ಚೆನ್ನಾಗಿ ಹೋಲುತ್ತದೆ ಎಂದರೆ ಕಣ್ಣಿನಲ್ಲಿಯೇ ಗುಣಮಟ್ಟ ಅಳೆಯುವ ಅಕ್ಕಿ ವ್ಯಾಪಾರಿಗಳೂ ಸಾಕಷ್ಟು ಬಾರಿ ಮೋಸ ಹೋಗಿದ್ದಾರೆ.

ಈ ಪ್ಲಾಸ್ಟಿಕ್ ಅಕ್ಕಿ ಮಾಮೂಲಿ ಅನ್ನದಂತೆಯೇ ಬೆಂದು ಅರಳುತ್ತದೆ. ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳಿ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೂ ನಾವು ಈ ಸುದ್ದಿಯನ್ನು ವದಂತಿ ಎಂದು ನಿರ್ಲಕ್ಷಿಸಲು  ಸಾಧ್ಯವೇ ಇಲ್ಲ. ಆದರೂ ಈ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದ್ದು, ಸುಲಭ ವಿಧಾನದಲ್ಲಿ ಕಲಬೆರಕೆ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸಬಹುದಾದ ಕೆಲ ಟಿಪ್ಸ್ ಗಳು ಇಲ್ಲಿವೆ.

1. ಒಂದು ದೊಡ್ಡ ಚಮಚದಷ್ಟು ಅನುಮಾನವಿರುವ ಅಕ್ಕಿಯನ್ನು ತೆಗೆದುಕೊಂಡು ಒಂದು ಬೆಂಕಿ ಕಡ್ಡಿ ಗೀರಿ ಬೆಂಕಿಯ ಜ್ವಾಲೆ ನೇರವಾಗಿ ಅಕ್ಕಿಯನ್ನು ತಾಕುವಂತೆ ಮಾಡಿ. ಒಂದು ವೇಳೆ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೆ ನೀವು  ತೆಗೆದುಕೊಂಡ ಅಕ್ಕಿಯಲ್ಲಿ ಪ್ಲಾಸ್ಟಿಕ್ ಇದೆ ಎಂದು ಅರ್ಥ. ನಿಜವಾದ ಅಕ್ಕಿಯಾದರೆ ಜ್ವಾಲೆ ತಾಕಿದ ಭಾಗ ಸುಟ್ಟು ಬೇರೆಯೇ ವಾಸನೆ ಬರುತ್ತದೆ.

2. ಒಂದು ದೊಡ್ಡ ಚಮಚದಷ್ಟು ಅಕ್ಕಿಯನ್ನು ಒಂದು ಕಾವಲಿಯ ಮೇಲೆ ಇರಿಸಿ ಒಣಗಿರುವಂತೆಯೇ ಹುರಿಯಿರಿ. ನಿಜವಾದ ಅಕ್ಕಿಯಾದರೆ ಬಾಣಲಿ ತಾಕಿದ ಭಾಗ ಕಂದು ಬಣ್ಣ ತಳೆಯುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿಯಾದರೆ ಅಕ್ಕಿ  ಕಾವಲಿಗೆ ಅಂಟಿದ ಭಾಗ ಕರಗಿ ಚಿಕ್ಕ ವೃತ್ತಾಕಾರದ ಪದರ ರೂಪುಗೊಳ್ಳುತ್ತದೆ.

3. ಒಂದು ದೊಡ್ಡ ಚಮಚದಷ್ಟು ಅಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಲಕಿ. ನಿಜವಾದ ಅಕ್ಕಿ ನೀರಿನಲ್ಲಿ ಮುಳುಗುತ್ತದೆ ಹಾಗೂ ಅಡ್ಡಲಾಗಿರುತ್ತದೆ. ಪ್ಲಾಸ್ಟಿಕ್ ಅಕ್ಕಿಯಾದರೆ ನೀರಿನಲ್ಲಿ ತೇಲುತ್ತದೆ. ಒಂದು ವೇಳೆ ತೇಲದೇ  ಇದ್ದರೂ ಅಕ್ಕಿಯಂತೆ ತಕ್ಷಣವೇ ಮುಳುಗದೇ ತಿರುಗುತ್ತಿರುವ ನೀರಿನಲ್ಲಿ ಕೊಂಚ ಹೊತ್ತು ತಿರುಗುತ್ತಲೇ ಇರುತ್ತದೆ ಹಾಗೂ ಇನ್ನೂ ಒಂದು ವೇಳೆ ಆಳಕ್ಕಿಳಿದರೂ ಅಕ್ಕಿಯಂತೆ ಅಡ್ಡಲಾಗಿರದೇ ನೇರವಾಗಿ ನಿಲ್ಲುತ್ತದೆ.

4. ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಕುದಿನೀರಿನಲ್ಲಿ ಹಾಕಿ ಅನ್ನ ಮಾಡಿ. ಕೊಂಚ ಹೊತ್ತಿನ ಬಳಿಕ ಪಾತ್ರೆಯಲ್ಲಿರುವ ನೀರಿನ ಮೇಲ್ಪದರವನ್ನು ಗಮನಿಸಿ. ಇಲ್ಲಿ ದಪ್ಪನೆಯ ಬಿಳಿಯಾದ ಪದರವೊಂದು ರೂಪುಗೊಳ್ಳುತ್ತಿರುತ್ತದೆ. ಇದು  ಪ್ಲಾಸ್ಟಿಕ್ ಕರಗಿ ಗಾಳಿಗೆ ಗಟ್ಟಿಯಾದ ಪದರವಾಗಿರುತ್ತದೆ. ಹೀಗಾದಾಗ ನಿಮ್ಮ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಅರ್ಥ.

5. ಕೆಲವು ಪ್ಲಾಸ್ಟಿಕ್ ಅಕ್ಕಿ ಮೇಲಿನ ಯಾವುದೇ ವಿಧಾನಕ್ಕೆ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಇದನ್ನು ಕಂಡುಕೊಳ್ಳಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಅನ್ನವನ್ನು ಬೇಯಿಸಿ ಎರಡು ದಿನಗಳ ಕಾಲ ಗಾಳಿಗೆ ತೆರೆದಿಡಿ. ನಿಜವಾದ  ಅಕ್ಕಿಯಾದರೆ ಒಂದೇ ದಿನಕ್ಕೆ ಬೂಸು ಬರುತ್ತದೆ. ಎರಡನೆಯ ದಿನಕ್ಕೆ ಬೂಸು, ಶಿಲೀಂಧ್ರ ಎಲ್ಲವೂ ಬರಲೇಬೇಕು. ಆದರೆ ಪ್ಲಾಸ್ಟಿಕ್ ಅಕ್ಕಿಗೆ ಯಾವುದೇ ವಾಸನೆ ಬರುವುದಿಲ್ಲ.

6. ತಮಿಳುನಾಡು ಸರಕಾರದ ಆಹಾರ ವಿಭಾಗದ ಅಧಿಕಾರಿಗಳು ನೀಡಿರುವ ಸಲಹೆಯ ಪ್ರಕಾರ ಒಂದು ಮುಷ್ಟಿಯಷ್ಟು ಬಿಸಿ ಅನ್ನವನ್ನು ಕೈಬೆರಳುಗಳಿಂದಲೇ ಉಂಡೆಕಟ್ಟಿ ಸತತವಾಗಿ ಒಂದು ಅಥವಾ ಎರಡು ನಿಮಿಷಗಳ ಕಾಲ  ಚೆಂಡಿನ ಆಕೃತಿ ಬರಿಸಿ. ತಣ್ಣಗಾದ ಬಳಿಕ ಈ ಚೆಂಡನ್ನು ಮೇಜಿನ ಮೇಲೆ ಬಡಿಯಿರಿ. ಒಂದು ವೇಳೆ ಇದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಚೆಂಡಿನಂತೆಯೇ ಪುಟಿಯುತ್ತದೆ, ಒಡೆಯುವುದಿಲ್ಲ. ನಿಜವಾದ ಅಕ್ಕಿಯನ್ನು ಎಷ್ಟೇ ಉಂಡೆಗಟ್ಟಿದರೂ  ಕೆಳಗೆ ಬಿದ್ದ ತಕ್ಷಣ ಒಡೆದು ಚೂರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com